ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೈಲು: ಪ್ರಶ್ನೆಗಳ ಸಾಲು !

Last Updated 26 ಫೆಬ್ರುವರಿ 2011, 6:10 IST
ಅಕ್ಷರ ಗಾತ್ರ

ಕೋಲಾರ: ಈ ಬಾರಿಯ ರೈಲು ಬಜೆಟ್ ಜಿಲ್ಲೆಗೆ ಸಿಹಿ-ಕಹಿಯ ಸಮ್ಮಿಶ್ರ ಕೊಡುಗೆ ನೀಡಿದೆ. ಬಂಗಾರಪೇಟೆಯಿಂದ ಬೆಂಗಳೂರಿಗೆ ಮತ್ತು ಕೋಲಾರದಿಂದ ಬೆಂಗಳೂರಿಗೆ -ನೂತನ ರೈಲನ್ನು ಬಜೆಟ್ ಘೋಷಿಸಿದೆ. ಮಾರಿಕುಪ್ಪಂ-ಬಂಗಾರಪೇಟೆ ನಡುವೆಯೂ ಹೊಸ ರೈಲು ಸಂಚರಿಸಲಿದೆ. ರೈಲ್ವೆ ಕೋಚ್ ಕಾರ್ಖಾನೆಯೂ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವುದು ಮತ್ತೊಂದು ವಿಶೇಷ.

ಹೊಸ ರೈಲಿನ ಘೋಷಣೆ ಸಂತಸದ ವಿಚಾರವೇ ಸರಿ. ಆದರೆ, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕೋಲಾರ-ಚಿಕ್ಕಬಳ್ಳಾಪುರ ನಡುವಿನ ಗೇಜ್ ಪರಿವರ್ತನೆ ಕಾಮಗಾರಿ ಮಾತ್ರ ಈ ಸಂತಸವನ್ನು ಅಣಕಿಸುತ್ತಿದೆ! ಕೋಲಾರ-ಚಿಕ್ಕಬಳ್ಳಾಪುರ ಮಾರ್ಗದ ನಡುವೆ ಒಂದೇ ಲೇನಿನ ಮಾರ್ಗವೇ ಇನ್ನೂ ಪೂರ್ಣಗೊಂಡಿಲ್ಲ. ಹಲವು ವರ್ಷಗಳಿಂದ ಕಾಮಗಾರಿ ಕುಂಟುತ್ತಲೇ ಇದೆ.

ಬಜೆಟ್‌ನಲ್ಲಿ ಕೋಲಾರ-ವೈಟ್‌ಫೀಲ್ಡ್ ನಡುವಿನ ರೈಲು ಮಾರ್ಗಕ್ಕೆ ಹಣ ಮಂಜೂರಾಗಿದೆ. ಮಾರ್ಗದ ಸಮೀಕ್ಷೆ ಈಗಾಗಲೇ ಮುಗಿದಿದೆ. ಈ ಮಾರ್ಗವನ್ನು ಬೆಂಗಳೂರು ಮುಖ್ಯ ರೈಲು ನಿಲ್ದಾಣದವರೆಗೂ ವಿಸ್ತರಿಸಬೇಕೆಂಬುದು ಎಲ್ಲ ಪ್ರಯಾಣಿಕರ ಆಗ್ರಹ. ಹಾಗಾದರೆ ಮಾತ್ರ ಬೆಂಗಳೂರಿಗೆ ತೆರಳುವವರು ಬಂಗಾರಪೇಟೆ ಮೂಲಕವೇ ತೆರಳುವ ಅನಿವಾರ್ಯತೆ ತಪ್ಪುತ್ತದೆ.
ಹೊಸ ರೈಲು: ಕೋಲಾರ-ಬೆಂಗಳೂರು ನಡುವೆ ಹೊಸ ರೈಲು ಸಂಚರಿಸಲಿದೆ ಎಂಬ ಸಂಗತಿ ಕೋಲಾರದ ಮಂದಿಯಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ.

ಪ್ರಸ್ತುತ ಕೋಲಾರ ನಿಲ್ದಾಣದಿಂದ ಇರುವ ಪುಷ್‌ಪುಲ್ ರೈಲಿನಲ್ಲಿ ಮೂಲಸೌಕರ್ಯವೇ ಇಲ್ಲ. ಅದು ಬೆಂಗಳೂರಿನ ದಂಡು ನಿಲ್ದಾಣದವರೆಗೆ ಮಾತ್ರ ಹೋಗುತ್ತಿದೆ. ಅದನ್ನು ಮುಖ್ಯ ರೈಲು ನಿಲ್ದಾಣದವರೆಗೂ ವಿಸ್ತರಿಸಬೇಕು. ಎರಡೂವರೆ ದಶಕದಿಂದ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಎಚ್.ಮುನಿಯಪ್ಪನವರು ಈ ಕಡೆಗೆ ಹೆಚ್ಚು ಗಮನ ಹರಿಸಬೇಕಿತ್ತು ಎಂಬ ಅಭಿಪ್ರಾಯ-ಆಗ್ರಹ ಕಳೆದ ವರ್ಷ ರೈಲ್ವೆ ಬಜೆಟ್ ಸಂದರ್ಭದಲ್ಲೂ ಕೇಳಿ ಬಂದಿತ್ತು.

ಬೆಳಿಗ್ಗೆ 7.15ಕ್ಕೆ ಹೊರಡುವ ಈ ರೈಲು 9.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ನಂತರ ಸಂಜೆ.5.55ಕ್ಕೆ ಅಲ್ಲಿಂದ ಪಯಣ ಬೆಳೆಸಿ ರಾತ್ರಿ 8.20ಕ್ಕೆ ಕೋಲಾರಕ್ಕೆ ಬರುತ್ತಿತ್ತು. ಇತ್ತೀಚೆಗಷ್ಟೆ ಈ ರೈಲು ಮಧ್ಯಾಹ್ನದ ಅವಧಿಯಲ್ಲೂ ಕೋಲಾರ-ಬೆಂಗಳೂರು ನಡುವೆ ಸಂಚರಿಸುತ್ತಿದೆ. ಕಂಟೋನ್ಮೆಂಟ್‌ನಿಂದ ಬೆಳಿಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬಂಗಾರಪೇಟೆಗೆ ಬರುತ್ತದೆ. 3 ಗಂಟೆಗೆ ಬಂಗಾರಪೇಟೆ ಬಿಟ್ಟು ಬೆಂಗಳೂರಿನ ಕಂಟೋನ್ಮೆಂಟ್‌ಗೆ ಸಂಜೆ 5.15ಕ್ಕೆ ಬರುತ್ತದೆ.

ಪ್ರಶ್ನೆಗಳು: ಕೋಲಾರ-ಬೆಂಗಳೂರು ನಡುವೆ ಪ್ರಸ್ತುತ ಘೋಷಿಸಿರುವ ಹೊಸ ರೈಲು ಕೋಲಾರದಿಂದ ಬೆಂಗಳೂರು ಮುಖ್ಯ ರೈಲು ನಿಲ್ದಾಣದವರೆಗೂ ಸಂಚರಿಸುತ್ತದೆಯೆ? ಈ ಪ್ರಶ್ನೆಗೆ ಉತ್ತರಹೌದು ಎಂದಾದರೆ, ಪ್ರಯಾಣಿಕರಿಗೆ ಸಂತಸ ಕಟ್ಟಿಟ್ಟ ಬುತ್ತಿ. ಇಲ್ಲವಾದರೆ ಮತ್ತದೇ ನಿರಾಶೆ ಖಚಿತ.ಈಗ ಸಂಚರಿಸುತ್ತಿರುವ ರೈಲಿನ ವೇಳಾಪಟ್ಟಿ ಪ್ರಯಾಣಿಕರ ಸ್ನೇಹಿಯಾಗಿಲ್ಲ ಎಂಬ ದೂರಿದೆ. ಬೆಳಿಗ್ಗೆ 7.30ಕ್ಕೆ ಕೋಲಾರದಿಂದ ಹೊರಡುತ್ತಿದ್ದ ರೈಲು ಇನ್ನೂ 15 ನಿಮಿಷ ಮುಂಚೆಯೇ ಹೊರಡುತ್ತಿದೆ.

ಈ ವೇಳಾಪಟ್ಟಿ ಬದಲಿಸುವಂತೆ ಕೋರಿ ಪ್ರಯಾಣಿಕರು ಸಲ್ಲಿಸಿದ ಮನವಿಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಹೊಸ ರೈಲಿನ ವೇಳಾಪಟ್ಟಿ ಪ್ರಯಾಣಿಕ ಸ್ನೇಹಿಯಾಗಿರುತ್ತದೆಯೆ ಎಂಬ ಪ್ರಶ್ನೆಯೂ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT