ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ್ತಿಲು ದಾಟಿದ ಹುಡುಗಿ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೆಟ್ರೊ ನಗರಗಳಲ್ಲಿ ಏಕಾಂಗಿ ಬದುಕು...

ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಯಂತಹ ಮೆಟ್ರೊ ನಗರಗಳಲ್ಲಿ ಅವಿವಾಹಿತ ಮಗಳು ಒಬ್ಬಳೇ ಇದ್ದಾಳೆ. ಒಂದೊಳ್ಳೆ ಉದ್ಯೋಗ, ಕೈತುಂಬ ಸಂಬಳ ಅವಳಿಗೇನು ಕಡಿಮೆ? ಅವಳು ತುಂಬಾ ಬೋಲ್ಡ್ ಬೇರೆ, ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲ ಗಟ್ಟಿಗಳು...

ಇದೆಲ್ಲ ಸತ್ಯವಾಗಿದ್ದರೂ ಕೂಡ ನಿಮ್ಮ ಮಗಳಿಗೆ ನಿಮ್ಮ ಪ್ರೀತಿ, ಕಾಳಜಿ, ಸಾಂತ್ವನದ ಅಗತ್ಯವಿರುತ್ತದೆ ಎಂಬುದನ್ನು ಮರೆಯಬೇಡಿ. ನಿಮ್ಮ ಅನುಪಸ್ಥಿತಿ ಅವಳ ಆತ್ಮಬಲವನ್ನು ಕುಗ್ಗಿಸದಿರಲಿ, ತನ್ನೆಲ್ಲ ತಳಮಳ, ಬೇಗುದಿಗಳಲ್ಲಿ ತಾನೊಬ್ಬಳೇ, ತನ್ನೊಂದಿಗೆ ಯಾರೂ ಇಲ್ಲ ಎಂಬ ಭಾವ ಅವಳನ್ನು ಹತಾಶೆಗೆ ನೂಕದಿರಲಿ... ಅವಳ ಸಾಧನೆಗೆ ಮೆಟ್ಟಿಲಾಗುವ, ಅವಳ ಆತ್ಮವಿಶ್ವಾಸಕ್ಕೆ ಸ್ಫೂರ್ತಿ ತುಂಬುವ ಕೆಲಸ ನಿಮ್ಮಿಂದ ಆಗಲಿ....

 

ಆಫೀಸಿನಲ್ಲಿ ಇರುವಷ್ಟು ಹೊತ್ತು ಬರೀ ಒತ್ತಡ... ಹೇಗೆ ಕೆಲಸ ಮಾಡಿದರೂ ಗುನುಗುವ ಬಾಸ್, ಇತ್ತ ಸಹೋದ್ಯೋಗಿಗಳ ಕೊಂಕು ಮಾತು ಬೇರೆ. ಸಂಜೆಯಾಗುತ್ತಿದ್ದಂತೆ ಮನೆ ಸೇರಿ ಅಮ್ಮನ ಮಡಿಲಿಗೆ ಒರಗಿ ದಿನದ ದಣಿವನ್ನೆಲ್ಲ ಗೊಡವಿಕೊಂಡು ಬಿಡೋಣ ಅನ್ನಿಸುತ್ತೆ.... ಆದರೆ ನಾನಿರುವುದು ಪಿ.ಜಿ.ಯಲ್ಲಿ. ಅಮ್ಮನ ಅಕ್ಕರೆ ಇಲ್ಲ, ಅಪ್ಪನ ಸಾಂತ್ವನವಿಲ್ಲ... ಕಣ್ಣೀರಾಗುತ್ತಾಳೆ ಕಾಲ್ ಸೆಂಟರ್ ಉದ್ಯೋಗಿ ಶ್ವೇತಾ.

ಏನೊ ಸಾಧಿಸಬೇಕು ಅಂದ್ಕೊಂಡು ಅಮ್ಮ-ಅಪ್ಪನ ಬಿಟ್ಟು ಉದ್ಯೋಗ ಅರಸಿ ಬೆಂಗ್ಳೂರಿಗೆ ಬಂದೆ. ಟಿವಿ ಸಿರಿಯಲ್ಲು ನೋಡ್ಕೊಂಡು ಅಮ್ಮ ಮಾಡಿ ಹಾಕಿದ ತಿಂಡಿ ಸವಿತಾ ಹಾಯಾಗಿ ಕಾಲ ಕಳೆಯೋಣ ಅಂತ ಕೆಲವೊಮ್ಮೆ ಅನಿಸುತ್ತೆ. ಆದ್ರೆ ಹಾಗಂತ ಇದೆಲ್ಲವನ್ನು ಬಿಟ್ಟು ಓಡಿ ಹೋಗೋಕೆ ಆಗಲ್ಲ. ಅಂದ್ಕೊಂಡಿದ್ದನ್ನ ಸಾಧಿಸಬೇಕಲ್ಲ? ಎನ್ನುತ್ತಾರೆ ಖಾಸಗಿ ಚಾನೆಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಪವಿತ್ರಾ.

ಹೀಗೆ ಮಾತಿಗೆಳೆದರೆ ಕಣ್ಣೀರಾಗುತ್ತಾರೆ ಬ್ರೇವ್ ಅಂಡ್ ಬೋಲ್ಡ್ ಸಿಟಿ ಗರ್ಲ್ಸ್... ನಗರದ ಪಿ.ಜಿ.ಗಳಲ್ಲೊ, ರೂಮು ಅಥವಾ ಮನೆ ಬಾಡಿಗೆಗೆ ತೆಗೆದುಕೊಂಡೊ ವಾಸಿಸುವ ಹುಡುಗಿಯರು ಮಾನಸಿಕವಾಗಿ ಏಕಾಂಗಿಗಳೇ. ಇಂತಹ ಸಿನಿಕ ಬದುಕಿನ ಬಗ್ಗೆ ಅವರ ಮನದಾಳದ ಮಾತುಗಳು ನಿಜಕ್ಕೂ ಮನಕಲಕುವಂತಿವೆ.

ಶತಮಾನಗಳ ಹಿಂದಿನ ಮಾತು. ಮಗಳು ಹೊಸ್ತಿಲು ದಾಟುವುದೆಂದರೆ ಅವಳು ಗಂಡನ ಮನೆಗೆ ಹೋಗುವಾಗಲೇ. ಅಮ್ಮನ ಮಡಿಲನ್ನೂ-ಅಪ್ಪನ ನೆರಳನ್ನೂ, ಒಡಹುಟ್ಟಿದವರ ಅಕ್ಕರೆಯನ್ನೂ ಬಿಟ್ಟು ಹೊಸ್ತಿಲು ದಾಟುವಾಗ ಹುಡುಗಿ ಕಣ್ಣೀರಾಗುತ್ತಿದ್ದ ಮಾತದು. ಜೊತೆಗೆ ಕೈಹಿಡಿದವನ ಸಾಂತ್ವನವಿದ್ದಾಗ್ಯೂ...

ಆದರೆ ಕಾಲ ಬದಲಾಯಿತು. ಹುಡುಗಿ ಹೊಸ್ತಿಲು ದಾಟುವ ಕಾರಣಗಳೂ ಬದಲಾದವು. ಅವಳು ಹೊಸ್ತಿಲು ದಾಟಿ ಹೋಗುವುದು ಕೇವಲ ಗಂಡನ ಮನೆಗೆ ಹೋಗುವ ಶುಭ ಸಂದರ್ಭವಾಗಿ ಉಳಿದಿಲ್ಲ. ಬದಲಿಗೆ ಉನ್ನತ ಶಿಕ್ಷಣ ಅಥವಾ ಉತ್ತಮ ಉದ್ಯೋಗದ ಬೆನ್ನು ಹತ್ತಿ ಅವಳು ಹೊಸ್ತಿಲು ದಾಟುತ್ತಿದ್ದಾಳೆ, ಅದೂ ಏಕಾಂಗಿಯಾಗಿ...

ಹೀಗೆ ಮೆಟ್ರೊ ನಗರಗಳಲ್ಲಿ ಒಬ್ಬಂಟಿಯಾಗಿ ಬದುಕು ಸಾಗಿಸುತ್ತಿರುವ ಹುಡುಗಿಯರು ತಮ್ಮ ನೋವು, ನಲಿವುಗಳನ್ನು ಯಾರೊಂದಿಗೆ ಹಂಚಿಕೊಳ್ಳುತ್ತಾರೆ? ಔದ್ಯೋಗಿಕ ಅಥವಾ ವೈಯಕ್ತಿಕ ಸಮಸ್ಯೆ-ಸವಾಲುಗಳಿಗೆ ಇವರೊಂದಿಗೆ ನಿಲ್ಲುವವರಾರು? ಕಾಡೊ ಒಂಟಿತನಕ್ಕೆ ಪರಿಹಾರವೇನು? ಬೇಸರ, ಆತಂಕ, ಖಿನ್ನತೆಗಳನ್ನು ಅವರು ಹೇಗೆ ಸಂಭಾಳಿಸಿಯಾರು? ಈ ಪ್ರಶ್ನೆಗಳು ಜಠಿಲವಾಗಿವೆ.

ಕುಟುಂಬ ನೀಡುವ ಕಂಫರ್ಟ್ ದೊಡ್ಡದು. ಅದರ ಮುಂದೆ ಈ ಸಂಪಾದನೆ, ಸಾಧನೆ. ಮೆಟ್ರೊ ಜೀವನ ಏನೂ ಬೇಡ ಅನಿಸುವುದು ಸಹಜವೇ. ಅಷ್ಟಕ್ಕೂ ಹಣ ಎಲ್ಲ ರೀತಿಯ ಕೊರತೆಗಳನ್ನೂ ತುಂಬಲಾರದು.

ಅಮ್ಮ-ಅಪ್ಪನ ಪ್ರೀತಿ, ಹತ್ತಿರವಿದ್ದು ಅವರು ನೀಡುವ ಮಾನಸಿಕ ಬೆಂಬಲಕ್ಕೆ ಯಾವುದೂ ಸಾಟಿಯಾಗಲಾರದು. ಆದರೆ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಾಗೂ ಸಮಾಜದಲ್ಲಿ ಗುರುತಿಸಿಕೊಳ್ಳುವ ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಸಾಧಿಸುವ ಕನಸು ಕಂಡು ಮನೆ ಬಿಟ್ಟು ಬರುವ ಹುಡುಗಿಯರು ಇದೆಲ್ಲವನ್ನು ಎದುರಿಸಬೇಕಾದುದು ಅನಿವಾರ್ಯ. 

ಜವಾಬ್ದಾರಿಯುತ ಪಾಲಕರಾಗಿ...
ಹೀಗೆ ಏಕಾಂಗಿಯಾಗಿ ನಗರಗಳಲ್ಲಿ ವಾಸವಿರುವ ಮಗಳ ಮೇಲೆ ಒಂದಲ್ಲ ನಿಮ್ಮ ಎರಡೂ ಕಣ್ಣುಗಳಿರಬೇಕು. `ಒಂದೊಳ್ಳೆ ಉದ್ಯೋಗ, ಕೈತುಂಬ ಸಂಬಳ ಅವಳಿಗೇನು ಕೊರತೆ?~ ಎನ್ನುವ ಅಥವಾ `ಅವಳು ತುಂಬಾ ಬೋಲ್ಡ್ ಬೇರೆ, ಯಾರಿಗೂ ಹೆದರೋಳಲ್ಲ, ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲ ಗಟ್ಟಿಗಳು~ ಎಂಬ ಉದಾಸೀನತೆ ಬೇಡ.

ಅವಳು ಎಷ್ಟೇ ಗಟ್ಟಿಗಳಾಗಿದ್ದರೂ, ಎಷ್ಟೇ ಎದೆಗಾರಿಕೆ ಇದ್ದರೂ ಮೆಟ್ರೊ ನಗರಗಳ ದಾವಂತದ ಜೀವನ ಶೈಲಿ, ತಲೆ ಸಿಡಿಯುವ ಕೆಲಸ, ಭಾವನಾತ್ಮಕ ಬೆಸೆತಗಳೇ ಇಲ್ಲದ ಇಲ್ಲಿನ ಯಾಂತ್ರಿಕ ಜೀವನ, ಮುಂದುವರೆದ ಸಮಾಜದ ದ್ವಂದ್ವ ನೀತಿ... ಅವಳಲ್ಲಿ ಭ್ರಮನಿರಸನವನ್ನು ಉಂಟುಮಾಡಬಹುದು, ಮಾತ್ರವಲ್ಲ, ಬದುಕಿನ ಬಗ್ಗೆ ಜಿಗುಪ್ಸೆ, ಬೇಸರ ಮೂಡಬಹುದು...

ಹೌದು, ಉನ್ನತ ಶಿಕ್ಷಣ, ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ, ಸ್ವಾತಂತ್ರ್ಯ ಎಲ್ಲ ಇದ್ದಾಗ್ಯೂ ಮಹಾನಗರಗಳಲ್ಲಿ ಒಂಟಿಯಾಗಿ ಬದುಕುವ ಅದೆಷ್ಟೊ ಹುಡುಗಿಯರು ಅಗಣಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲಸದ ಒತ್ತಡ, ಪೈಪೋಟಿ, ಕಚೇರಿಯ ವಾತಾವಾರಣ, ಸಹೋದ್ಯೋಗಿ ಅಥವಾ ಬಾಸ್‌ನ ವರ್ತನೆ... ಕಾರಣಗಗಳು ಹಲವು.

ತನ್ನ ಜನ, ತನ್ನ ಕುಟುಂಬ, ತನ್ನೂರಿನ ಮೋಹದಿಂದ ದೂರ ಉಳಿದು ಅನಾಮಿಕಳಂತೆ ಬದುಕುವುದು ಒಂದು ಹೆಣ್ಣು ಜೀವಕ್ಕೆ ಯಾವತ್ತಿದ್ದರೂ ಕಷ್ಟದ ಮಾತೇ. ಎಲ್ಲಿದ್ದರೂ ಸಮಸ್ಯೆಗಳನ್ನು ತಡೆಯುವಂತಿಲ್ಲ.

ಅವುಗಳಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅದರಲ್ಲೂ ಮಹಾನಗರಗಳಲ್ಲಿನ ಸವಾಲುಗಳು ಹೆಚ್ಚು ತೀಕ್ಷ್ಣ ಹಾಗೂ ಕಠಿಣ. ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದೂ ಸವಾಲಿನ ಸಂಗತಿ. ಆದರೆ ಅವಳ ಬೆಂಬಲಕ್ಕೆ ನೀವೂ ಇದ್ದೀರಿ ಎನ್ನುವ ಸಂಗತಿ ಅವಳಲ್ಲಿ ಬಲ ತುಂಬಬಲ್ಲದು.

ನಿಮ್ಮ ಮಗಳೇ ನಿಮ್ಮ ಬಳಿ ಬರಲಿ ಎಂದು ಕಾಯುತ್ತ ಕುಳಿತುಕೊಳ್ಳುವ ಬದಲು ಸಮಯ ಸಿಕ್ಕಾಗ ನೀವೇ ಅವಳ ಬಳಿ ಹೋಗಿ ಬನ್ನಿ. ತಿಂಗಳಿಗೆ ಒಂದು ಬಾರಿಯಾದರೂ ನಿಮ್ಮ ಮಗಳೊಂದಿಗೆ ಒಂದೆರಡು ದಿನ ಉಳಿದು ಬರುವುದರಿಂದ ಅವಳಿಗೆ ಮನೋಬಲ ಹೆಚ್ಚಿದಂತಾಗಿ ತಾನು ಒಂಟಿ ಎಂಬ ಭಾವ ದೂರಾಗಬಹುದು.

ಅವಳ ಹುಟ್ಟು ಹಬ್ಬಕ್ಕೆ ದಿಢೀರ್ ಭೇಟಿ ನೀಡಿ ಅವಳಿಗೆ ಖುಷಿ ನೀಡಿ. ಹೀಗೆ ಭೇಟಿ ನೀಡುವಾಗ ಅವಳಿಷ್ಟದ ತಿಂಡಿ, ಊಟ, ಕೆಲ ದಿನಗಳವರೆಗೆ ಕೆಡದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ. ದಿನಕ್ಕೊಂದು ಬಾರಿಯಾದರೂ ಫೋನ್‌ನಲ್ಲಿ ಮಾತನಾಡಿ.

ಅವಳ ಜೊತೆ ಯಾರಿರುತ್ತಾರೆ, ಅವರೆಲ್ಲ ಎಲ್ಲಿಯವರು, ಹೇಗಿದ್ದಾರೆ, ಕಚೇರಿಯ ವಾತಾವರಣ ಹೇಗಿದೆ, ಬಾಸ್, ಸಹೋದ್ಯೋಗಿಗಳು ಹೇಗಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ನಿಮಗೆ ತಿಳಿದಿರಲಿ. ಒಂದಿಬ್ಬರು ಸ್ನೇಹಿತರ ಫೋನ್ ನಂಬರ್ ಆದರೂ ನಿಮ್ಮ ಬಳಿ ಇರಲಿ.

ಕಾಡುವ ಒಂಟಿತನ....
ಪೇಯಿಂಗ್ ಗೆಸ್ಟ್ ಆಗಿರುವುದು ಹಲವು ವಿಷಯಗಳಲ್ಲಿ ಉತ್ತಮ. ಆದರೂ ಅಲ್ಲಿಯೂ ಅನೇಕ ಸಮಸ್ಯೆಗಳಿರುತ್ತವೆ. ನಿಮಗಿಷ್ಟವಾದ ಊಟ-ತಿಂಡಿ ಸಿಗಲಿಕ್ಕಿಲ್ಲ. ಬಾತ್‌ರೂಮ್ ಅನ್ನು ನಾಲ್ಕಾರು ಜನರೊಂದಿಗೆ ಹಂಚಿಕೊಳ್ಳುವುದು ಅನೇಕರಿಗೆ ಒಗ್ಗದು.

ಇದೆಲ್ಲ ನಿಮಗೆ ಕಿರಿಕಿರಿ ಎನಿಸಿದರೆ ಪ್ರತ್ಯೇಕ ರೂಮು ಅಥವಾ ಮನೆ  ಮಾಡಿಕೊಂಡಿರುವುದೇ ಒಳ್ಳೆಯದು. ಇದರಿಂದ ನಿಮ್ಮ ಪ್ರಪಂಚದಲ್ಲಿ ನೀವು ನಿಮಗಿಷ್ಟ ಬಂದ ಹಾಗೆ ಆರಾಮಾಗಿ ಇರಬಹುದು. ಮನೆಯಿಂದ ಯಾರಾದರೂ ಬಂದರೆ ಅವರಿಗೂ ಮಗಳ ಜೊತೆ ಒಂದೆರಡು ದಿನ ಇದ್ದು ಹೋಗಲು ಅನುಕೂಲ.

ಸಾಧ್ಯವಾದರೆ ನಿಮ್ಮ ಮನೋಭಾವ, ವೃತ್ತಿ, ಗುಣಕ್ಕೆ ಹೊಂದಿಕೆಯಾಗುವಂತಹ ಹುಡುಗಿಯನ್ನು ಜೊತೆ ಸೇರಿಸಿಕೊಳ್ಳಿ. ಆದರೆ ಸರಿ ಹೊಂದುವಂತಹ ರೂಮೇಟ್ ಸಿಗಲೇ ಇಲ್ಲ ಎಂದಾಗ ಒಂಟಿತನಕ್ಕೆ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಿ. ಮುಖ್ಯವಾಗಿ ಸುರಕ್ಷತೆಯ ಬಗ್ಗೆ ಗಮನವಿರಲಿ.

ತರಕಾರಿ ಮತ್ತಿತರ ಮನೆ ಸಾಮಾನು ತರುವ ಅಂಗಡಿಯಲ್ಲಿ, ಹಾಲಿನವನಿಗೆ, ಪೇಪರ್ ಹಾಕುವವರಿಗೆ ನೀವೊಬ್ಬರೇ ಇರುವುದರ ಸುಳಿವು ಬಿಟ್ಟುಕೊಡುವುದು ಒಳ್ಳೆಯದಲ್ಲ.  ಮನೆಯ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟು ಹೋದರೆ ರಿಪೇರಿ ಮಾಡುವವರನ್ನು ಮನೆಗೆ ಕರೆಯುವ ಬದಲು ನೀವೇ ಅಂಗಡಿಗೆ ಹೋಗಿ ರಿಪೇರಿ ಮಾಡಿಸಿ. 

ಕಚೇರಿಯ ಕೆಲಸ ಒತ್ತಡ, ಆತಂಕವನ್ನು ಅಲ್ಲಿಯೇ ಬಿಟ್ಟು ಬನ್ನಿ. ಅದನ್ನು ಮನೆಯವರೆಗೂ ಹೊತ್ತು ತರುವುದರಿಂದ ಯಾವ ಪ್ರಯೋಜನವೂ ಇಲ್ಲ. ಹಾಗೆಯೇ ಬೇಸರ ಕಳೆಯಲು ಪುಟ್ಟ ಟಿ.ವಿ. ಇಟ್ಟುಕೊಳ್ಳಿ. ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಯೋಗ ಮತ್ತು ಮೆಡಿಟೇಶನ್ ಉತ್ತಮ ಮಾರ್ಗ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT