ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ನ ಹಳೆಯ ಕಟ್ಟಡ ಕುಸಿತ

ಸಿಕಂದರಾಬಾದ್‌ನಲ್ಲಿ ಘಟನೆ: ಕನಿಷ್ಠ 13 ಮಂದಿ ಸಾವು, 20 ಜನರಿಗೆ ಗಾಯ
Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್: ಸಿಕಂದರಾಬಾದ್‌ನಲ್ಲಿ ಹಳೆಯದಾದ ಮೂರು ಮಹಡಿಗಳ ಕಟ್ಟಡವೊಂದು ಸೋಮವಾರ ಮುಂಜಾನೆ ಕುಸಿದಿದೆ. ಇದರಿಂದ ಈ ಕಟ್ಟಡದಲ್ಲಿದ್ದ ಹೋಟೆಲ್‌ನ ಬಹುತೇಕ ನೌಕರರು, ಗ್ರಾಹಕರು ಸೇರಿದಂತೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. 20 ಜನರು ಗಾಯಗೊಂಡಿದ್ದಾರೆ. ಅವಶೇಷದಡಿ ಸಿಕ್ಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ರಾಷ್ಟ್ರಪತಿ ರಸ್ತೆಯಲ್ಲಿರುವ 80 ವರ್ಷಗಳಷ್ಟು ಹಳೆಯ ಕಟ್ಟಡದ ತಾರಸಿ ಬೆಳಿಗ್ಗೆ 6.45ರ ಹೊತ್ತಿಗೆ ಇದ್ದಕ್ಕಿದ್ದಂತೆ ಕುಸಿಯಿತು. ಇದರಿಂದ `ಸಿಟಿ ಲೈಟ್' ಹೋಟೆಲ್ ಮಾಲೀಕನ ಪುತ್ರ ಮುಸ್ತಾಫಾ, ಹೋಟೆಲ್‌ನ ನೌಕರರಾದ ಸಂತೋಷ್, ರಾಜೀವ್, ಮುರಳಿ ಮತ್ತು ಮನೋಜ್ ಸೇರಿದಂತೆ ಬಹುತೇಕ ಕೂಲಿ ಕಾರ್ಮಿಕರು, ಆಟೊ ರಿಕ್ಷಾ ಚಾಲಕರು ಸಾವನ್ನಪ್ಪಿದ್ದಾರೆ. ಅವಶೇಷದಡಿಯಲ್ಲಿ ಇನ್ನೂ ಇಬ್ಬರು ಸಿಲುಕಿರಬಹುದು ಎಂದು ರಕ್ಷಣಾ ಕಾರ್ಯದಲ್ಲಿ ನಿರತರಾದವರು ಶಂಕಿಸಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್, ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ), ಅಗ್ನಿಶಾಮಕ ದಳ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಸುಮಾರು 20 ಜನರನ್ನು ರಕ್ಷಿಸಿವೆ. ಇವರಲ್ಲಿ ಕನಿಷ್ಠ 15 ಜನರನ್ನು ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಮತ್ತು ಅವರ ಸಂಪುಟದ ಹಿರಿಯ ಸಹೋದ್ಯೋಗಿಗಳು ಭೇಟಿ ನೀಡಿದ್ದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅವರು ಸೂಚಿಸಿದ್ದಾರೆ. ಜೊತೆಗೆ ಘಟನೆ ಬಗ್ಗೆ ಇಲಾಖಾ ತನಿಖೆ ನಡೆಸುವಂತೆಯೂ ಆದೇಶಿಸಿದ್ದಾರೆ.

ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ದು ಅವರು, ಈ ದುರ್ಘಟನೆಯು ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ದೂರಿದ್ದಾರೆ.

ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು, ಸತ್ತವರ ಕುಟುಂಬದವರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ನಗರ ಪಾಲಿಕೆಯವರ ನಿರ್ಲಕ್ಷ್ಯದಿಂದಾಗಿಯೇ ಈ ದುರ್ಘಟನೆ ನಡೆದಿದೆ ಎಂದು ರಾಷ್ಟ್ರಪತಿ ರಸ್ತೆ ಪ್ರದೇಶದ ನಿವಾಸಿಗಳು ದೂರಿದ್ದಾರೆ.
ಆದರೆ ಜಿಎಚ್‌ಎಂಸಿ ಆಯುಕ್ತ ಎಂ.ಟಿ. ಕೃಷ್ಣ ಬಾಬು, ಈ ಕಟ್ಟಡ ಶಿಥಿಲವಾಗಿರಲಿಲ್ಲ ಮತ್ತು ಈ ಕಟ್ಟಡವು ನಗರ ಪಾಲಿಕೆ ನೋಟಿಸ್ ನೀಡಿರುವ ನೆಲಸಮ ಮಾಡುವ ಕಟ್ಟಡಗಳ ಪಟ್ಟಿಯಲ್ಲೂ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

`ಪಾರಾಗಿ ಬಂದೆವು'
`ಘಟನೆ ನಡೆದ ಸಂದರ್ಭದಲ್ಲಿ ಹೋಟೆಲ್‌ನ ಸುಮಾರು 30 ನೌಕರರು ಮತ್ತು ಗ್ರಾಹಕರು ಇದ್ದರು' ಎಂದು ಆಘಾತದಿಂದ ಪಾರಾಗಿ ಬಂದ ಹೋಟೆಲ್‌ನ ನೌಕರರೊಬ್ಬರು ತಿಳಿಸಿದರು.

`ನಾವು ಮೆಟ್ಟಿಲು ಬಳಿ ನಿಂತು ಚಹಾ ಕುಡಿಯುತ್ತಿದ್ದೇವು, ತಾರಸಿ ಕುಸಿಯಿತು. ಮೆಟ್ಟಿಲು ಬಳಿಯ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡೆವು. ನಮ್ಮ ಕೂಗಾಟ ಕೇಳಿ ಯಾರೋ ಬಂದು ನಮ್ಮನ್ನು ಎಳೆದುಕೊಂಡರು ಪ್ರಾಣಾಪಾಯದಿಂದ ಪಾರಾದೆವು' ಎಂದು ಗಾಯಗೊಂಡು ಚಿಕಿತ್ಸೆಪಡೆಯುತ್ತಿರುವ ರಾಮಾಂಜನೇಯಲು ಹೇಳಿದರು.

`ತಾರಸಿ ಕುಸಿದ ಮೇಲೆ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ಬೆಂಕಿ ಕೂಡ ಹೊತ್ತಿಕೊಂಡಿತು. ಆಗ ನಾನು ಹೋಟೆಲ್ ಒಳಗೇ ಇದ್ದೆ' ಎಂದ ಕೂಲಿ ಕಾರ್ಮಿಕ ಶಂಕರ್ ನುಡಿದರು.

`ಇದ್ದಕ್ಕಿದ್ದಂತೆ ಭಾರಿ ಶಬ್ದ, ಜನರ ಕೂಗಾಟ ಕೇಳಿಸಿತು. ಅವಶೇಷದಡಿಯಲ್ಲಿ ಸಿಲುಕಿಕೊಂಡವರು ನೆರವಿಗಾಗಿ ಆಕ್ರಂದಿಸುತ್ತಿದ್ದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಈ ಹೋಟೆಲ್‌ಗೆ ಮುಂಜಾನೆ ಚಹಾ ಸೇವಿಸಲು ಅನೇಕರು ದಿನನಿತ್ಯ ಬರುತ್ತಾರೆ. ಈ ಹೋಟೆಲ್ ಮಸಾಲಾ ಚಹಾ (ಇರಾನಿ ಚಹಾ), ಬಿರ್ಯಾನಿ, ಮತ್ತು ರಂಜಾನ್ ಮಾಸದಲ್ಲಿ `ಹಲೀಂ' ಖಾದ್ಯಕ್ಕೆ ಹೆಸರುವಾಸಿಯಾಗಿದೆ.

ಮಣ್ಣಿನ ದೊಡ್ಡ ಒಲೆ ಕುಸಿತಕ್ಕೆ ಕಾರಣ?
ರಂಜಾನ್ ಮಾಸದಲ್ಲಿ ತಯಾರಿಸುವ ವಿಶೇಷ ಮಾಂಸಾಹಾರಿ ಖಾದ್ಯ `ಹಲೀಂ' ಅನ್ನು ಬೇಯಿಸುವ ಮಣ್ಣಿನ ದೊಡ್ಡ ಗಾತ್ರದ ಒಲೆಯು ಈ ಹೋಟೆಲ್‌ನ ತಾರಸಿಯಲ್ಲಿ ಇತ್ತು. ಇದರ ಶಾಖದಿಂದಾಗಿ ಹಳೆಯ ಕಟ್ಟಡದ ತಾರಸಿ ಕುಸಿದಿರುವ ಸಾಧ್ಯತೆ ಇದೆ. ತನಿಖೆಯ ನಂತರವೇ ನಿರ್ದಿಷ್ಟ ಕಾರಣ ತಿಳಿದು ಬರಲಿದೆ. ಎಂದು ಜಿಎಚ್‌ಎಂಸಿ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT