ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ಎಚ್ಚರಿಕೆ

Last Updated 7 ಜನವರಿ 2012, 5:30 IST
ಅಕ್ಷರ ಗಾತ್ರ

ಹಾವೇರಿ: ಕನಕದಾಸರ ಕೀರ್ತನೆಗಳ ಕೃತಿಚೌರ್ಯ ಮಾಡಿರುವ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳ `ಸಾವಿಲ್ಲದ ಹಾಡು~ ಕೃತಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ತಾಲ್ಲೂಕು ಕುರುಬ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ದಿಂಗಾಲೇಶ್ವರ ಶ್ರೀಗಳ ಕ್ರಮವನ್ನು ಖಂಡಿಸಿ ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ತಾಲ್ಲೂಕು ಕುರುಬ ಸಂಘದ ಪದಾಧಿಕಾರಿಗಳು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.

`ಸಾವಿಲ್ಲದ ಹಾಡು~ ಎಂಬ ಕೃತಿಯನ್ನು ಹೊರತಂದಿರುವ ದಿಂಗಾಲೇಶ್ವರ ಶ್ರೀಗಳು, ಕನಕದಾಸರ ಕೀರ್ತನೆಗಳನ್ನು ಬೇರೆಯವರ ಹೆಸರಿನಲ್ಲಿ ಪ್ರಕಟಿಸಿದ್ದಾರಲ್ಲದೇ, ಕೆಲವು ಕೀರ್ತನಗಳನ್ನು ತಮ್ಮ ಮನಸ್ಸಿಗೆ ಬಂದಂತೆ ತಿರಚುವ ಮೂಲಕ ಕನಕದಾಸರ ಸಾಹಿತ್ಯವನ್ನು ವಿರೂಪಗೊಳಿಸುವ ಯತ್ನ ನಡೆಸಿದ್ದಾರೆ ಎಂದು ಮನವಿಯಲ್ಲಿ ಆರೋಪಿದ್ದಾರೆ.

ಕನಕದಾಸರ ಕೀರ್ತನೆಗಳನ್ನು ತಿರುಚುವ ಕೆಲಸ ಬಹಳ ಹಿಂದಿ ನಿಂದಲೂ ನಡೆಯುತ್ತಲೇ ಇದೆ. ಅದರ ವಿರುದ್ಧ ಹೋರಾಟ ನಡೆಸಲಾಗುವುದು. ಕೃತಿ ಚೌರ್ಯವನ್ನುಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ, ಅದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ದಿಂಗಾಲೇಶ್ವರ ಶ್ರೀಗಳ ಪ್ರಮಾದವನ್ನು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಶ್ರೀಗಳು ಎತ್ತಿ ತೋರಿಸಿದ್ದಾರಲ್ಲದೇ, ಅದನ್ನು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ದಿಂಗಾಲೇಶ್ವರ ಶ್ರೀಗಳು ಈವರೆಗೆ ಕಾಗಿನೆಲೆ ಶ್ರೀಗಳನ್ನು ಭೇಟಿ ಮಾಡದೇ ತಮ್ಮ ನಿಜವಾದ ಉದ್ದೇಶ ಏನೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಕೂಡಲೇ ದಿಂಗಾಲೇಶ್ವರ ಶ್ರೀಗಳು ತಮ್ಮ ಕೃತಿಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಕುರುಬ ಸಮಾಜ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಹನುಮಂತಪ್ಪ ಶರಶೂರಿ ಎಚ್ಚರಿಸಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ್ ಮನವಿಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಲತೇಶ ಬಣಕಾರ, ಚನ್ನವೀರಪ್ಪ ಚೂರಿ, ಹನುಮಂತಗೌಡ ಗಾಜಿಗೌಡ್ರ, ತಿಪ್ಪೇಸ್ವಾಮಿ ಹೊಸಮನಿ, ಕೆ.ಎನ್.ಪಾಟೀಲ, ಹನುಮಂತಪ್ಪ ಕುಂಬಣ್ಣನವರ, ಶಿವಾನಂದ ಮಾಳಿ, ಪ್ರಕಾಶ ಮಜ್ಜಗಿ, ನಿಂಗನಗೌಡ ಪಾಟೀಲ, ಬಸನಗೌಡ ಪಾಟೀಲ, ಜಗದೀಶ ಸುಂಕದ, ಅಶೋಕ ಪೂಜಾರ, ಗಣೇಶ ಮೇಲ್ಮುರಿ ಸೇರಿದಂತೆ ಹಲವರು ಸಂದರ್ಭದಲ್ಲಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT