ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್‌’ ಗೊಂದಲ ನಿವಾರಿಸಿ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಪ್ರಜೆಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಒಳಗೊಂಡ ಕಾರ್ಡ್‌ಗಳನ್ನು ವಿತರಿಸುವ ಮಹತ್ವಾಕಾಂಕ್ಷೆಯ ಆಧಾರ್‌ ಯೋಜನೆ ಸೃಷ್ಟಿಸಿರುವ ಗೊಂದಲಗಳು ಒಂದೆರಡಲ್ಲ. ದೇಶದ ಎಲ್ಲ ಪ್ರಜೆಗಳಿಗೂ ಆಧಾರ್‌ ಕಾರ್ಡ್‌ಗಳನ್ನು ವಿತರಣೆ ಮಾಡಿ ಮುಗಿಸುವ ಮೊದಲೇ ಈ ಕಾರ್ಡ್‌ಗಳನ್ನು ಬಳಸಿಕೊಂಡು ಅಕ್ರಮಗಳನ್ನು ತಡೆಯುವ ಪ್ರಯತ್ನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಹಾಕಿದ್ದೇ ಎಲ್ಲ ಗೊಂದಲಗಳಿಗೆ ಕಾರಣ.

ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ದೇಶದ ಪ್ರಜೆಗಳಿಗೆ ಸರ್ಕಾರಗಳು ನೀಡುವ ವಿಶೇಷ ರಿಯಾಯಿತಿಗಳು, ಸಬ್ಸಿಡಿ ಇತ್ಯಾದಿ ಸೌಲಭ್ಯಗಳು ಅಪಾತ್ರರ ಪಾಲಾಗಬಾರದು ಎಂಬ ಕಾಳಜಿ ಸರಿಯಾದುದೇ. ಆದರೆ ಸೋರಿಕೆ ತಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಿದ ಕ್ರಮ ಮಾತ್ರ ಸಕಾಲಿಕ ಎನ್ನಲಾಗದು. ಅದರಿಂದಾಗಿಯೇ ಎಲ್ಲೆಡೆ ಗೊಂದಲ. ಆಧಾರ್‌ ಕಾರ್ಡ್‌ ವಿತರಿಸುವ ಕಾರ್ಯ ಪ್ರಗತಿಯಲ್ಲಿದ್ದರೂ ಅದು ವ್ಯವಸ್ಥಿತವಾಗಿಲ್ಲ.

ಆಧಾರ್‌ ಯೋಜನೆ ಬಗ್ಗೆ ತಿಳಿವಳಿಕೆ ಇಲ್ಲದ ಕೋಟ್ಯಂತರ ಜನರು ಸರ್ಕಾರದ ಸೌಲಭ್ಯಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಆತಂಕದಲ್ಲಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಸಹಾಯಧನ, ವೆೇತನ ಇತ್ಯಾದಿಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಪ್ರಾಯೋಗಿಕ ಯೋಜನೆ ದೇಶದ ಆರು ರಾಜ್ಯಗಳ ಇಪ್ಪತ್ತು ಜಿಲ್ಲೆಗಳಲ್ಲಿ ಈಗಾಗಲೇ ಜಾರಿಗೆ ಬಂದಿದೆ.

ಕರ್ನಾಟಕದ ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆಗಳು ಈ ಯೋಜನೆ ವ್ಯಾಪ್ತಿಗೆ ಸೇರಿವೆ. ಮಹಾರಾಷ್ಟ್ರದಲ್ಲಿ ವಿವಾಹ ನೋಂದಣಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಆಧಾರ್‌ ಕಾರ್ಡ್‌ಗಳನ್ನು ಕಡ್ಡಾಯಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ.

ಹೀಗಾಗಿ ಆಧಾರ್‌ ಕಾರ್ಡ್‌ ಇಲ್ಲದವರಿಗೆ ಯಾವ ಸೌಲಭ್ಯಗಳೂ ಸಿಗುವುದಿಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೆ  ಈಗ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆಧಾರ್‌ ಸಂಖ್ಯೆ ಪಡೆದುಕೊಳ್ಳುವುದು  ಐಚ್ಛಿಕ ಎಂದು ಹೇಳಿದ್ದು ಸುಪ್ರೀಂ ಕೋರ್ಟ್ ಸಹ ಆಧಾರ್ ಕಡ್ಡಾಯ ಅಲ್ಲ ಎಂದು ಮಧ್ಯಂತರ ತೀರ್ಪು ನೀಡಿದೆ. ಈ ಕುರಿತು ಜನಸಾಮಾನ್ಯರಲ್ಲಿ ಉಂಟಾಗುತ್ತಿರುವ ಗೊಂದಲ ನಿವಾರಿಸಲು ಎರಡೂ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಕೋಟ್ಯಂತರ ರೂಪಾಯಿ ವ್ಯಯಿಸಿ ಆರಂಭಿಸಿರುವ ಈ ಯೋಜನೆ ಕುರಿತಂತೆ ಸ್ಪಷ್ಟ ನಿಲುವು ವ್ಯಕ್ತವಾಗಬೇಕು.

ದೇಶದ ಪ್ರಜೆಗಳಲ್ಲದವರಿಗೆ ಆಧಾರ್‌ ಕಾರ್ಡ್‌ ಕೊಡಬಾರದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಆಧಾರ್‌ ಕಾರ್ಡ್‌ ವಿತರಣೆ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಬೇಕು.  ನಿರ್ದಿಷ್ಟ ಅವಧಿಯಲ್ಲಿ ದೇಶದ ಎಲ್ಲ ಪ್ರಜೆಗಳಿಗೂ ಕಾರ್ಡ್‌ ವಿತರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಹೆಸರು ನೋಂದಾಯಿಸಿ ವರ್ಷ ಕಳೆದರೂ ಕಾರ್ಡ್‌ ನೀಡದ ಪ್ರಕರಣಗಳು ಸಾಕಷ್ಟಿವೆ. ಸಂಬಂಧಪಟ್ಟವರು ಸಾರ್ವಜನಿಕರ ದೂರುಗಳಿಗೆ ಗಮನ ಕೊಡಬೇಕು. ಸಂಸತ್ತಿನಲ್ಲಿ  ಕೂಲಂಕಷವಾಗಿ ಚರ್ಚೆಗೆ ಒಳಪಡಿಸದೇ ಆರಂಭಿಸಿದ ಈ ಯೋಜನೆಯ ಮಹತ್ವವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಕೆಲಸವೂ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT