ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌ನಿಂದ ಭ್ರಷ್ಟಾಚಾರರಹಿತ ಆಡಳಿತ’

Last Updated 7 ಡಿಸೆಂಬರ್ 2013, 6:44 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ  ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ತೀರ್ಥಹಳ್ಳಿ ಕಾಂಗ್ರೆಸ್‌ ಕಚೇರಿಯಲ್ಲಿ ‘ಚಿಂತನ ಮಂಥನ’ ಕಾರ್ಯಕ್ರಮ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿದೆ. ಅಭಿವೃದ್ಧಿ ಪರವಾದ ಆಡಳಿತ ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ಅತಿವೃಷ್ಟಿಯಿಂದ ಹಾನಿಗೆ ಒಳಗಾದ ರೈತ ಸಮುದಾಯಕ್ಕೆ ಹೆಚ್ಚು ಮೊತ್ತದ ಪರಿಹಾರದ ನೆರವು ನೀಡಲಾಗಿದೆ. ಸುಗ್ಗಿ ಕಾಲ ಇದಾಗಿದ್ದು ಭತ್ತ ಖರೀದಿಗೆ ಕೇಂದ್ರ ತೆರೆಯಲಾಗುತ್ತಿದೆ. ಕಾಂಗ್ರೆಸ್‌ ‌ ಆಡಳಿತವನ್ನು ಬಿಜೆಪಿ ಕೇವಲ ವಿರೋಧಕ್ಕಾಗಿ ವಿರೋಧಿಸುತ್ತಿದೆ. ಅವರ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಭ್ರಷ್ಟಾಚಾರದಲ್ಲಿ  ಮುಳುಗಿರುವ ಪಕ್ಷಗಳಿಂದ ಯಾವುದೇ ಉನ್ನತಿ ಸಾಧ್ಯವಿಲ್ಲ ಎಂದರು.

ಉತ್ತರ ಭಾರತದಲ್ಲಿ ನಡೆದ ಚುನಾವಣೆಯ ಫಲಿತಾಂಶ ರಾಜ್ಯದ ಚುನಾವಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಕೆಜೆಪಿಯಿಂದ
ಶೇ 10ರಷ್ಟು ಮತಗಳು ಈ ಬಾರಿ ಕಾಂಗ್ರೆಸ್‌ಗೆ ಬರಲಿದೆ. ಈ ಪಕ್ಷದಿಂದ ಅನೇಕರು ಕಾಂಗ್ರೆಸ್‌ ಸೇರಲಿದ್ದಾರೆ. ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಅವರು ಆಡಳಿತ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅವರು ಕೆಜೆಪಿ ಪಕ್ಷದಲ್ಲಿದ್ದಾರೋ, ಬಿಜೆಪಿ ಪಕ್ಷದಲ್ಲಿದ್ದಾರೋ ಎಂಬ ಗೊಂದಲದಲ್ಲಿದ್ದಾರೆ ಎಂದು ಹೇಳಿದರು.

ಸಂಸತ್‌ ಸದಸ್ಯರ ನಿಧಿಯಿಂದ ನಿರ್ಮಾಣವಾದ ಬಸ್‌ನಿಲ್ದಾಣಗಳು ಕಳಪೆಯಾಗಿವೆ. ಕಬ್ಬಿಣದ ಕಂಬಗಳು, ಶೀಟ್‌ಗಳನ್ನು ಬಳಸಿ ನಿರ್ಮಿಸಲಾಗಿದ್ದು, ಈಗಾಗಲೇ ತುಕ್ಕು ಹಿಡಿಯಲಾರಂಭಿಸಿದೆ. ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಈ ಯೋಜನೆಯ ಹಣ ದುರುಪಯೋಗವಾಗಿದೆ. ಸಿಮೆಂಟ್‌ ಬಳಸಿ ಬಸ್‌ನಿಲ್ದಾಣ ನಿರ್ಮಿಸಿದ್ದರೆ ಅದರಿಂದ ಜನರಿಗೆ ಯೋಜನೆಯ ಉಪಯೋಗವಾದರೂ ಸಿಗುತ್ತಿತ್ತು ಎಂದರು.

ಮಲೆನಾಡಿಗೆ ವಿಶೇಷ ಪ್ರಾತಿನಿಧ್ಯ ದೊರಕಿಸಿಕೊಡುವಲ್ಲಿ ಪಕ್ಷ ಪ್ರಯತ್ನಿಸುತ್ತಿದೆ. ಗೋರಖ್‌ ಸಿಂಗ್‌ ವರದಿ ಜಾರಿಗೆ ಬಯಲು ಸೀಮೆ ಹಾಗೂ ಮಲೆನಾಡಿನ ಅಡಿಕೆ ಬೆಳೆಗಾರರು ಎಂಬ ಭಿನ್ನ ಅಭಿಪ್ರಾಯ ತೊಡಕಾಗಿದೆ. ಲೋಕಸಭಾ ಚುನಾವಣೆಗೆ ತಮ್ಮ ಕುಟುಂಬದಿಂದ ಇತರ ಪಕ್ಷಗಳಲ್ಲಿ ಯಾರೇ ಸ್ಪರ್ಧಿಸಿದರೂ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದು, ಅದರಂತೆ ನಡೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ರಾಜ್ಯ, ಜಿಲ್ಲೆಯಲ್ಲಿ ಸುಭದ್ರವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಟಿ.ಎಲ್‌. ಸುಂದರೇಶ್‌, ಪಟಮಕ್ಕಿ ಮಹಾಬಲೇಶ್‌, ಕೆಪಿಸಿಸಿ ಸದಸ್ಯ ಜಿ.ಎಸ್‌.ನಾರಾಯಣರಾವ್‌, ಮಾಜಿ ಶಾಸಕರಾದ ಕಡಿದಾಳ್‌ ದಿವಾಕರ್‌, ಪಟಮಕ್ಕಿ ರತ್ನಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT