ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಎಲ್‌ಇ ಧ್ವನಿ’ 21ರಂದು ಕಾರ್ಯಾರಂಭ

Last Updated 18 ಸೆಪ್ಟೆಂಬರ್ 2013, 10:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಮುದಾಯದ ಸಮೃದ್ಧಿಗಾಗಿ’ ಎಂಬ ಆಶಯ ಹೊತ್ತು ಆರಂಭಗೊಳ್ಳಲಿರುವ ‘ಕೆಎಲ್‌ಇ ಧ್ವನಿ ಬಿವಿಬಿ 90.4 ಎಫ್‌ಎಂ’ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ವಾಣಿಜ್ಯ ನಗರಿಯ ಮೊದಲ ಸಮುದಾಯ ಬಾನುಲಿ ಕೇಂದ್ರ ಎಂಬ ಹೆಗ್ಗಳಿಕೆ ಈ ಕೇಂದ್ರದ್ದು.
ಇದೇ 21ರಂದು ಈ ಕೇಂದ್ರವು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್‌ ಕಾಲೇಜು ಕ್ಯಾಂಪಸ್‌ನಲ್ಲಿರುವ ಬಾನುಲಿ ಕೇಂದ್ರದ ಸುತ್ತಲಿನ 11 ಕಿ.ಮೀ. ಸುತ್ತಳತೆಯಲ್ಲಿರುವ ಕೇಳುಗರು 90.4 ಕಂಪನಾಂಕದಲ್ಲಿ ಕಾರ್ಯ­ಕ್ರಮಗಳನ್ನು ಆಲಿಸಬಹುದಾಗಿದೆ. ಬೆಳಿಗ್ಗೆ 6.30ಕ್ಕೆ ನಾಡಗೀತೆಯೊಂದಿಗೆ ದಿನದ ಕಾರ್ಯಕ್ರಮವು ಆರಂಭಗೊಳ್ಳಲಿದೆ. ಬೆಳಿಗ್ಗೆ 7ರಿಂದ 9ರವರೆಗೆ ‘ನಾ ಹುಬ್ಬಳ್ಳಿಯಂವಾ’, 9ರಿಂದ 11ರವರೆಗೆ ‘ನಮ್ಮ ಕಲೆ–ನಮ್ಮ ಬದುಕು’ ಪ್ರಸಾರಗೊಳ್ಳಲಿದೆ. ಮಧ್ಯಾಹ್ನ 2ರಿಂದ 4ರವರೆಗೆ ’ಛಾವಡಿ ಚಾಟ್‌’, 4ರಿಂದ 5.55ರವರೆಗೆ ಯೂಥ್‌ಗಿರಿ ಕಾರ್ಯಕ್ರಮಗಳು ಬಿತ್ತರಗೊಳ್ಳಲಿವೆ.

‘ಕೆಎಲ್‌ಇ ಸಂಸ್ಥೆಯು ಈ ಸಮುದಾಯ ಬಾನುಲಿಯನ್ನು ಆರಂಭಿಸುತ್ತಿದೆಯಾದರೂ ಇದು ಹುಬ್ಬಳ್ಳಿಯ ಇಡೀ ಸಮುದಾಯಕ್ಕಾಗಿ ರೂಪಿಸಿರುವ ಮಾಧ್ಯಮ. ದುಡಿಯುವ ವರ್ಗ, ಮಹಿಳೆಯರು ಹಾಗೂ ಯುವಜನರನ್ನು ಕೇಂದ್ರೀಕರಿಸಿಕೊಂಡು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇಲ್ಲಿನ ಸಂಸ್ಕೃತಿ, ಕಲೆ–ಸಾಹಿತ್ಯ, ಜಾನಪದದ ಜೊತೆಗೆ ಸಾಮಾನ್ಯ ಜನರ ಬದುಕು–ಸಾಧನೆಗಳನ್ನು ಕಾರ್ಯಕ್ರಮಗಳು ಬಿಂಬಿಸಲಿವೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೆಎಲ್‌ಇ ಧ್ವನಿ ಎಂಬ ಹೆಸರಿನ ಈ ಬಾನುಲಿ ಕೇಂದ್ರವು ಪ್ರತಿನಿತ್ಯ ಎಂಟು ತಾಸು ಕಾರ್ಯಕ್ರಮ ಪ್ರಸಾರ ಮಾಡಲಿದೆ. ಇದಕ್ಕಾಗಿ ಸಂಸ್ಥೆಯು ₨ 50 ಲಕ್ಷ ವೆಚ್ಚದಲ್ಲಿ ಸ್ಟುಡಿಯೊ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಎಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಸಮುದಾಯ ಬಾನುಲಿ ಕೇಂದ್ರ ಆರಂಭಗೊಳ್ಳುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ‘ಇಂಡಿಯನ್‌ ಐಡಲ್‌ ಜೂನಿಯರ್‌’ ವಿಜೇತೆ ಅಂಜನಾ ಪದ್ಮನಾಭನ್‌ ಕಾರ್ಯಕ್ರಮ ಪ್ರಸಾರಕ್ಕೆ ಚಾಲನೆ ನೀಡಲಿದ್ದಾರೆ ’ ಎಂದು ಅವರು ತಿಳಿಸಿದರು.

ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಬಾನುಲಿ ಕೇಂದ್ರ ಸ್ಥಾಪನೆಗೆ ಈಗಾಗಲೇ ಅನುಮತಿ ದೊರೆತಿದ್ದು, ‘ಕೆಎಲ್‌ಇ ಆರೋಗ್ಯ ಧ್ವನಿ’ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. ಅಥಣಿಯಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಆಧಾರಿತ ಬಾನುಲಿ ಕೇಂದ್ರದ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದರು.

ಬೆಳಗಾವಿಯ ಜವಾಹರಲಾಲ್‌ ನೆಹರೂ ಮೆಡಿಕಲ್‌ ಕಾಲೇಜು ಈ ವರ್ಷ ಸುವರ್ಣ ಸಂಭ್ರಮದಲ್ಲಿದೆ. ಈ ಅಂಗವಾಗಿ ಡಿಸೆಂಬರ್‌ 20ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಆಹ್ವಾನಿಸಲಾಗಿದೆ ಎಂದು ಕೋರೆ ತಿಳಿಸಿದರು.

‘ನಿಯಮಿತ ಕಾರ್ಯಕ್ರಮಗಳ ಜೊತೆಗೆ ಪ್ರತಿಭಾನ್ವೇಷಣೆ, ಸ್ಪೋಕನ್‌ ಇಂಗ್ಲಿಷ್‌ ತರಬೇತಿ, ಉದ್ಯೋಗ ಮಾಹಿತಿ, ಆಪ್ತ ಸಮಾಲೋಚನೆ, ಆಹಾರ ವೈವಿಧ್ಯ ಮೊದಲಾದ ಕಾರ್ಯಕ್ರಮಗಳೂ ಬಿವಿಬಿ ಎಫ್‌ಎಂನಲ್ಲಿ ಪ್ರಸಾರಗೊಳ್ಳಲಿವೆ’ ಎಂದು ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜು ಪ್ರಾಚಾರ್ಯ ಅಶೋಕ ಶೆಟ್ಟರ್‌ ಹೇಳಿದರು.

‘ಕಳೆದ ಆರು ತಿಂಗಳಿನಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಮೂರು ತಿಂಗಳಿಗೆ ಆಗುವಷ್ಟು ಕಾರ್ಯಕ್ರಮ ಈಗಾಗಲೇ ಮುದ್ರಿತಗೊಂಡಿವೆ. ಆಕಾಶ್‌ ಹಾಗೂ ಲಹರಿ ಆಡಿಯೋ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 20,000 ಹಾಡುಗಳನ್ನು ಅವರಿಂದ ಪಡೆಯಲಾಗಿದೆ. ಹೀಗಾಗಿ ಕಾರ್ಯಕ್ರಮದ ನಡುವೆ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಗಳು ಪ್ರಸಾರಗೊಳ್ಳಲಿವೆ’ ಎಂದು ಬಾನುಲಿ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಉಡುಪ ತಿಳಿಸಿದರು.

ರೇಡಿಯೊ ಜಾಕಿಗಳಾದ ಸೀಮಾ ಕುಲಕರ್ಣಿ, ಶಶಿಕಲಾ ಪಡೇಸೂರು, ರೇಖಾ ಸಣಕಲ್‌ ಹಾಗೂ ಪ್ರಕಾಶ ಚೌಹಾಣ ತಾವು ನಡೆಸಿಕೊಡಲಿರುವ ಕಾರ್ಯಕ್ರಮಗಳ ವಿವರ ನೀಡಿದರು. ಉಪ ಪ್ರಾಚಾರ್ಯ ಬಿ.ಎಲ್‌. ದೇಸಾಯಿ, ಕೇಂದ್ರದ ಮೇಲ್ವಿಚಾರಕರಾದ ಸಂಜಯ್‌ ಬಾಳೀಕಾಯಿ, ರೇಣುಕಾ ಅತ್ತಿಗೇರಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT