ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋ ರಕ್ಷಣೆಗೆ ಸಹಾಯವಾಣಿ, ವಿದೇಶಿ ನೆರವು’

ಗೋಸೇವಾ ಆಯೋಗಕ್ಕೆ ಅನುದಾನ ನೀಡದ ರಾಜ್ಯ: ಮಿತ್ತಲ್‌
Last Updated 20 ಡಿಸೆಂಬರ್ 2013, 5:18 IST
ಅಕ್ಷರ ಗಾತ್ರ

ವಿಜಾಪುರ: ‘ಗೋವುಗಳ ರಕ್ಷಣೆ–ಸಂವರ್ಧನೆಗಾಗಿ ರಚನೆಯಾಗಿರುವ ಕರ್ನಾಟಕ ರಾಜ್ಯ ಗೋಸೇವಾ ಆಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಪಶುಸಂಗೋಪನೆ ಇಲಾಖೆಗೆ ರೂ1100 ಕೋಟಿ ನೀಡಿದ್ದು, ಅದರಲ್ಲಿಯೇ ಹಣ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ನಿಜ ಹೇಳಬೇಕು ಎಂದರೆ ನಾನೀಗ ನನ್ನ ಸ್ವಂತ ಹಣದಿಂದ ವಾಹನಕ್ಕೆ ಪೆಟ್ರೋಲ್‌ ಹಾಕಿಸಿಕೊಂಡು ಪ್ರವಾಸ ಮಾಡುತ್ತಿದ್ದೇನೆ’ ಎಂದು ಈ ಆಯೋಗದ ಸದಸ್ಯ ಡಾ.ಎಸ್‌.ಕೆ. ಮಿತ್ತಲ್‌ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಗೋವುಗಳ ರಕ್ಷಣೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ‘ಗೋಸೇವಾ ಆಯೋಗಕ್ಕೆ ಹಿಂದಿನ ಸರ್ಕಾರ ಬಜೆಟ್‌ನಲ್ಲಿ ರೂ22 ಕೋಟಿ ಮೀಸಲಿಟ್ಟಿತ್ತು. ಆ ಬಜೆಟ್‌ ಅನುಷ್ಠಾನಕ್ಕೆ ಬರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಗೋವುಗಳ ಪಾಲನೆ, ಸಂವರ್ಧನೆಗೆ ಅನಿವಾಸಿ ಭಾರತೀಯರಿಂದ ನೆರವು ಪಡೆಯುವ, ಗೋವುಗಳ ರಕ್ಷಣೆಗಾಗಿ ಸಹಾಯವಾಣಿ ಕೇಂದ್ರ ಆರಂಭಿಸುವ ಚಿಂತನೆ ಇದೆ’ ಎಂದರು.

‘ಇಲಾಖೆಗಳ ಸಮನ್ವಯದ ಕೊರತೆ ಹಾಗೂ ಕಾನೂನು ಸಮರ್ಪಕ ಅನು ಷ್ಠಾನವಾಗದ ಕಾರಣ ನೆರೆಯ ರಾಜ್ಯ ಗಳಿಗೆ ಗೋವುಗಳ ಕಳ್ಳಸಾಗಾಣಿಕೆ ನಡೆ ಯುತ್ತಿದೆ. ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಗಡಿಯಲ್ಲಿ ಸರಿಯಾದ ಚೆಕ್‌ಪೋಸ್ಟ್‌ಗಳಿಲ್ಲ. ಆ ರಾಜ್ಯಗಳ ಕಸಾಯಿಖಾನೆಗಳಿಗೆ ನಮ್ಮ ರಾಜ್ಯ ಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳ ಪೂರೈಕೆಯಾಗುತ್ತಿವೆ. 

ಜಮಖಂಡಿಯಿಂದ 20 ಜಾನುವಾರುಗಳನ್ನು ಲಾರಿಯಲ್ಲಿ ತುಂಬಿಕೊಂಡು ಮಹಾ ರಾಷ್ಟ್ರಕ್ಕೆ ಸಾಗಿಸುತ್ತಿರುವುದನ್ನು ನಾನೇ ಕಂಡಿದ್ದೇನೆ’ ಎಂದು ಹೇಳಿದರು.

‘ಕಾರವಾರ ಮತ್ತು ಬೆಳಗಾವಿಯಿಂದ ಗೋವಾ ಗಡಿಯ ವರೆಗೆ ಚೆಕ್‌ಪೋಸ್ಟ್‌ಗಳೇ ಇಲ್ಲ. ನಮ್ಮ ರಾಜ್ಯದಲ್ಲಿರುವ ಗೋ ರಕ್ಷಣೆಯ ಕಾನೂನುಗಳ ಕುರಿತು ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ನೀಡಿದ್ದೇನೆ. ಗೋವು ಸಂರಕ್ಷಣೆ–ಸಂವರ್ಧನೆಯ ವಿಷಯ  18 ಇಲಾಖೆಗಳ ವ್ಯಾಪ್ತಿಗೊಳಪಟ್ಟಿದೆ. ಈ ಎಲ್ಲ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲಾಗುತ್ತಿದ್ದು, ಕಾನೂನುಗಳ ಕಟ್ಟುನಿಟ್ಟಿನ ಜಾರಿಗೆ ಸೂಚಿಸಲಾಗು ತ್ತಿದೆ’ ಎಂದು ಹೇಳಿದರು.

2007ರ ಗಣತಿಯ ಪ್ರಕಾರ ರಾಜ್ಯ ದಲ್ಲಿ 1.50 ಕೋಟಿ ಗೋವುಗಳಿವೆ. ಪ್ರತಿ ವರ್ಷ ಇವುಗಳ ಸಂಖ್ಯೆ ಶೇ.25ರಷ್ಟು ಹೆಚ್ಚಳವಾಗುವ ಬದಲು ಕಡಿಮೆ ಯಾಗುತ್ತಿದೆ. ವಿಜಾಪುರ ಜಿಲ್ಲೆಯಲ್ಲಿ 4.70 ಲಕ್ಷ ಇದ್ದ ಜಾನುವಾರುಗಳ ಸಂಖ್ಯೆ 4.03ಲಕ್ಷಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲಭ್ಯವಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 60 ಖಾಸಗಿ ಗೋಶಾಲೆಗಳಿದ್ದು, 25,000 ಗೋವು ಗಳನ್ನು ಅಲ್ಲಿ ಪಾಲನೆ ಮಾಡಲಾಗು ತ್ತಿದೆ. ನಿಖರ ಅಂಕಿ–ಅಂಶಗಳ ಸಂಗ್ರಹ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಗೋವುಗಳನ್ನು ನೆರೆ ರಾಜ್ಯಗಳಿಗೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ ಎಂದು ಲಾರಿ ಚಾಲಕರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಸರಿಯಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳ ಬೇಕು ಎಂದು ಸಂಘ ಪರಿವಾರದವರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ದರು.

ಬಿಡಾಡಿ ದನಗಳನ್ನು ಬೇರೆಡೆ ಸಾಗಿಸುವ ಹೊಣೆ ನಗರಸಭೆಯದ್ದು. ಬಿಡಾಡಿ ದನ ಕಂಡು ಬಂದರೆ ಅವು ಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿ ಸಬೇಕು. ಬಿಡಿಸಿಕೊಂಡು ಹೋಗಲು ಬರುವ ಅವುಗಳ ಮಾಲೀಕರಿಂದ ದಿನಕ್ಕೆ ರೂ100 ದಂಡ ವಸೂಲಿ ಮಾಡಬೇಕು. ತಿಂಗಳ ನಂತರವೂ ಮಾಲೀಕರು ಬರದಿದ್ದರೆ ಆ ದನಗಳನ್ನು ಮಾರುಕಟ್ಟೆ ಯಲ್ಲಿ ಮಾರಾಟ ಮಾಡುವಂತೆ ಮಿತ್ತಲ್‌ ಅವರು ಸಲಹೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ರಿತ್ವಿಕ್‌ ರಂಜನ್‌ ಪಾಂಡೆ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಹಿಲೋರಿ, ಜಿಲ್ಲಾ ಪಂಚಾಯಿತಿ ಸಿಇಒ ಶಿವಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT