ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ಸಂಕೋಲೆಯಿಂದ ಹೊರಬರದ ರಾಷ್ಟ್ರ’

Last Updated 2 ಡಿಸೆಂಬರ್ 2013, 8:35 IST
ಅಕ್ಷರ ಗಾತ್ರ

ಮಂಡ್ಯ: ಜಾತಿ ಮತ್ತು ಧರ್ಮದ ವಿಷಯದಲ್ಲಿ ಭಾರತ ಇನ್ನೂ ಪ್ರಜ್ಞಾಶೂನ್ಯವಾಗಿದೆ ಎಂದು ಮೈಸೂರು ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್. ತುಕಾರಾಂ ಹೇಳಿದರು.

ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಮದ್ದೂರಿನ ಸಂಜನಾ ಪ್ರಕಾಶನ ಏರ್ಪಡಿಸಿದ್ದ ಸಮಾರಂಭದಲ್ಲಿ ಲೇಖಕ ಜಿ.ಬಿ. ಮಾದೇಶ್ ಅವರ ‘ದಲಿತ ಗಾಂಧಿ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಭಾರತದ ಜನರಿಗೆ ಜಾತಿಯನ್ನು ಧಿಕ್ಕರಿಸಿ ಹೊರಬರುವ ನೈತಿಕ ಶಕ್ತಿ ಇಲ್ಲ. ದೇಶದ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಜಾತಿ ಮತ್ತು ಧರ್ಮವೇ ಮೂಲ ಕಾರಣ ಎಂದು ಭಾವಿಸಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ಭಾರತವೇ ಜಾತಿ ವ್ಯವಸ್ಥೆಯಲ್ಲಿ ಮುಳುಗಿದೆ. ಮೇಲ್ನೋಟಕ್ಕೆ ಭಾರತ ಬದಲಾಗಿರುವಂತೆ ಕಂಡುಬಂದರೂ ಜಾತಿ ವ್ಯವಸ್ಥೆಯಲ್ಲಿ ಮಾತ್ರ ಜಡವಾಗಿದೆ. ಅಲ್ಲಲ್ಲಿ ಬದಲಾವಣೆ ಕಂಡರೂ ಸಹ, ಅದು ಬಹಿರಂಗ ಒತ್ತಡದಿಂದ ಆಗಿದೆಯೇ ವಿನಾ, ಅಂತರಂಗದಲ್ಲಿ ಕತ್ತಲು ಹಾಗೆಯೇ ಇದೆ ಎಂದು ವಿಷಾದಿಸಿದರು.

ಮಹಾತ್ಮ ಗಾಂಧಿ, ಲೋಹಿಯಾ, ಅಂಬೇಡ್ಕರ್ ಈ ಮೂವರು ಕಂಡ ಸಮಾನತೆಯ ಸಮನ್ವಯತೆಯಲ್ಲಿ ಜನರು ಮಿಂದುವವರೆಗೆ ಜಾತಿಯ ಸಂಕೋಲೆಯಿಂದ ದೇಶಕ್ಕೆ ಬಿಡುಗಡೆ ಸಾಧ್ಯವಿಲ್ಲ. ಇವರೆಲ್ಲ ಎಲ್ಲರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ ಎಂದರು.

ಇಂದಿನವರಿಗೆ ಈ ಮಹಾನೀಯರ ವಿಚಾರಧಾರೆಗಳು ಸುಲಭವಾಗಿ ಅರ್ಥವಾಗುವುದೂ ಇಲ್ಲ. ಅದನ್ನು ಅರ್ಥೈಸುವವರೂ ಇಲ್ಲ. ಜಾತಿಯನ್ನು ನಿರಾಕರಿಸಿ, ನೈತಿಕ ಸ್ಥೈರ್ಯವನ್ನು ಜನರು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ದೇಶಕ್ಕೆ ಸಂಕಷ್ಟಗಳಿಂದ ಮುಕ್ತಿ ಸಿಗುವುದಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ, ಡಾ.ಮ. ರಾಮಕೃಷ್ಣ, ವಿಚಾರವಾದಿ ಜಾಹೋ ನಾರಾಯಣಸ್ವಾಮಿ, ಲೇಖಕ ಜಿ.ಬಿ. ಮಾದೇಶ್, ಅರ್ಜುನಪುರಿ ಅಪ್ಪಾಜಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT