ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರು, ಕೃಷಿ ಭೂಮಿ ಖಾಸಗೀಕರಣ ಬೇಡ’

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಧಾರವಾಡ: ‘ಭೂಮಿ ಮತ್ತು ನೀರು ಸಮುದಾಯಕ್ಕೆ ಸೇರಿರುವುದರಿಂದ ಅವು ಸಮುದಾಯದ ಒಡೆತನ ದಲ್ಲಿಯೇ ಇರಬೇಕು. ಇವನ್ನು ಲೂಟಿ ಮಾಡಲು ಖಾಸಗಿ ಕಂಪೆನಿಗಳಿಗೆ ಬಿಡಬಾರದು’ ಎಂದು ರಾಜಸ್ತಾನದ ತರುಣ ಭಾರತ ಸಂಘದ ಅಧ್ಯಕ್ಷ, ಜಲತಜ್ಞ ರಾಜೇಂದ್ರ ಸಿಂಗ್‌ ಪ್ರತಿಪಾದಿಸಿದರು.

ಕೃಷಿ ಮೇಳದ ಮೂರನೇ ದಿನವಾದ ಸೋಮವಾರ ಜಲಸಂರಕ್ಷಣೆ ಕುರಿತು ಮಾತನಾಡಿದ ಅವರು, ‘ಒಂದು ದಶಕದ ಹಿಂದೆ ನೀರನ್ನು ಬಾಟಲಿಯಲ್ಲಿ ಹಾಕಿ ಮಾರುವುದು ಹೆಚ್ಚಾಗಿರಲಿಲ್ಲ. ಆದರೆ ಇಂದು ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದರ ವಹಿವಾಟು ₨ 50,000 ಕೋಟಿ!  ಬಾಟಲಿ ಉತ್ಪಾದನೆಯೊಂದನ್ನು ಹೊರತುಪಡಿಸಿ ಖಾಸಗಿ ಕಂಪೆನಿಗಳು ಬೇರೇನನ್ನೂ ಮಾಡುವುದಿಲ್ಲ.

ನಮ್ಮ ಸುತ್ತಮುತ್ತ ಇರುವ ನೀರನ್ನೇ ಬಾಟಲಿ ಯಲ್ಲಿ ಹಾಕಿ ನಮಗೇ ದುಬಾರಿ ಬೆಲೆಗೆ ಮಾರುತ್ತವೆ. ಇದು ನಿಲ್ಲಬೇಕು. ನೀರು ಹಾಗೂ ಕೃಷಿಭೂಮಿ ಖಾಸಗೀಕರಣ ವನ್ನು ತಡೆಯಲು ವಿವಿಧ ಗ್ರಾಮಗಳ ಗ್ರಾಮಸ್ಥರು ಸೇರಿಕೊಂಡು ಒಕ್ಕೂಟ ವನ್ನು ರಚಿಸಿಕೊಳ್ಳಬೇಕು. ಅಲ್ಲಿನ ನೀರು ಹಾಗೂ ಭೂಮಿಯ ಬಳಕೆಯ ಬಗೆಗಿನ ನಿರ್ಧಾರವನ್ನು ಒಕ್ಕೂಟಗಳ ಸದಸ್ಯರೇ ನಿರ್ಧರಿಸಬೇಕು. ರಾಜಸ್ತಾನದ ಆಳ್ವರ ಜಿಲ್ಲೆಯಲ್ಲಿ 70 ಹಳ್ಳಿಗಳನ್ನು ಸೇರಿಸಿ ಒಕ್ಕೂಟ ಮಾಡ ಲಾಗಿದೆ. ಏಳು ನದಿಗಳ ಪುನರುಜ್ಜೀವಗೊಳಿಸಲಾಗಿದೆ’ ಎಂದು ನೆನಪಿಸಿದರು.

‘ಕರ್ನಾಟಕದಂತೆ ರಾಜಸ್ತಾನದಲ್ಲಿ ಮೋಡಗಳು ಮಳೆಗಳಾಗಿ ಸುರಿಯುವುದಿಲ್ಲ. ಮೋಡಗಳು ಅತ್ತ ಸುಳಿಯುವುದೇ ಅಪರೂಪ. ಇಲ್ಲಿನ ರೈತರು ಹಾಗೂ ಕೃಷಿ ವಿಜ್ಞಾನಿಗಳ ನಡುವಿನ ಸಂಬಂಧ ಉತ್ತಮವಾಗಿದೆ. ಇದು ಸುಸ್ಥಿರ ಕೃಷಿಯನ್ನು ಕೈಗೊಳ್ಳುವಲ್ಲಿ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮ ಕಾರಿಯಾಗಿ ಕೆಲಸ ಮಾಡಬೇಕು’ ಎಂದು ಸಿಂಗ್‌ ಸಲಹೆ ನೀಡಿದರು.

‘ಭೂಮಿಯ ಹೊಟ್ಟೆ (ಭೂ ಒಡಲಾಳದ ನೀರು) ಖಾಲಿಯಾದರೆ ರೈತನ ಹೊಟ್ಟೆಯೂ ಖಾಲಿಯಾದಂತೆ. ಆದ್ದರಿಂದ ಭೂಮಿಯಿಂದ ನೀರನ್ನು ಹೊರತೆಗೆಯುವ ಬದಲು ನೀರನ್ನು ಇಂಗಿಸುವ ಬಗ್ಗೆ ರೈತ ಸಮುದಾಯ ಚಿಂತನೆ ನಡೆಸಬೇಕು. ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ನದಿಗಳು, ಹಳ್ಳಗಳು ಬತ್ತ ದಂತೆ ನೋಡಿಕೊಳ್ಳಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಇಮಾಮ್‌ಸಾಬ್‌ ಸುತಾರ್‌, ‘ರೈತರು ಹೊಲದ ಕೆಲಸ ಮುಗಿಸಿಕೊಂಡು ನೇರವಾಗಿ ಮನೆಗೆ ಬರಬೇಕು. ದುಶ್ಚಟದ ದಾಸರಾಗ ಬಾರದು. ತಂದೆ–ತಾಯಿಯ ಸೇವೆ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT