ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Childrens Day | ಮಕ್ಕಳ ದಿನಾಚರಣೆ ಹುಟ್ಟಿದ್ದು ಹೀಗೆ...

Last Updated 14 ನವೆಂಬರ್ 2019, 10:19 IST
ಅಕ್ಷರ ಗಾತ್ರ

ವಿ.ಎನ್. ಕುಲಕರ್ಣಿ ಎನ್ನುವವರು 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್‌ನ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಬಗ್ಗೆ ಮಿಡಿದಿತ್ತು.

ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದ ಚಾಚಾ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.

ಪಂಡಿತ್ ನೆಹರೂ ಇದಕ್ಕೆ ಒಪ್ಪಿಯಾರೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಆದರೆ ಚಾಚಾ ನೆಹರೂ ಅವರಿಗೆ ಮಕ್ಕಳ ಮೇಲಿನ ಮಮತೆ ಎಷ್ಟಿತ್ತೆಂದರೆ ಅವರು ಮಕ್ಕಳಿಗಾಗಿ ಏನು ಮಾಡಲೂ ಸಿದ್ಧವಿದ್ದರು. ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು.

ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು. ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20ರಂದು ‘ಯುನಿವರ್ಸಲ್ ಚಿಲ್ಡ್ರನ್ಸ್ ಡೇ’ ಎಂದಾದರೆ, ಜೂನ್ 1ರಂದು ‘ಇಂಟರ್‌ ನ್ಯಾಷನಲ್‌ ಚಿಲ್ಡ್ರನ್ಸ್ ಡೇ’ ಆಚರಣೆಯಲ್ಲಿದೆ. ಇಂದು ಬಹಳಷ್ಟು ದೇಶಗಳು, ತಮ್ಮ ಮಕ್ಕಳಪ್ರೇಮಿ ರಾಷ್ಟ್ರನಾಯಕರೊಬ್ಬರ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ ರೂಪದಲ್ಲಿ ಆಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT