ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾರಾಜ ಮೀಲ್ಸ್‌’

ರಸಸ್ವಾದ
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭಾಷೆ, ಸಂಸ್ಕೃತಿ, ಉಡುಪು ಸೇರಿದಂತೆ ಎಲ್ಲದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ವೈವಿಧ್ಯ ಕಾಣುತ್ತೇವೆ. ಆಹಾರ ಪದ್ಧತಿ ಕೂಡ ಇದಕ್ಕೆ ಹೊರತಲ್ಲ. ಇಂತಹ ಬಗೆಬಗೆಯ, ರುಚಿಕರವಾದ ದಕ್ಷಿಣದ ನಾಲ್ಕು ರಾಜ್ಯಗಳ ಖಾದ್ಯವನ್ನು ಉದ್ಯಾನನಗರದ ಜನತೆಗೆ ಒಂದೆಡೆ ಸಿಗುವಂತೆ ‘ಸೌತ್ ಇಂಡೀಸ್’ ವ್ಯವಸ್ಥೆ ಮಾಡಿದೆ.

ಶುದ್ಧ ಸಸ್ಯಹಾರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಗ್ರ್ಯಾಂಡ್ ಮಹಾರಾಜ ಮೀಲ್’ ಅನ್ನು ‘ಸೌತ್ ಇಂಡೀಸ್’ ಪ್ರಸ್ತುತಪಡಿಸಿರುವುದು ಮತ್ತೊಂದು ವಿಶೇಷ. ಅಂದಹಾಗೆ, ಈ ವಿಶೇಷ ಖಾದ್ಯಗಳು ಸೆ. 15ರವರೆಗೆ ಲಭ್ಯ.

ನಿಜಾಮರ ಕಾಲದ ಷಾಹಿ ಖಾದ್ಯಗಳಿಂದ ಕೇರಳದ ಗ್ರಿಲ್ಡ್ ಫುಡ್, ತಮಿಳುನಾಡಿನ ಚೆಟ್ಟಿಯಾರ್ ಆಹಾರ, ಬೆಳಗಾವಿಯ ವಿಶಾಲಾಕ್ಷಿ ರೋಟಿ, ಮಲಬಾರ್ ಪರಾಠ, ಮದ್ರಾಸ್ ಭೇಲ್ ‘ಗ್ರ್ಯಾಂಡ್ ಮಹಾರಾಜ ಮೀಲ್’ನ ಕೆಲ ಪ್ರಮುಖ ವ್ಯಂಜನಗಳು. ಹೆಸರು ಸೂಚಿಸುವಂತೆ ಭೋಜನ ಕೂಡ ‘ಗ್ರ್ಯಾಂಡ್’ ಆಗಿದೆ.

ಕರಿಮೆಣಸು, ಟೊಮೆಟೊ, ವಿವಿಧ ರೀತಿಯ ಹಣ್ಣು ಸೇರಿದಂತೆ ನಾಲ್ಕು ವಿಶೇಷ ತರಹದ ರಸಂ ಜೊತೆಗೆ ಪಾನಿಪುರಿ, ಆಂಧ್ರದ ಸ್ಪೈಸಿ ಚಿಲ್ಲಿ ಮಶ್ರೂಮ್, ಗ್ರಿಲ್ಡ್ ಪೈನಾಪಲ್ ಪಳಂ, ಪೋಡಿ ಟಾಸ್ಡ್ ಇಡ್ಲಿ, ಮದ್ರಾಸ್ ಭೇಲ್ ಮತ್ತು ಕೊಕೊನಟ್ ಪಾಯಸಂ... ‘ಗ್ರ್ಯಾಂಡ್ ಮಹಾರಾಜ ಮೀಲ್’ನ ಸ್ಟಾರ್ಟರ್‌ಗಳು ಎಂತಹವರನ್ನೂ ಬಾಯಿ ಚಪ್ಪರಿಸುವಂತೆ ಮಾಡುತ್ತವೆ.

ಆಪಮ್, ನೀರುದೋಸೆ, ಇಡಿಯಾಪಮ್, ದೋಸೆ ಜೊತೆಯಲ್ಲಿ ವಿವಿಧ ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಿದ ಚಟ್ನಿ ಮತ್ತು ಬೆಂಡೆಕಾಯಿ ಗ್ರೇವಿಯೊಂದಿಗಿನ (ವೆಂದಕಾಯ್ ಕೊಜಂಬು) ಕಾಂಬಿನೇಷನ್ ಬಗ್ಗೆ ಬೇರೆ ಹೇಳಬೇಕಿಲ್ಲ. ಈ ಮಧ್ಯೆ ಸಿಹಿ ಲಸ್ಸಿ ಮುಂದಿನ ಕೋರ್ಸ್‌ಗೆ ನಿಮ್ಮನ್ನು ರಿಫ್ರೆಶ್ ಮಾಡುತ್ತದೆ.

ಮಲಬಾರ್ ವೆಜಿಟೆಬಲ್ ತಡ್ಕಾ, ಆಂಧ್ರ ಕಾಲಿಫ್ಲವರ್ ಪಟ್ಟನಿ ಮಸಾಲಾ, ಮಕ್ಕ ಚೋಲಂ ಕಿರೈ ಮಸಿಯಲ್‌ನೊಂದಿಗೆ ಮಲಬಾರ್ ಪರಾಠ, ಊರಳೈ ಕೋಥಮಲಿ ರೋಟಿ, ವಿಶಾಲಾಕ್ಷಿ ರೋಟಿ ಪೈಕಿ ಒಂದಕ್ಕೆ ಮಾತ್ರ ಬೇಡಿಕೆ ಸಲ್ಲಿಸಬಹುದು. ಇದಾದ ಬಳಿಕ ಆರು ರುಚಿಕರ ಉಪ್ಪಿನಕಾಯಿ ಮತ್ತು ಕರ್ವೆಪಿಳ್ಳೆ ಪುಂಡು ಕೊಜಂಬು (ವಿಶಿಷ್ಟ ಬಗೆಯ ಚಟ್ನಿ) ಜೊತೆಗೆ ಮೊಸರನ್ನ ತಿನ್ನುತ್ತಿದ್ದರೆ ಇನ್ನಷ್ಟು ತಿನ್ನಬೇಕೆನಿಸುತ್ತದೆ. ಕೋರಿಕೆ ಮೇರೆಗೆ ಸ್ಟೀಮ್ಡ್ ರೈಸ್ ಮತ್ತು ಸಾಂಬಾರ್ ಕೂಡ ಪಡೆಯಬಹುದು.

ಕೊನೆಯದಾಗಿ ಅದೈ ಪ್ರದಮಂ (ಸಿಹಿ ತಿನಿಸು), ಎಳನೀರು ಪಾಯಸಂ, ಹಲ್ವಾ, ಜಾಮೂನ್ ಮತ್ತು ಮಾವಿನಕಾಯಿ, ಪಪ್ಪಾಯಿ, ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳು ಮತ್ತು ಐಸ್‌ಕ್ರೀಂ ಸವಿಯಬಹುದು.

ಹೀಗೆ ಒಂದೇ ಕಡೆ ರುಚಿ, ಶುಚಿಯಾದ ದಕ್ಷಿಣ ರಾಜ್ಯಗಳ ಸ್ವಾದಿಷ್ಟ ಖಾದ್ಯವನ್ನು ಆಹಾರಪ್ರಿಯರಿಗೆ ಪರಿಚಯಿಸಿರುವುದು ಹೆಸರಾಂತ ಬಾಣಸಿಗ ಮನು ನಾಯರ್ ಮತ್ತು ಅವರ ನೆರವಿಗೆ ಇರುವ 22 ಜನರ ತಂಡ.

‘ದಕ್ಷಿಣ ಭಾರತದ ಆಹಾರವೆಂದರೆ ಇಡ್ಲಿ, ಸಾಂಬಾರು ಎಂಬ ಭಾವನೆ ಹಲವರಲ್ಲಿ ಮನೆ ಮಾಡಿದೆ. ಇದನ್ನು ದೂರ ಮಾಡಿ, ದಕ್ಷಿಣದ ರಾಜ್ಯಗಳ ಹಲ ಬಗೆಯ ವ್ಯಂಜನಗಳ ಬಗ್ಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ’ ಎನ್ನುತ್ತಾರೆ ಮನು ನಾಯರ್.

ಇದನ್ನೆಲ್ಲ ಕೇಳಿದ ಮೇಲೆ ನಿಮ್ಮ ಬಾಯಲ್ಲಿ ನೀರು ಬರದೆ ಇರದು. ಹಾಗಿದ್ದರೆ ತಡ ಮಾಡದೇ ಕೂಡಲೇ ‘ಸೌತ್‌ಇಂಡೀಸ್’ಗೆ ಭೇಟಿ ನೀಡಿ.
ಬಫೆ ಡಿನ್ನರ್ ಒಬ್ಬರಿಗೆ 449 ರೂಪಾಯಿ. ಸ್ಥಳ: ಸೌಂತ್ ಇಂಡೀಸ್, ಕಮಿಷನರ್ ಕಚೇರಿ ಎದುರುಗಡೆ, ಇನ್‌ಫೆಂಟ್ರಿ ರಸ್ತೆ. ಸಮಯ: ಸಂಜೆ 7ರಿಂದ ರಾತ್ರಿ 11ರ ವರೆಗೆ. ಮುಂಗಡವಾಗಿ ಆಸನ ಕಾಯ್ದಿರಿಸಲು
080-4163 6362ಕ್ಕೆ ಕರೆ ಮಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT