ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣಿಗಳಿಂದ ಪ್ರಕೃತಿ ನಾಶ’

ಕನಕಪುರ: ಶಾಶ್ವತ ನೀರಾವರಿ ಹೋರಾಟ ಸಮಿತಿ ಸಭೆ
Last Updated 21 ಸೆಪ್ಟೆಂಬರ್ 2013, 10:10 IST
ಅಕ್ಷರ ಗಾತ್ರ

ಕನಕಪುರ: ‘ಇಂದಿನ ರಾಜಕಾರಣಿಗಳು ಪ್ರಕೃತಿ ಸಂಪತ್ತನ್ನು ನಾಶ ಪಡಿಸುತ್ತಿದ್ದಾರೆ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರೊ.ಮಲ್ಲಯ್ಯ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಾವೇ ಆಯ್ಕೆ ಮಾಡಿ ಕಳಿಸಿದ ನಮ್ಮನ್ನಾ ಳುವ ನಾಯಕರು ಪ್ರಕೃತಿಯ ಬಗ್ಗೆ, ಪರಿ ಸರದ ಉಳಿವಿನ ಬಗ್ಗೆ ನಿರ್ಲಕ್ಷಧೋರಣೆ ಹೊಂದಿದ್ದಾರೆ. ಅವರಿಗೆ ಅದರ ಬಗ್ಗೆ ಪ್ರಜ್ಞಾವಂತರು ಜಾಗೃತಿ ಮೂಡಿಸ ಬೇಕಿದೆ’ ಎಂದರು.

‘ಅಂತರ್ಜಲ ಕುಸಿತವು ಭಾರಿ ಪ್ರಮಾಣದಲ್ಲಿ ಕಂಡು ಬರುತ್ತಿದ್ದು ಮುಂದೊಂದು ದಿನ ಇದರಿಂದ ಗಂಭೀರ ಅಪಾಯಗಳನ್ನು ಎದುರಿಸಬೇಕಾ ಗುತ್ತದೆ. ಆದ್ದರಿಂದ ಈ ದಿಸೆಯಲ್ಲಿ ಎಲ್ಲರೂ ಎಚ್ಚೆತ್ತುಕೊಂಡು ಪ್ರಕೃತಿಯ ಉಳಿವಿಗಾಗಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಿದೆ. ಬಹುಶಃ ಇದು ಸ್ವಾತಂತ್ರ್ಯ ಸಂಗ್ರಾಮದ ರೀತಿ ಯಲ್ಲೇ  ರೂಪುಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ರೈತ ಸಂಘದ ಸಂಚಾಲಕ ಸಿ.ಪುಟ್ಟಸ್ವಾಮಿ ಮಾತನಾಡಿ, ‘ಜಿಲ್ಲೆ ಯಲ್ಲಿ 49ಸಾವಿರ ಬೋರ್ವೆಲ್‌ಗಳು ಬತ್ತಿಹೋಗಿವೆ. ಅಂತರ್ಜಲ 1500 ಅಡಿಗಳಿಗೂ ಹೆಚ್ಚು ಆಳಕ್ಕ ಇಳಿದಿದೆ. ಈ ಬಗ್ಗೆ ಯಾವೊಬ್ಬ ರಾಜಕಾರಣಿಯೂ ಮಾತನಾಡುವುದಿಲ್ಲ. ಜನಜಾಯಕರು ಎಂದು ಅನ್ನಿಸಿಕೊಂಡವರು ನಮ್ಮ ಸಮಸ್ಯೆ ಈಡೇರಿಸುವಲ್ಲಿ ಸೋತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ನೀಗಿಸಲು ಬೇರಾವ ಮಾರ್ಗಗಳೂ ಇಲ್ಲದಂತಾಗಿದೆ. ವ್ಯರ್ಥವಾಗಿ ಅರಬ್ಬಿ ಸಮುದ್ರಕ್ಕೆ ಹರಿದು ಹೋಗುವ ನೀರಿನ ಶೇಕಡ 10ರಷ್ಟು ನೀರನ್ನು ರಾಮನಗರ ಜಿಲ್ಲೆಗೆ ಒದಗಿಸಿದರೆ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಬಹುದು. ಅದಕ್ಕಾಗಿಯೇ ಈ ಹೋರಾಟವನ್ನು ಸಮಿತಿಯು ನಡೆಸುತ್ತಿದ್ದು ಇದಕ್ಕೆ ಸ್ತ್ರೀ ಶಕ್ತಿ ಸಂಘಟನೆಗಳೂ ಸೇರಿದಂತೆ ಮಹಿಳಾ ಸಂಘಟನೆಗಳು, ಕೂಲಿ ಕಾರ್ಮಿಕರು, ವಿವಿಧ ಸಂಘಟನೆಗಳು ಬೆಂಬಲ ನೀಡಲು ಮುಂದೆ ಬಂದಿದ್ದಾರೆ’ ಎಂದರು.

ಜಯ ಕರ್ನಾರ್ಟಕ ಸಂಘಟನೆಯ ರಾಜ್ಯ ಘಟಕದ  ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ‘ಯಾವುದೇ ಹೋರಾಟ ಯಶಸ್ವಿ ಯಾಗಬೇಕಾದರೆ ಅದು ಕೇವಲ ವೇದಿಕೆ ಮೇಲೆ ಕುಳಿತವರಿಂದ,  ನಾಯಕರಿಂದ ಸಾಧ್ಯವಿಲ್ಲ. ಹೋರಾಟಕ್ಕೆ ಎಲ್ಲರೂ ಪಕ್ಷತೀತಾವಾಗಿ ನೈತಿಕ ಬೆಂಬಲ ನೀಡಿದಾಗ ಮಾತ್ರ ಸಾಧ್ಯ, ಹೆಚ್ಚಿನ ಯುವಕರನ್ನು ಈ ಹೋರಟಕ್ಕೆ ಕರೆತಂದು ಹೋರಾಟದಲ್ಲಿ ತೊಡಗಿಸಬೇಕು’ ಎಂದರು.

ಮಹಿಳಾ ಹೋರಾಟಗಾರ್ತಿ ಅನು ಸೂಯಮ್ಮ ಮಾತನಾಡಿ, ‘ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬುದು ರೂಪುಗೊಂಡಿರುವ ಈ ಹೋರಾಟ ಯಶಸ್ವಿಯಾಗಬೇಕಾದರೆ ಪುರುಷರು, ಮಹಿಳೆಯರು ಎನ್ನದೆ ಎಲ್ಲರೂ ಹೋರಾ ಟಕ್ಕೆ ಕೈಜೋಡಿಸಬೇಕು, ಹೋರಾಟಕ್ಕೆ ಸರಿಯಾದ ರೂಪು–ರೇಷೆಗಳನ್ನು ರೂಪಿಸಿ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯದೆ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು’ ಕೋರಿದರು.

ರೈತ ಸಂಘದ ಕೆ.ಬಿ.ನಾಗರಾಜು, ಬೂದಿಗುಪ್ಪೆ ಸಂಪತ್, ನಾಗಲಿಂಗಯ್ಯ, ಚನ್ನೇಗೌಡ ಸೇರಿದಂತೆ ಹಲವು ರೈತ ಮುಖಂಡರು ತಮ್ಮ ಅನಿಸಿಕೆ ಹಾಗೂ ಸಲಹೆ ಸೂಚನೆಗಳನ್ನು ಸಭೆಗೆ ನೀಡಿ ಹೋರಟಕ್ಕೆ ಬೆಂಬಲ ಸೂಚಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಕಬ್ಬಾಳೇಗೌಡ, ಜಯಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ, ರೈತ ಸಂಘದ ಮುಖಂಡರಾದ ಕೆ.ಮಲ್ಲಯ್ಯ, ಲಕ್ಷ್ಮಣ್ ಸ್ವಾಮಿ, ಆನಮಾನಹಳ್ಳಿ ನಾಗರಾಜು, ಎಚ್.ಕೆ.ಕೃಷ್ಣಪ್ಪ, ಎಂ.ಮಧುಗೌಡ, ಕಾಳೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT