ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರಪತಿ ಅನುಮೋದನೆಗೆ ಕರಡು’

Last Updated 18 ಸೆಪ್ಟೆಂಬರ್ 2013, 9:51 IST
ಅಕ್ಷರ ಗಾತ್ರ

ಬಳ್ಳಾರಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಂವಿಧಾನದ 371 (ಜೆ) ಕಲಮಿಗೆ ತಿದ್ದುಪಡಿ ತಂದು ರಚಿಸಿರುವ ಕರಡು ನಿಯಮಾವಳಿಗೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, ರಾಷ್ಟ್ರಪತಿ ಅಂಗೀಕಾರಕ್ಕೆ ಸಲ್ಲಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.

ಜಿಲ್ಲಾಡಳಿತವು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೈ–ಕ ವಿಮೋಚನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೈ–ಕ ಪ್ರದೇಶವು ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 65 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಈ ವಿಮೋಚನಾ ದಿನವನು್ನ ಆಚರಿಸಲಾಗುತ್ತಿದೆ. ಭವ್ಯ ಪರಂಪರೆ ಹೊಂದಿರುವ ಭಾರತವು ಹಲವಾರು  ಕಾರಣಗಳಿಗಾಗಿ ಪರಕೀಯರ ಆಡಳಿತಕ್ಕೆ ಒಳಗಾಗಿದ್ದು, ಅದರ ಪರಿಣಾಮ ಸಂಕಷ್ಟಗಳ ಸರಮಾಲೆಯನ್ನೇ ಈ ನಾಡಿನ ಜನ ಅನುಭವಿಸಿದ್ದಾರೆ. ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಸುದೀರ್ಘ ಹೋರಾಟ ನಡೆಸಲಾಯಿತು. ಸಮಸ್ತ ರಾಷ್ಟ್ರಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೆ, ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಈ ಭಾಗವು ಒಂದು ವರ್ಷದ ನಂತರ ಉಕ್ಕಿನ ಮನುಷ್ಯ ವಲ್ಲಭಬಾಯಿ ಪಟೇಲರ ದಿಟ್ಟತನದಿಂದ ಸ್ವತಂತ್ರಗೊಂಡಿತು ಎಂದು ಅವರು ಹೇಳಿದರು.

1956ರಲ್ಲಿ ಭಾಷಾವಾರು ಪ್ರಾಂತ್ಯದ ನಿರ್ಮಾಣ ಮತ್ತು ಕರ್ನಾಟಕ ಏಕೀಕರಣ ಆಗುವವರೆಗೆ ಈ ಭಾಗಗಳು ನಿಜಾಮರ ಆಡಳಿತದಲ್ಲಿದ್ದವು. ಇದೀಗ ಈ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಅವರು ತಿಳಿಸಿದರು.

ಈ ಪ್ರದೇಶದ ಅಭಿವೃದ್ದಿಗಾಗಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಎಂದು ಅಧ್ಯಕ್ಷತೆವಹಿಸಿದ್ದ
ಜಿ.ಪಂ. ಅಧ್ಯಕ್ಷೆ ಶೋಭಾ ಬೆಂಡಿಗೇರಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮುತ್ಯುಂಜಯ ಜಿನಗಾ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್, ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ ನಾಯ್ಕ, ಉಪಾಧ್ಯಕ್ಷೆ ಮಮತಾ ಸುರೇಶ, ಉಪ ವಿಭಾಗಾಧಿಕಾರಿ ಅನಿರುದ್ದ್ ಶ್ರವಣ್, ಜಿ.ಪಂ. ಸದಸ್ಯರಾದ ವಂಸತ್, ಶಶಿಧರ,  ನಳಿನಾ ಮತ್ತಿತರರು ಉಪಸ್ಥಿತರಿದ್ದರು. ಕನ್ಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಸ್ವಾಗತಿಸಿದರು.

ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ, ಕಾಲಿನಲ್ಲೇ ಚಿತ್ರ ಬಿಡಿಸಿದ ಅಂಗವಿಕಲ ವಿದ್ಯಾರ್ಥಿ ಮುಸ್ತಫಾ ಅವರಿಗೆ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಬಹುಮಾನ ವಿತರಿಸಿದರಲ್ಲದೆ, ಆತನ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ₨ 10 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸಿರಿವಾರದ ವಿದ್ಯಾರ್ಥಿನಿ ಎಂ. ರೂಪಾ, ಹಿರೇಮಲ್ಲನಕೇರಿಯ ಪ್ರಕಾಶ ಜೆ. ಗೌಡರ, ಕೋಗಳಿಯ ಕೆ. ಮರುಳಸಿದ್ದನಗೌಡ, ಹೊಸಪೇಟೆಯ ಜೆ. ಚೇತನ,  ಹೊಸ ನೆಲ್ಲುಡಿಯ ಎಸ್. ಇಮ್ತಿಯಾಜ್, ಹಿರೇಹೆಗ್ಡಾಳದ ಕೆ.ಬಿ. ಪ್ರಶಾಂತ ಕುಮಾರ್, ಬಂಡ್ರಿಯ ಎಚ್.ಎಂ. ಕವಿತಾ, ತೆಕ್ಕಲಕೋಟೆಯ ಡಿ.ರಾಕೇಶ್ ಅವರನ್ನು ಸಚಿವರು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT