ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯರು ದೂರು ನೀಡಲು ಹಿಂಜರಿಯಬಾರದು’

Last Updated 9 ಡಿಸೆಂಬರ್ 2013, 8:50 IST
ಅಕ್ಷರ ಗಾತ್ರ

ಹಾಸನ: ‘ವೈದ್ಯರು ಅಥವಾ ಆಸ್ಪತ್ರೆ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದಾಗ ಅವರನ್ನು ತಡೆಯಲು ವಿಶೇಷ ಕಾನೂನಿನ ಅಗತ್ಯ ಇಲ್ಲ. ಆದರೆ ವೈದ್ಯರು ದೂರು ನೀಡಲು ಹಿಂಜರಿಯಬಾರದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ನುಡಿದರು.

ನರ್ಸಿಂಗ್‌ ಹೋಮ್‌ ಮತ್ತು ಖಾಸಗಿ ಆಸ್ಪತ್ರೆಗಳ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಶನಿವಾರ ರಾತ್ರಿ ಹಾಸನದಲ್ಲಿ ಹಮ್ಮಿಕೊಂಡಿದ್ದ ‘ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ನಡೆಯುವ ಗುಂಪು ದಾಂಧಲೆ ಮತ್ತು ಹಿಂಸಾಚಾರ’ ವಿಷಯವನ್ನು ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಎಲ್ಲ ಸಂದರ್ಭಗಳಲ್ಲಿ ರೋಗಿಯ ಕಡೆಯವರೇ ಇಂಥ ಕೃತ್ಯ ನಡೆಸುವುದಿಲ್ಲ. ಕೆಲವು ಸಮಾಜಘಾತುಕ ಶಕ್ತಿಗಳು ಅವರ ಜತೆ ಸೇರಿ ದಾಂಧಲೆ ಮಾಡುತ್ತವೆ. ಆದರೆ ವೈದ್ಯರು ಪ್ರತಿಷ್ಠೆ ಹಾಳಾಗುತ್ತದೆ ಎಂಬ ಕಾರಣ ಅಥವಾ ಇನ್ಯಾವುದೋ ಕಾರಣಕ್ಕೆ ಅವರಿಗೆ ಹಣ ನೀಡಿ ಪ್ರಕರಣ ಮುಚ್ಚಿಹಾಕುತ್ತಾರೆ. ಇದರ ಬದಲು ದೂರು ನೀಡಿದರೆ ಖಂಡಿತವಾಗಿಯೂ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದು’ ಎಂದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಹಿರಿಯ ವಕೀಲ ತಿಮ್ಮೇಗೌಡ, ‘ರೋಗಿ ಸತ್ತಾಗ ಮಾತ್ರ ಗಲಭೆ ಆಗುತ್ತದೆ ಎಂದಿಲ್ಲ. ಬೇರೆ ಕಾರಣಕ್ಕೂ ಗಲಭೆ ಆದ ಉದಾಹರಣೆಗಳು ಸಾಕಷ್ಟಿವೆ. ವೈದ್ಯರು ಸ್ವಲ್ಪ ಸಹನೆ ತೋರಿಸಿದರೆ ಕೆಲವು ಗಲಭೆಗಳನ್ನು ತಡೆಯಬಹುದು. ಗಲಭೆ ನಡೆಸುವವರಲ್ಲಿ ಹೆಚ್ಚಿನವರು ಸಮಾಜ ಘಾತುಕ ಶಕ್ತಿಗಳು ಎಂಬುದರಲ್ಲಿ ಸಂದೇಹವಿಲ್ಲ. ಅವರನ್ನು ನಿಯಂತ್ರಿಸುವ ಕೆಲಸ ಆಗಬೇಕು’ ಎಂದರು.

ಶಾಸಕ ಎಚ್‌.ಎಸ್‌. ಪ್ರಕಾಶ್‌, ‘ಗಲಭೆ ನಡೆದಾಗ ದುಡ್ಡು ಕೊಟ್ಟು ಜಾರಿಕೊಳ್ಳುವ ಬದಲು ಪೊಲೀಸರಿಗೆ ದೂರು ಕೊಟ್ಟು ಸಮಸ್ಯೆಯನ್ನು ಎದುರಿಸುವ ಧೈರ್ಯವನ್ನು ವೈದ್ಯರು ಪ್ರದರ್ಶಿಸಬೇಕು. ದಿನವಿಡೀ ಒಂದೇ ರೀತಿಯ ಕೆಲಸ ಮಾಡುವಾಗ ವ್ಯಕ್ತಿ ದಣಿದು ಸಹನೆ ಕಳೆದುಕೊಳ್ಳುವುದು ಸಹಜ, ಆದ್ದರಿಂದ ವೈದ್ಯರು ವಾರಕ್ಕೆ ಒಂದೆರಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಗುರಾಗಬೇಕು’ ಎಂದರು.

ಗಲಭೆ ಸಂದರ್ಭದಲ್ಲಿ ಮಾಧ್ಯಮಗಳು ನಿರ್ವಹಿಸುವ ಪಾತ್ರದ ಬಗ್ಗೆಯೂ ಸಾಕಷ್ಟು ಚರ್ಚೆಯಾಯಿತು. ‘ಘಟನೆ ನಡೆದಾಗ ಹಿಂದು ಮುಂದನ್ನು ಅರಿಯದೆ ವರದಿ ಮಾಡಲಾಗುತ್ತಿದೆ’ ಎಂದು ಕಲವು ವೈದ್ಯರು ಹಾಗೂ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪತ್ರಕರ್ತರು, ‘ನಾವು ವೈದ್ಯರ ಅಭಿಪ್ರಾಯವನ್ನೂ ಕೇಳಲು ಪ್ರಯತ್ನಿಸುತ್ತೇವೆ, ಆದರೆ ಇಂಥ ಘಟನೆ ನಡೆದಾಗಲೆಲ್ಲ ವೈದ್ಯರು ಮಾಧ್ಯಮಗಳನ್ನು ದೂರವಿಡುವ ಪ್ರಯತ್ನ ಮಾಡುತ್ತಾರೆ, ದೂರವಾಣಿ ಕರೆ ಮಾಡಿದರೂ ಅದನ್ನು ಸ್ವೀಕರಿಸುವುದಿಲ್ಲ, ಆದ್ದರಿಂದ ರೋಗಿಯ ಕಡೆಯವರು ಹೇಳಿದ್ದನ್ನೇ ವರದಿ ಮಾಡಬೇಕಾಗುತ್ತದೆ’ ಎಂದರು. ಮಾಧ್ಯಮದ ವಿಚಾರ ಬಂದಾಗ ಸ್ವಲ್ಪಹೊತ್ತು ಬಿಸಿಬಿಸಿ ಚರ್ಚೆಯೂ ನಡೆಯಿತು.

ಕೊನೆಯಲ್ಲಿ ಮಾತನಾಡಿದ ಶಿಶುರೋಗ ತಜ್ಞ ಡಾ.ದಿನೇಶ್‌, ‘ಇಂಥ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ವೈದ್ಯರು, ಪೊಲೀಸರು, ಪತ್ರಕರ್ತರು ಹಾಗೂ ವಕೀಲರನ್ನು ಒಳಗೊಂಡಂಥ ಒಂದು ಸಮಿತಿ ರಚಿಸಬೇಕು’ ಎಂದು ಸಲಹೆ ನೀಡಿದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ರಾಮಕೃಷ್ಣ ಭಟ್‌ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ಡಾ. ರಂಗಲಕ್ಷ್ಮಿ ಸ್ವಾಗತಿಸಿದರು. ಡಾ. ಭಾರತಿ ರಾಜಶೇಖರ್‌ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.  ಸಾಹಿತಿ ಜ.ಹೊ. ನಾರಾಯಣಸ್ವಾಮಿ, ನಗರದ ಹಿರಿಯ ವೈದ್ಯರು, ವಕೀಲರು ಹಾಗೂ ಪತ್ರಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT