ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಗಳ ಕಿರುಕುಳದಿಂದ ಒಡೆಯರ್‌ ನೊಂದಿದ್ದರು...’

ಪ್ರಜಾವಾಣಿ ವಾರ್ತೆ
Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು:‘1983–84ರ ಆಸುಪಾಸು. ರಾಜ್ಯದ ಎಲ್ಲೆಡೆ ನವರಾತ್ರಿ ಉತ್ಸವದ ಸಂಭ್ರಮ. ದಸರಾ ಪೂಜೆಗೆ ಇನ್ನೊಂದು ದಿನ ಬಾಕಿ ಇರುವಾಗ ನರಸಿಂಹರಾಜ ಒಡೆಯರ್‌ ಅವರಿಗೆ ಮೈಸೂರಿನ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್‌! ಒಂದು ರೀತಿ ಆಘಾತಕ್ಕೆ ಒಳಗಾಗಿದ್ದರು.

ದಿಕ್ಕುತೋಚದೆ ಕಂಗಾಲಾ­ಗಿದ್ದರು. ಮೈಸೂರಿನ ವಕೀಲರು ಕೂಡ ಅವರ ಪರ ವಾದ ಮಾಡಲು ಮುಂದೆ ಬರಲಿಲ್ಲ. ಕೊನೆಗೆ ಅವರು ನನಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ಅಂದು ಸೀದಾ ಮೈಸೂರಿನ ನ್ಯಾಯಾಧೀಶರ ಮನೆಗೇ ಹೋಗಿ ಆ ಜಾಮೀನು ರಹಿತ ವಾರೆಂಟ್‌ ಹಿಂದಕ್ಕೆ ಪಡೆಯಲು ನೆರವಾದೆ. ನಂತರ ದಸರಾ ಪೂಜೆಗಳೂ ಸುಸೂತ್ರವಾಗಿ ನಡೆದವು....’ ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಒಡೆಯರ್‌ ಕುಟುಂಬದ ಜತೆಗಿನ ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

ಒಡೆಯರ್‌ ಮತ್ತು ಅವರ ಕುಟುಂಬದ ಬಹುತೇಕ ಎಲ್ಲ ಆಸ್ತಿ ವಿವಾದಗಳನ್ನು ನ್ಯಾಯಾಲ­ಯಗಳಲ್ಲಿ ಅವರ ಪರ ವಾದ ಮಾಡಿ­ದವರು ಪ್ರಮೀಳಾ. ಎಂತಹದ್ದೇ ಸಂದರ್ಭ ಎದುರಾದರೂ ಒಡೆಯರ್‌ ಅವರು ದೂರವಾಣಿ ಕರೆ ಮಾಡಿ ಕಾನೂನು ಸಲಹೆ ಪಡೆಯುತ್ತಿದ್ದರು ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಜಾಮೀನು ರಹಿತ ವಾರೆಂಟ್‌ ಏಕೆ?: ‘ಒಡೆಯರ್‌ ಒಡೆತನದ ವಿವಿಧ ಸಂಸ್ಥೆಗಳಲ್ಲಿನ ಸಿಬ್ಬಂದಿಗೆ ಭವಿಷ್ಯ ನಿಧಿ ಕೊಡುತ್ತಿಲ್ಲ ಎನ್ನುವ ಆರೋಪವನ್ನು ಅವರ ಮೇಲೆ ಆಗಿನ ಸರ್ಕಾರ ಹೊರಿಸಿತ್ತು. ಅಲ್ಲದೆ, 19 ವರ್ಷಗಳ ದಂಡ ಕಟ್ಟುವಂತೆಯೂ ತಾಕೀತು ಮಾಡಿತು. ಎಲ್ಲ ಆಸ್ತಿಯನ್ನೂ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವಾಗ ಭವಿಷ್ಯ ನಿಧಿ ಹೇಗೆ ಕಟ್ಟುವುದು ಎಂದು ರಾಜರು ಪ್ರಶ್ನೆ ಮಾಡಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಯಿತು. ಅದು ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತ್ತು’ ಎಂಬುದನ್ನು ಅವರು ವಿವರಿಸಿದರು.

‘1996ರಲ್ಲಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸರ್ಕಾರ ಜಾರಿಗೆ ತಂದ ಮಸೂದೆ ಮತ್ತೊಂದು ರೀತಿಯ ಆಘಾತ ಉಂಟು ಮಾಡಿತು. ಅದರ ವಿರುದ್ಧ ನಾನು ಮತ್ತು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಪತ್ನಿ ನಳಿನಿ ಚಿದಂಬರಂ ಅವರು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿದ್ದೇವೆ. ಇನ್ನೂ ಅದು ಇತ್ಯರ್ಥ ಆಗಿಲ್ಲ. ಒಟ್ಟಿನಲ್ಲಿ ರಾಜ್ಯದ ಎಲ್ಲ ಸರ್ಕಾರಗಳು ರಾಜಮನೆತನಕ್ಕೆ ದ್ರೋಹ ಬಗೆದಿರುವುದಂತೂ ಸತ್ಯ. ಈ ಮಸೂದೆ ವಿಧಾನಸಭೆಯಲ್ಲಿ ಅಂಗೀಕರಿಸಿದಾಗ ನಾನೊ­ಬ್ಬಳೇ ಅದನ್ನು ವಿರೋಧಿ­ಸಿ­ದ್ದು. ಇದು ರಾಜ್ಯಾಂಗ ವಿರೋಧಿ ಕ್ರಮ ಎಂದೂ ವಾದ ಮಾಡಿದ್ದೆ. ಆದರೆ, ಇಡೀ ವಿಧಾನಸಭೆ ಮಸೂದೆ ಪರ ಇದ್ದ ಕಾರಣ ನನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲ’ ಎಂದು ಅಂದಿನ ಘಟನೆಯನ್ನು ಮೆಲುಕು ಹಾಕಿದರು.

ಒಪ್ಪಂದದಲ್ಲಿ ಏನಿದೆ?: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ರಾಜರ ಆಳ್ವಿಕೆ ಇದ್ದ ಎಲ್ಲ ಸಂಸ್ಥಾನಗಳನ್ನು ಕೇಂದ್ರ ಸರ್ಕಾರ ವಶಕ್ಕೆ ತೆಗೆದುಕೊಂಡಿತು. ಆ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥರು ಕೂಡ ಯಾವುದೇ ಪ್ರತಿರೋಧ ತೋರದೆ ತಮ್ಮ ಸಂಸ್ಥಾನವನ್ನೂ  ಬಿಟ್ಟುಕೊಟ್ಟರು. ಆ ಸಂದರ್ಭದಲ್ಲಿ ಆದ ಒಪ್ಪಂದದ ಪ್ರಕಾರ ಅವರ ಎಲ್ಲ ಆಸ್ತಿಗಳನ್ನೂ ಅವರ ಮನೆತನಕ್ಕೇ ಬಿಟ್ಟುಕೊಡಬೇಕು. ಆದರೆ, ಈ ಮೂಲ ಒಪ್ಪಂದವನ್ನು ಉಲ್ಲಂಘಿಸಿ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು ಎಷ್ಟು ಸಮಂಜಸ. ಹೈದ್ರಾಬಾದ್‌ನ ನಿಜಾಮರು ಸೇರಿದಂತೆ ದೇಶದ ಹಲವು ಕಡೆ ತಮ್ಮ ಸಂಸ್ಥಾನಗಳನ್ನು ಕೇಂದ್ರ ಸರ್ಕಾರದ ಜತೆ ವಿಲೀನಗೊಳಿಸುವುದಕ್ಕೆ ವಿರೋಧ ಬಂತು. ಹೋರಾಟಗಳೇ ನಡೆಯಿತು. ಆದರೆ, ಮೈಸೂರಿನ ರಾಜಮಹಾರಾಜರು ಚಕಾರ ಎತ್ತದೆ ಇಡೀ ಸಂಸ್ಥಾನ ಬಿಟ್ಟುಕೊಟ್ಟರು. ಇವತ್ತು ಅವರಿಂದ ಆಸ್ತಿ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಇದು ನಿಜಕ್ಕೂ ದ್ರೋಹದ ಕೆಲಸ’ ಎಂದು ಅವರು ಹೇಳಿದರು.

ಮತ್ತೇನು ಮಾಡಬೇಕು?: ‘ರಾಜವಂಶಸ್ಥರ ಆಸ್ತಿಯನ್ನು ರಾಜಸ್ಥಾನದಲ್ಲಿ ಮಾಡಿರುವ ಹಾಗೆ ಟ್ರಸ್ಟ್‌ಗೆ ಒಪ್ಪಿಸಬೇಕು. ಮ್ಯೂಸಿಯಂ ಇತ್ಯಾದಿ ಸಾರ್ವಜನಿಕ ಕಾರ್ಯಗಳಿಗೆ ಅದನ್ನು ಬಳಸಬೇಕು. ಅದರಿಂದ ಬರುವ ಆದಾಯದಲ್ಲಿ ಸ್ವಲ್ಪ ಭಾಗವನ್ನು ರಾಜವಂಶಸ್ಥರಿಗೂ ಕೊಡಬೇಕು ಎನ್ನುವುದು ನನ್ನ ಅನಿಸಿಕೆ. ರಾಜಮಹಾರಾಜರನ್ನು ಇಂಗ್ಲೆಂಡ್‌, ಜಪಾನ್‌ ಸೇರಿದಂತೆ ಅನೇಕ ದೇಶಗಳಲ್ಲಿ ಅತ್ಯಂತ ಗೌರವದಿಂದ ಕಾಣುತ್ತಾರೆ. ಇಂತಹ ಸನ್ನಿವೇಶದಲ್ಲಿ ನಮ್ಮಲ್ಲೇಕೆ ಈ ಕಿರುಕುಳ. ಇತ್ತೀಚೆಗೆ ಪುಸ್ತಕೋತ್ಸವಕ್ಕೆ ಜಾಗ ಕೊಡುವ ವಿಷಯದಲ್ಲಿ ವಿವಾದ ಆಯಿತು. ಇದು ಕೂಡ ಅವರಿಗೆ ಬೇಸರವುಂಟು ಮಾಡಿತ್ತು ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT