ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆದ್ದಾರಿ’ ಹುಡುಗಿ!

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬಗಲಲ್ಲಿ ಎರಡೆರಡು ಪದವಿಗಳ ಸರ್ಟಿಫಿಕೇಟು. ಒಂದರಲ್ಲಿ ಚಿನ್ನದ ಪದಕದ ಗರಿಮೆ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೈತುಂಬ ಸಂಬಳದ ಉದ್ಯೋಗ. ಇಷ್ಟೆಲ್ಲಾ ಇದ್ದರೂ ಈಕೆಯನ್ನು ಸೆಳೆದದ್ದು ಬಣ್ಣದ ಲೋಕದ ಬೆಡಗು. ರ್‍ಯಾಂಪ್ ಮೇಲೆ ಹೆಜ್ಜೆಗಳನ್ನಿಡುತ್ತಲೇ ಜಾಹೀರಾತುಗಳಿಗಾಗಿ ಕ್ಯಾಮೆರಾ ಮುಖಾಮುಖಿಯಾದರು. ಬಹುಕಾಲ ರೂಪದರ್ಶಿಯ ವೃತ್ತಿಯಲ್ಲಿದ್ದರೂ ಅಭಿನಯದ ಒಲವೇನೂ ಮೂಡಿರಲಿಲ್ಲ. ಅದು ಆಸಕ್ತಿಯ ಕ್ಷೇತ್ರವೂ ಆಗಿರಲಿಲ್ಲ. ಚಿಕ್ಕಂದಿನಿಂದಲೂ ನೃತ್ಯವೆಂದರೆ ಅತೀವ ಪ್ರೀತಿ. ನೃತ್ಯದ ನಿರಂತರ ಕಲಿಕೆಯಲ್ಲಿ ಖುಷಿ.

ಹೀಗೆ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಈಕೆಗೆ ಎದುರಾದದ್ದು ನಯವಾದ ‘ಹೆದ್ದಾರಿ’ಯಲ್ಲಿ ಪಯಣಿಸುವ ಅವಕಾಶ. ತಾನಾಗಿಯೇ ಒಲಿದು ಬಂದ ಅದೃಷ್ಟವನ್ನು ಹೇಗೆ ಸ್ವೀಕರಿಸುವುದೆಂಬ ಗೊಂದಲ ಕಾಡಿದರೂ ಹೊಸ ಪಯಣದ ಆಹ್ವಾನ ಕುತೂಹಲ ಮೂಡಿಸಿತು. ಒಂದಷ್ಟು ಕಾಲ ನಡೆದು ನೋಡೋಣ ಎಂದು ‘ಹೆದ್ದಾರಿ’ಯಲ್ಲಿ ಕಾಲಿರಿಸಿದಾಕೆಗೆ ಅದು ರೋಮಾಂಚನ ಹುಟ್ಟಿಸಿದೆ.

ಬಾಲಿವುಡ್‌ ಹೊಸ್ತಿಲು ದಾಟಲು ದಕ್ಷಿಣದ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಬೇಕು ಎಂಬ ನಂಬಿಕೆ ಹೊತ್ತ ಈ ನಟಿ ಸಾಕ್ಷಿ ಅಗರ್‌ವಾಲ್‌. ವ್ಯಾಪಾರೀ ಕುಟುಂಬದಲ್ಲಿ ಜನಿಸಿದ ಸಾಕ್ಷಿ, ಹುಟ್ಟುವಾಗಲೇ ಚಿನ್ನದ ಚಮಚೆಯನ್ನು ಬಾಯಲ್ಲಿಟ್ಟುಕೊಂಡವರು. ಉತ್ತರಾಖಂಡದಲ್ಲಿದ್ದ ಕುಟುಂಬ ವ್ಯಾಪಾರ ವಹಿವಾಟಿನ ಸಲುವಾಗಿಯೇ ಚೆನ್ನೈಗೆ ಸ್ಥಳಾಂತರಗೊಂಡಿತು. ಚೆನ್ನೈನಲ್ಲಿ ಎಂಜಿನಿಯರಿಂಗ್‌ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ ಸಾಕ್ಷಿ, ಎಂಬಿಎ ಕಲಿಯಲು ಬೆಂಗಳೂರು ಹಾದಿ ಹಿಡಿದರು.

ಸಣ್ಣನೆ ಕುಡಿಯೊಡೆದ ಫ್ಯಾಷನ್ ಒಲವು ಮಾಡೆಲಿಂಗ್‌ ಜಗತ್ತನ್ನು ಪರಿಚಯಿಸಿತು. ಜಾಹೀರಾತುಗಳಿಗೆ ಮುಖವೊಡ್ಡುತ್ತಲೇ, ಎಂಎನ್‌ಸಿ ಕಂಪೆನಿಯೊಂದರಲ್ಲಿ ಉದ್ಯೋಗ ಹಿಡಿದರು. ತನ್ನಿಂದ ಅಭಿನಯ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದ ಅವರಿಗೆ ಉದ್ಯೋಗ ರುಚಿಸಲಿಲ್ಲ. ಮಾಡೆಲಿಂಗ್‌ಗೆ ಮರಳುವ ಪ್ರಯತ್ನ ಮಾಡುವಾಗಲೇ ಸಿಕ್ಕಿದ್ದು ‘ಹೆದ್ದಾರಿ’ ಚಿತ್ರ. ತುಮಕೂರು–ಬೆಂಗಳೂರು ಹೆದ್ದಾರಿಯಲ್ಲಿ ನಡೆಯುವ ಕಥನವನ್ನೊಳಗೊಂಡಿರುವ ಈ ಆ್ಯಕ್ಷನ್‌ ಚಿತ್ರದಲ್ಲಿ ಸಾಕ್ಷಿಗೆ ಬಬ್ಲಿ ಹುಡುಗಿಯ ಪಾತ್ರವಂತೆ.

ಮೊದಲ ಚಿತ್ರ ಬಿಡುಗಡೆಯಾಗುವ ಮುನ್ನವೇ ದ್ವಿಭಾಷಾ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಅಪೂರ್ವ ಅವಕಾಶ ಅವರದಾಗಿದೆ. ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ‘ಖರಾಬ್‌ ಸ್ಟೋರಿ’ ಎಂಬ ಚಿತ್ರದಲ್ಲಿ ಸಾಕ್ಷಿ ಕನ್ನಡದಲ್ಲಿ ಖಳನಾಯಕಿಯಾಗಿ ಅಬ್ಬರಿಸಿದ್ದರೆ, ಅದೇ ಸಿನಿಮಾದ ತಮಿಳು ಅವತರಣಿಕೆಯಲ್ಲಿ ಅವರು ಚಿತ್ರದ ನಾಯಕಿ.

ಈ ಮೂರೂ ಪಾತ್ರಗಳಲ್ಲೂ ವೈವಿಧ್ಯವಿದೆ ಎನ್ನುವ ಸಾಕ್ಷಿ, ಕನ್ನಡ ಕಲಿಯಲು ಶ್ರಮವಹಿಸುತ್ತಿದ್ದಾರಂತೆ. ಮೊದಲ ದಿನ ಸೆಟ್‌ನಲ್ಲಿ ಅವರ ಕನ್ನಡ ಸಂಭಾಷಣೆ ಕೇಳಿ ಚಿತ್ರತಂಡದವರೆಲ್ಲಾ ಬಿದ್ದುಬಿದ್ದು ನಕ್ಕಿದ್ದರಂತೆ. ಅದೊಂದು ತಮಾಷೆಯ ಅನುಭವ. ಹೀಗೆ ನಗುತ್ತಲೇ ಅಲ್ಲಿ ಅಭಿನಯ ಕಲಿತೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ತಮಿಳಿನಲ್ಲಿ ‘ನೋ ಪಾರ್ಕಿಂಗ್‌’ ಎಂಬ ಟೆಲಿಫಿಲ್ಮ್‌ ಮತ್ತು ‘ಜೆಲ್ಲಿನು ಒರು ಕಲ್ಲವರಂ’ ಎಂಬ ಮ್ಯೂಸಿಕ್‌ ಆಲ್ಬಂಗೆ ಬಣ್ಣಹಚ್ಚಿರುವ ಸಾಕ್ಷಿ, ‘ರಾಜ ರಾಣಿ’ ಎಂಬ ತಮಿಳು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಪಡೆಯುವ ಅನುಭವ ಬಾಲಿವುಡ್‌ ಪ್ರವೇಶಕ್ಕೆ ನೆರವಾಗುತ್ತದೆ ಎಂದು ನಂಬಿರುವ ಅವರು, ಸವಾಲಿನ ಪಾತ್ರಗಳಿಗೆ ಎದುರು ನೋಡುತ್ತಿದ್ದಾರೆ.

ಅಭಿನಯ, ಮಾಡೆಲಿಂಗ್‌ ವೃತ್ತಿಯಾದರೆ, ಪ್ರಪಂಚ ಪರ್ಯಟನೆ ಅವರ ಆಸಕ್ತಿ. ಎಲ್ಲಾ ದೇಶಗಳ ಪ್ರಮುಖ ಪ್ರದೇಶಗಳನ್ನೂ ನೋಡುವ ಹುಚ್ಚುತನ ಅವರದಂತೆ. ಈಗಾಗಲೇ ನೂರಾರು ದೇಶಗಳನ್ನು ಸುತ್ತಿರುವ ಅವರು ಅಮೆರಿಕವನ್ನು ಮಾತ್ರ ಇನ್ನೂ ನೋಡಿಲ್ಲವಂತೆ. ಸಾಹಸಮಯ ಕ್ರೀಡೆಗಳೆಂದರೆ ಅಚ್ಚುಮೆಚ್ಚು.

ಬಾಲ್ಯದಿಂದಲೂ ಓದು ಮತ್ತು ಪ್ರವಾಸದಲ್ಲಿ ಮುಳುಗಿರುತ್ತಿದ್ದ ಅವರಲ್ಲಿ, ನಟಿಯಾಗುತ್ತೇನೆಂಬ ಕಲ್ಪನೆಯೂ ಇರಲಿಲ್ಲವಂತೆ. ವ್ಯಾಪಾರೀ ಕುಟುಂಬದಲ್ಲೇ ಬೆಳೆದ ಅವರಿಗೆ ಇದ್ದದ್ದು ಭಾರತದ ಅತಿದೊಡ್ಡ ಮಹಿಳಾ ವ್ಯಾಪಾರಿಗಳ ಸಾಲಿನಲ್ಲಿ ಗುರ್ತಿಸಿಕೊಳ್ಳುವ ಹೆಬ್ಬಯಕೆ. ಸಿನಿಮಾ ಸೆಳೆತ ಮತ್ತೊಂದು ದಿಕ್ಕಿನೆಡೆಗೆ ಕೊಂಡೊಯ್ದಿತು. ಒಂದು ವೇಳೆ ನಿರೀಕ್ಷಿತ ಅವಕಾಶಗಳು ಸಿನಿಮಾದಲ್ಲಿ ಸಿಗದಿದ್ದರೆ ಕುಲಕಸುಬಿಗೆ ಮರಳಿ, ಕನಸನ್ನು ಈಡೇರಿಸಿಕೊಳ್ಳುತ್ತೇನೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT