ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ಕೊಡಿ’

Last Updated 13 ಡಿಸೆಂಬರ್ 2013, 8:58 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ನೀರಾವರಿ ಯೋಜನೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ರೂಪಿಸಿರುವ 2013ರ ಹೊಸ ಭೂ ಸ್ವಾಧೀನ ಕಾಯ್ದೆಯಂತೆ ಪರಿಹಾರ ಒದಗಿಸ­ಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿಯಲ್ಲಿ ಗುರುವಾರ ಯೋಜನೆಯಿಂದ ಭೂಮಿ ಕಳೆದು­ಕೊಳ್ಳು­ತ್ತಿರುವ 28 ಗ್ರಾಮಗಳ 2ನೇ ಸುತ್ತಿನ ರೈತರ ಸಭೆಯಲ್ಲಿ ಮಾತನಾಡಿದ ಮುಖಂಡರು, ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಹಸಿರು ಸೇನೆ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್ ಮಾತನಾಡಿ, ರೈತ ಸಂಘದ ಹೋರಾಟದ ಫಲವಾಗಿ ಯೋಜನೆ ಮಂಜೂ­ರಾಗಿದೆ. ಇದರಿಂದ ತಾಲ್ಲೂಕಿನ ರೈತರ ಅಭಿವೃದ್ಧಿ ಪಥ ಬದಲಾಗಲಿದೆ. ಕಾಮಗಾರಿಗೆ ಅಡ್ಡಿಪಡಿಸಲ್ಲ. ಆದರೆ ಪರಿಹಾರವನ್ನು ಮಾತ್ರ ಹೊಸ ಭೂಸ್ವಾಧೀನ ಕಾಯ್ದೆಯಂತೆ ನೀಡಬೇಕು. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡ ತಿಮ್ಲಾಪುರ ಶಂಕರಣ್ಣ ಮಾತನಾಡಿ ಹಳೆ ಭೂ ಸ್ವಾಧೀನ ಕಾಯಿದೆ­ಯಂತೆ ಸರ್ಕಾರ ಪರಿಹಾರ ಒದಗಿಸಿದರೆ ರೈತರಿಗೆ ಅನ್ಯಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ಮಾತನಾಡಿ, ಹೊಸ ಭೂ ಸ್ವಾಧೀನ ಕಾಯ್ದೆ ರಾಜ್ಯದಲ್ಲಿ ಇನ್ನೂ ಜಾರಿಯಾಗಿಲ್ಲ. ಅದೇ ನಿಯಮಾವಳಿಯಂತೆ ಪರಿಹಾರ ಬೇಕೆಂದರೆ ಕಾಮಗಾರಿ ವಿಳಂಬವಾಗುತ್ತದೆ. ಆದ್ದರಿಂದ ಕಳೆದ ಸಭೆಯ ಒಪ್ಪಂದದ ಕರಾರಿಗೆ ಸಮ್ಮತಿಸುವುದೇ ಸೂಕ್ತ ಎಂದು ಮನವಿ ಮಾಡಿದರು.

ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ಹಲ ಹೋರಾಟಗಳ ಫಲದಿಂದ ಯೋಜನೆ ಜಾರಿಯಾಗುತ್ತಿದೆ. ರೈತರು, ಅಧಿಕಾರಿಗಳು ಪರಿಹಾರದ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳದೇ ಪರಸ್ಪರ ಸಹಮತದಿಂದ ಕಾಮಗಾರಿ ಮುಗಿಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ನೀರಾವರಿ ಹೋರಾಟಗಾರ ಡಾ.ಎಸ್‌.­ಜಿ.ಪರಮೇಶ್ವರಪ್ಪ ಮಾತನಾಡಿ ತಾಲ್ಲೂಕಿನ ಜನತೆ ವಿಷಮ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿದ್ದಾರೆ. ಈ ಹಂತದಲ್ಲಿ ಕಿತ್ತಾಟ ಬೇಡ ಎಂದು ಮನವಿ ಮಾಡಿದರು.

ಯೋಜನೆಯ ಭೂ ಸ್ವಾಧೀನ ಅಧಿಕಾರಿ ರಾಜುಗೌಡ, ತಹಶೀಲ್ದಾರ್ ಕಾಮಾಕ್ಷಮ್ಮ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಮಲ್ಲೇಶ್, ತಿಗಳನಹಳ್ಳಿ ಶಂಕರಪ್ಪ, ಎಪಿಎಂಸಿ ಅಧ್ಯಕ್ಷ ಶಿವರಾಜು, ದಬ್ಬೆಘಟ್ಟ ಬಸವರಾಜು, ಕೊಡಲಾಗರ ಬಸವರಾಜು, ಚನ್ನಬಸವಯ್ಯ, ತೆಂಗು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗರಾಜು ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT