‘ಕೃಷ್ಣಲೀಲಾ’ದಲ್ಲಿ ದಿನಕ್ಕೊಂದು ರುಚಿ

7

‘ಕೃಷ್ಣಲೀಲಾ’ದಲ್ಲಿ ದಿನಕ್ಕೊಂದು ರುಚಿ

Published:
Updated:

ಕೆಂಗೇರಿ– ಉತ್ತರಹಳ್ಳಿ (ಡಾ.ವಿಷ್ಣುವರ್ಧನ್ ರಸ್ತೆ) ಮುಖ್ಯರಸ್ತೆಯಲ್ಲಿ ಸಾಗುವಾಗಲೇ ಆಕರ್ಷಿಸಿದ್ದು ಹಸಿರು ದೀಪಗಳಿಂದ ಅಲಂಕೃತಗೊಂಡಿದ್ದ ‘ಗ್ಲೋಬಲ್ ಕೃಷ್ಣಲೀಲಾ’ ವೆಜ್ ಹೋಟೆಲ್‌. ಮೈಲಸಂದ್ರದ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ಬಳಿ ಇರುವ ಈ ಹೋಟೆಲ್‌ ಜನಜಂಗುಳಿಯಿಂದ ಕೂಡಿತ್ತು.

ಹೋಟೆಲ್ ಪ್ರವೇಶಿಸುತ್ತಿದ್ದಂತೆ ಪುಳಿಯೋಗರೆ, ವಾಂಗಿಬಾತ್, ಬಿಸಿಬೇಳೆಬಾತ್, ವಿವಿಧ ತರಕಾರಿಗಳಿಂದ ಸಿದ್ಧವಾಗುತ್ತಿದ್ದ ದೋಸೆಗಳು, ಮಸಾಲೆ ದೋಸೆ, ತರಕಾರಿ ಫಲಾವ್‌ನ ಘಮಘಮ ಸುವಾಸನೆ ಸ್ವಾಗತಿಸಿತು. ಆತ್ಮೀಯವಾಗಿ ಬರಮಾಡಿಕೊಂಡ ಹೋಟೆಲ್ ಮಾಲೀಕ ಮಹಾವೀರ್ ಜೈನ್ ನಗುಮೊಗದೊಂದಿಗೆ ಹೋಟೆಲ್‍ನ ವಿಶೇಷ ಖಾದ್ಯಗಳನ್ನು ಪರಿಚಯಿಸಿದರು.

ಬೆಳಿಗ್ಗೆ 6.30ರಿಂದ ರಾತ್ರಿ 10.30 ಗಂಟೆಯವರೆಗೆ ದಕ್ಷಿಣ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ರುಚಿಯ ಹಲವಾರು ಬಗೆಯ ಖಾದ್ಯಗಳು ಇಲ್ಲಿ ದೊರೆಯುತ್ತವೆ.

‘ಯಾವ ಖಾದ್ಯದ ರುಚಿ ನೋಡುತ್ತೀರಾ?’ ಎಂದು ಹೇಳುತ್ತಲೇ ಮಸಾಲೆ ದೋಸೆ ತಂದು ರುಚಿ ನೋಡಿ ಎಂದರು.
ಉತ್ತರ ಮತ್ತು ದಕ್ಷಿಣ ಭಾರತದ ಊಟದ ವ್ಯವಸ್ಥೆ ಇಲ್ಲಿದ್ದು ಏಳೂ ದಿನವೂ ಒಂದೊಂದು ಬಗೆಯ ರುಚಿಯನ್ನು ಜನರಿಗೆ ಉಣಬಡಿಸಲಾಗುತ್ತಿದೆ. ಜೋಳದ ರೊಟ್ಟಿ, ಚಪಾತಿ, ಪೂರಿ, ಅಕ್ಕಿರೊಟ್ಟಿ, ಕಡಕ್ ರೊಟ್ಟಿ ಹೀಗೆ ನಿತ್ಯವೂ ಗ್ರಾಹಕರು ಹೊಸ ರುಚಿ ಸವಿಯಬಹುದು.

‘ತಿಂಡಿ ತಯಾರಿಸಲು ನಂದಿನಿ ತುಪ್ಪ, ರಿಫೈಂಡ್ ಆಯಿಲ್‍ ಮಾತ್ರ ಬಳಸುತ್ತೇವೆ, ಯಾವುದೇ ಕಾರಣಕ್ಕೂ ಕಲರ್ ಮತ್ತು ಟೇಸ್ಟಿಂಗ್ ಪೌಡರ್’ ಬಳಸುವುದಿಲ್ಲ ಎನ್ನುತ್ತಾರೆ ಮಹಾವೀರ್‌ ಜೈನ್‌.

‘ಪನೀರ್, ಬೇಬಿಕಾರ್ನ್, ಗೋಬಿ ಹಲವಾರು ಖಾದ್ಯಗಳಿಗೆ ಕಾಶ್ಮೀರದ ಚಿಲ್ಲಿಪೌಡರ್ ಬಳಸುತ್ತೇವೆ. ಅದರಿಂದ ಖಾದ್ಯಗಳು ಕೆಂಪಾಗುತ್ತವೆ. ಗೋಡಂಬಿ ಪೊಂಗಲ್‌, ಸಿಹಿ ಪೊಂಗಲ್‌, ಮೆಂತ್ಯಬಾತು, ಹೆಸರುಬೇಳೆ ಪಾಯಸ ನಮ್ಮ ಹೋಟೆಲ್‌ನ ಗ್ರಾಹಕರ ಅಚ್ಚುಮೆಚ್ಚಿನ ತಿನಿಸು’ ಎಂದು ಹೇಳುತ್ತಾರೆ ಅವರು.

ಅಕ್ಕಿ, ರವಾ, ಮೇತಿ, ಬಟರ್ ರೋಟಿ, ಚೆನ್ನಾ ಬತುರಾ, ಬಗೆಬಗೆಯ ಪರೋಟ, ನಾನ್, ಕುಲ್ಚಾಗಳು ತರಹೇವಾರಿ ಪಲ್ಯಗಳು, ಸೂಪ್, ಸಲಾಡ್, ವಿವಿಧ ಬಗೆಯ ದೋಸೆಗಳು ಇಲ್ಲಿ ಲಭ್ಯ. ಉತ್ತರ ಭಾರತೀಯ ಶೈಲಿಯ ಆಹಾರ ಸವಿಯನ್ನು ಇಲ್ಲಿ ಸವಿಯಬಹುದು.

ವಿಶೇಷವಾಗಿ ಐಸ್‍ಕ್ರೀಂ, ಜ್ಯೂಸ್, ವಿಭಿನ್ನ ಸ್ವಾದದ ಕಾಫಿ, ಟೀಗಳು ಲಭ್ಯ. 250 ಜನರು ಕೂರುವ ಹವಾನಿಯಂತ್ರಿತ ಪಾರ್ಟಿ ಹಾಲ್‌ ಇಲ್ಲಿದೆ.


ಮಹಾವೀರ್ ಜೈನ್

ಉಡುಪಿ ಜಿಲ್ಲೆಯವರಾದ ಮಹಾವೀರ್ ಜೈನ್, ಅರ್ಧಕ್ಕೆ ವಿದ್ಯಾಭ್ಯಾಸ ಸ್ಥಗಿತಗೊಳಿಸಿ ಮುಂಬೈಗೆ ಹೋದರು. ಅಲ್ಲಿ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡು ಡಿಪ್ಲೊಮಾ ಇನ್‌ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‌ ಪೂರೈಸಿದರು. ಬಳಿಕ ಬೆಂಗಳೂರಿಗೆ ಬಂದು ಹೋಟೆಲೊಂದರಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡಿದರು.

***


ರೆಸ್ಟೊರೆಂಟ್: ಗ್ಲೋಬಲ್ ಕೃಷ್ಣಲೀಲಾ ವೆಜ್ ಹೋಟೆಲ್
ಸಮಯ: ಬೆಳಿಗ್ಗೆ 6.30ರಿಂದ ರಾತ್ರಿ 10.30ರವರೆಗೆ
ವಿಶೇಷ : ಉತ್ತರ–ದಕ್ಷಿಣ ಭಾರತೀಯಶೈಲಿಯ ಆಹಾರ
ಸ್ಥಳ: ನಂ.6, ಡಾ.ವಿಷ್ಣುವರ್ಧನ್‌ ರಸ್ತೆ (ಕೆಂಗೇರಿ– ಉತ್ತರಹಳ್ಳಿ ರಸ್ತೆ), ಮೈಲಸಂದ್ರ, ಬಿಜಿಎಸ್ ಆಸ್ಪತ್ರೆ ಸಮೀಪ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !