ಸೋಮವಾರ, ಮಾರ್ಚ್ 8, 2021
22 °C

‘ವಾಗ್ದೇವಿ’ಗೆ ರಾಜ್ಯ ಪ್ರಶಸ್ತಿ ಗರಿ

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

Deccan Herald

ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ಟ್ರಸ್ಟ್‌ ಕಿವುಡರ ಶಾಲೆ ಎಂದ ಕೂಡಲೇ ಅದರ ಸ್ಥಾಪಕಿ ಡಾ. ಶಾಂತಾ ರಾಧಾಕೃಷ್ಣ ಹೆಸರು ನೆನಪಾಗದೇ ಇರದು. ಕಳೆದ 22 ವರ್ಷಗಳಿಂದ ವಾಗ್ದೇವಿಯಡಿಯಲ್ಲಿ ಕಿವಿ ಕೇಳಿಸದ, ಮಾತು ಬಾರದ ಮಕ್ಕಳಿಗೆ ಕಿವಿಯಾಗಿ, ದನಿಯಾಗಿ ಹಲವು ಕುಟುಂಬಗಳ ಪಾಲಿಗೆ ಬೆಳಕಾಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಈ ವರ್ಷದ ವಿಶ್ವ ಅಂಗವಿಲಕರದ ದಿನ ರಾಜ್ಯ ಸರ್ಕಾರದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

1996ರಲ್ಲಿ ಎಸ್‌ಜಿಎಸ್‌ ವಾಗ್ದೇವಿ ಟ್ರಸ್ಟ್ ಸ್ಥಾಪಿಸಿ ಕಿವುಡುತನವಿರುವ ಮಕ್ಕಳಿಗಾಗಿ ಶ್ರಮಿಸುತ್ತಿರುವ ಡಾ. ಶಾಂತಾ ರಾಧಾಕೃಷ್ಣ, ಕಿವಿ ಕೇಳಿಸದ ಮಕ್ಕಳಿಗೆ ಸಂಕೇತಗಳ ಮೂಲಕ ಮಾತು ಕಲಿಸುತ್ತಿದ್ದಾರೆ. ಮೈಸೂರಿನಲ್ಲಿ ಸ್ಪೀಚ್‌ ಅಂಡ್‌ ಹಿಯರಿಂಗ್‌ನಲ್ಲಿ ತರಬೇತಿ ಪಡೆದು, ಅಮೆರಿಕದಲ್ಲಿ ದುಡಿದವರು. ನಂತರ ಇಲ್ಲಿ ಬಂದು ಕಿವಿ ಕೇಳಿಸದ ಮಕ್ಕಳ ಶಾಲೆ ಆರಂಭಿಸುತ್ತಾರೆ. ಆರು ಮಕ್ಕಳಿಂದ ಶುರುವಾದ ಶಾಲೆಯಲ್ಲಿ ಈಗ 90 ಮಕ್ಕಳು ಕಲಿಯುತ್ತಿದ್ದಾರೆ. ನರ್ಸರಿಯಿಂದ ಎಸ್‌ಎಸ್‌ಎಲ್‌ಸಿ ವರೆಗೂ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಜೊತೆಗೆ ಮಾನಸಿಕ ತೊಂದರೆ ಇರುವ ಮಕ್ಕಳಿಗೆ ಪ್ರತ್ಯೇಕ ವಿಭಾಗ ನಡೆಸುತ್ತಿದ್ದಾರೆ. ಅಲ್ಲಿ ಸದ್ಯ 16 ಮಕ್ಕಳಿದ್ದಾರೆ.

ಪೋಷಕರಿಗೆ ತರಬೇತಿ:  ಅಂಗವಿಕಲ ಮಗುವೊಂದು ಸ್ವಾವಲಂಬಿಯಾಗಬೇಕಾದರೆ ಹೊರಗಿನ ತರಬೇತಿಗಿಂತ ಸದಾ ಜೊತೆಗಿರುವ ಹೆತ್ತವರ ಶ್ರಮವೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಡಾ. ಶಾಂತಾ ಮಕ್ಕಳಿಗೆ ಮಾತು ಕಲಿಸುವ ಮೊದಲು ಪೋಷಕರಿಗೆ ತರಬೇತಿ ನೀಡುತ್ತಾರೆ. ಮಗುವಿನ ಜೊತೆ ಹೆತ್ತವರು ಮನೆಯಲ್ಲಿ ಯಾವ ರೀತಿ ವರ್ತಿಸಬೇಕು, ಮನೆಯಲ್ಲಿ ಪ್ರತಿ ವಸ್ತುವಿನ ಪರಿಚಯ ಮಾಡಿಕೊಡುವ ಪರಿ ಹೇಗೆ ಎಂಬುದನ್ನು ಹೇಳಿಕೊಡುತ್ತಾರೆ.

ಶಿಕ್ಷಕರಿಗೂ ತರಬೇತಿ: ಸರ್ಕಾರ ಜಾರಿಗೆ ತಂದ ಸರ್ವಶಿಕ್ಷಾ ಅಭಿಯಾನದಂತೆ ಸರ್ವರಿಗೂ ಸಮಾನ ಶಿಕ್ಷಣದ ಅವಕಾಶ ನೀಡಬೇಕು. ದೈಹಿಕ ಅಸಮರ್ಥರು, ಬಡವರು ಎಲ್ಲರೂ ಒಂದೇ ಸೂರಿನಡಿ ಬೆರೆತು ಶಿಕ್ಷಣ ಪಡೆಯಬೇಕು ಎಂಬುದು ಇದರ ಉದ್ದೇಶ. ಆದರೆ ಅಂಗಾಂಗಗಳ ಸಮಸ್ಯೆ ಇರುವ ಮಕ್ಕಳಿಗೆ ಸಾಮಾನ್ಯ ಮಕ್ಕಳ ಜೊತೆ ಪಾಠಮಾಡುವುದು ಶಿಕ್ಷಕರಿಗೆ ಸವಾಲು. ಅದಕ್ಕಾಗಿ ಶಿಕ್ಷಕರಿಗೆ ತರಬೇತಿಯ ಅಗತ್ಯವಿದೆ. ಡಾ.ಶಾಂತಾ ಶ್ರವಣದೋಷವಿರುವ ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಎಂದು ಶಿಕ್ಷಕರಿಗೆ ತರಬೇತಿ ನೀಡುತ್ತಾರೆ.  ಮಕ್ಕಳಿಗೆ ಅರ್ಥವಾಗುವಂತೆ ಹೇಳಿಕೊಡುವ ಸಂಕೇತ ಭಾಷೆಯನ್ನು ಮೊದಲು ಶಿಕ್ಷಕರಿಗೆ ಹೇಳಿಕೊಡುತ್ತಾರೆ. ಸಂಕೇತ ಭಾಷೆ ಎಂದ ತಕ್ಷಣ ಮಾತಿಲ್ಲವೆಂದಲ್ಲ. ಸಂಕೇತವಾದರೂ ಅಲ್ಲಿಯೂ ತುಟಿಗಳ ಚಲನೆಗೆ ಅಷ್ಟೇ ಪ್ರಾಮುಖ್ಯ ಇರುತ್ತದೆ. ಒಂದು ಶಬ್ದವನ್ನು ಉಚ್ಛರಿಸುವಾಗ ತುಟಿಗಳ ಚಲನೆಯ ಮೂಲಕ ಮಕ್ಕಳು ಅದನ್ನು ಗ್ರಹಿಸುವಂತೆ ಮಾಡಲಾಗುತ್ತದೆ. 

ಶಾಂತಾ ಅವರ ಸೇವೆಗೆ ಈಗಾಗಲೇ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ವಾಗ್ದೇವಿ ಶಾಲೆಗೂ ವಿವಿಧ ಪ್ರಶಸ್ತಿಗಳು ಸಿಕ್ಕಿವೆ. ಶಾಂತಾ ಅವರಿಗೆ 2015 ರಲ್ಲಿ ರಾಷ್ಟ್ರೀಯ ಮಟ್ಟದ ‘ಪಿಯರ್‌ಸ್‌ ಟೀಚಿಂಗ್‌ ಅವಾರ್ಡ್’ ಕೂಡಾ ಸಂದಿದೆ. ಇದೀಗ ರಾಜ್ಯ ಸರ್ಕಾರ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

15 ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ (ಕರ್ಣಶಂಖ)

ವಾಗ್ದೇವಿ ಶಾಲೆಯಲ್ಲಿ ಕಲಿಯುವ 15 ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್‌ ಇಂಪ್ಲಾಂಟ್‌ (ಕರ್ಣಶಂಖ) ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸಲು ಸುಮಾರು ₹12 ಲಕ್ಷ ವೆಚ್ಚವಾಗುತ್ತದೆ. ಸರ್ಕಾರ 6ಲಕ್ಷ ಸಬ್ಸಿಡಿ ನೀಡುತ್ತದೆ. ಆದರೆ, ಈ ಮಕ್ಕಳಿಗೆ ದಾನಿಗಳ ನೆರವಿನಂದ 2ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್‌ ಅಳವಡಿಸಲಾಗಿದೆ. 

‘ಕಾಕ್ಲಿಯರ್‌ ಅಳವಡಿಸಿದ ತಕ್ಷಣ ಮಕ್ಕಳು ಸಾಮಾನ್ಯ ಮಕ್ಕಳ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಅನೇಕ ಪೋಷಕರು ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಆದರೆ, ನಿಧಾನವಾಗಿ ಈ ಮಕ್ಕಳು ಶಬ್ಧಗಳನ್ನು ಗ್ರಹಿಸಿ. ಮಾತು ಕಲಿಯಬೇಕಾಗಿದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಅನೇಕ ಪೋಷಕರು, ‘ಮಗು ಇನ್ನೂ ಏನೂ ಮಾತನಾಡುತ್ತಿಲ್ಲ’  ಎಂದು ಅಸಮಾಧಾನದಿಂದ ಮಾತನಾಡುತ್ತಾರೆ. ಅಂತವರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಕಾಕ್ಲಿಯರ್‌ ಇಂಪ್ಲಾಂಟ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದನ್ನು ಅಳವಡಿಸಿದ ನಂತರ ಏನು ಮಾಡಬೇಕು? ಅದರ ನಿರ್ವಹಣೆ ಹೇಗೆ? ಮುಂತಾದ ಮಾಹಿತಿಗಳನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸುತ್ತಿದ್ದೇನೆ. ಅದು ಜನವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ಶಾಂತಾ ರಾಧಾಕೃಷ್ಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು