ಕಡಿಮೆ ಬೆಲೆಗೆ ‘ಎಡಿಬಿ’ಯ ಅದ್ಭುತ ರುಚಿ

7

ಕಡಿಮೆ ಬೆಲೆಗೆ ‘ಎಡಿಬಿ’ಯ ಅದ್ಭುತ ರುಚಿ

Published:
Updated:
Deccan Herald

ತಟ್ಟೆಯಲ್ಲಿ ಮಟನ್ ಶೇರ್ವಾ ಹಾಗೂ ಮೊಸರು ಬಜ್ಜಿ ತುಂಬಿದ್ದ ಎರಡು ಸ್ಟೀಲ್ ಕಪ್‌ಗಳು. ಅವುಗಳ ಪಕ್ಕದಲ್ಲಿ ದೊನ್ನೆಯಲ್ಲಿ ಅಚ್ಚುಕಟ್ಟಾಗಿ ಆಸೀನವಾಗಿದ್ದ ಹಳ್ಳಿಸೊಗಡಿನ ದೊನ್ನೆ ಬಿರಿಯಾನಿ. ಆಗಷ್ಟೇ ದಮ್ ತೆಗೆದು ದೊನ್ನೆಗೆ ಹಾಕಿ ತಂದಿದ್ದರಿಂದ ಹವೆಯೂ ಬಳುಕುತ್ತಾ ಮೇಲಕ್ಕೆ ಏರುತ್ತಿತ್ತು. 

ಬಿರಿಯಾನಿ ನೋಡಿದ ಕೂಡಲೇ ರುಚಿಮೊಗ್ಗುಗಳು ತಾನಾಗಿಯೇ ಅರಳಿದವು. ಬಿರಿಯಾನಿ ಅನ್ನದಲ್ಲಿ ಹುದುಗಿದ್ದ ಚಿಕನ್ ತುಂಡುಗಳು ನಾಲಿಗೆಯನ್ನು ಕೆಣಕುತ್ತಿದ್ದವು. ಅರೇ...ತಡವೇಕೆ ಎಂದು ಗಬಕ್ಕನೇ ತುತ್ತು ಅನ್ನವನ್ನು ಬಾಯಿಗೇರಿಸಿದೆ. ಸಿಹಿ ಕಹಿ ಚಂದ್ರು ಅವರಂತೆ ಮ್....ಎಂದು ಬಾಯಿಯಾಡಿಸಿದೆ. ಆಹ್….ಎನ್ನುವ ಉದ್ಘಾರ ತಾನಾಗಿಯೇ ಹೊರಳಿತು. ‘ಬಿಸಿಯಾಗಿದ್ದಾಗಲೇ ಬಿರಿಯಾನಿಯನ್ನು ಬಾಯಿಗಿಳಿಸಬೇಕು’ ಅಂತ ಯಾರೋ ಹೇಳಿದ್ದ ಮಾತು ನಿಜವೆನಿಸಿತು.

ಬಿಸಿಬಿಸಿ ಬಿರಿಯಾನಿ, ಅದರ ಸ್ವಾದ ನಾಲಿಗೆಗೆ ತಾಕುತ್ತಿದ್ದಂತೆ ಆಹಾ ಎನಿಸುವಂತಿತ್ತು. ಜೀರಾಸಂಬಾ ಅಕ್ಕಿ, ಮಸಾಲೆ ಹಾಗೂ ಚಿಕನ್ ತುಂಡುಗಳನ್ನು ಹದವಾಗಿ ಬೇಯಿಸಿ, ನಂದಿನಿ ತುಪ್ಪವನ್ನು ಬೆರೆಸಿ ಧಮ್ ಕಟ್ಟಿದ್ದರಿಂದ ರುಚಿ ಸ್ವಾದಿಷ್ಟಕರವಾಗಿತ್ತು.

ಈ ಬಿರಿಯಾನಿ ಸಿಗುವುದು ಕತ್ರಿಗುಪ್ಪೆಯ ಅರಮನೆ ದೊನ್ನೆ ಬಿರಿಯಾನಿ ಹೋಟೆಲ್‌ನಲ್ಲಿ. ನಗರದ ನಾನಾ ಭಾಗಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಹೋಟೆಲ್, ‘ಎಡಿಬಿ’ ಹೋಟೆಲ್ ಎಂದೇ ಖ್ಯಾತಿ. ಹೆಸರಿಗೆ ತಕ್ಕಂತೆ ಅದ್ಭುತವಾದ ರುಚಿಯನ್ನೇ ಗ್ರಾಹಕರಿಗೆ ಉಣಬಡಿಸುತ್ತಿದೆ ಆ ಹೋಟೆಲ್. 

ನಂತರ ರುಚಿ ಸವಿದದ್ದು  ಗುಂಟೂರು ಚಿಲ್ಲಿ ಚಿಕನ್‌ನದ್ದು.  ಸಾಂಬಾರ ಪದಾರ್ಥಗಳು, ಉಪ್ಪು ಹಾಗೂ ಖಾರವನ್ನು ರುಚಿಗೆ ತಕ್ಕಷ್ಟು ಮಿಶ್ರಣ ಮಾಡಿ ಬಾಣಲೆಯಲ್ಲಿ ಹಾಕಿ ಹುರಿದಿದ್ದ ಚಿಕನ್ ತುಂಡುಗಳು ಅದ್ಭುತವಾದ ರುಚಿ ನೀಡಿತು. ಅದರ ಗ್ರೇವಿಯನ್ನಂತೂ ಚಪ್ಪರಿಸಿಕೊಂಡು ತಿನ್ನುತ್ತಿದ್ದರೆ ಮತ್ತಷ್ಟು ರುಚಿ ನೋಡು ಎನ್ನುತ್ತಿತ್ತು ಮನ. ಆದರೆ, ಏನು ಮಾಡೋದು ಪ್ಲೇಟ್‌ನಲ್ಲಿದ್ದ ಗ್ರೇವಿಯು ಗೊತ್ತಾಗದಂತೆ ಖಾಲಿಯಾಗಿತ್ತು. 

‘ಎಡಿಬಿ’ಯಲ್ಲಿ, ಚಿಕನ್ ಬಿರಿಯಾನಿ ಜೊತೆ ಮಟನ್ ಬಿರಿಯಾನಿ, ಮಟನ್ ಫ್ರೈ, ಕಬಾಬ್ ಸಹ ದೊರೆಯುತ್ತದೆ. ಕೆಲ ಶಾಖೆಗಳಲ್ಲಿ ಗ್ರಾಹಕರ ಬೇಡಿಕೆಗನುಗುಣವಾಗಿ ಮುದ್ದೆ, ಚಪಾತಿ ಹಾಗೂ ಚೈನೀಸ್ ಫುಡ್ ಸಹ ದೊರೆಯುತ್ತದೆ.

ಅಭಿಜಿತ್, ಶ್ರೀನಿವಾಸ್ ಹಾಗೂ ಶಿವು ‘ಎಡಿಬಿ’ಯ ಮಾಲೀಕರು. ಮಯ್ಯಾಸ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕರು, ಸ್ವಂತವಾಗಿ ಹೋಟೆಲ್ ಉದ್ಯಮ ಶುರುಮಾಡುವ ಇಂಗಿತದಿಂದ ಜೆ.ಪಿ.ನಗರದ ಮಾರೇನಹಳ್ಳಿ ಬಳಿ ‘ಹಳ್ಳಿ ದೊನ್ನೆ ಬಿರಿಯಾನಿ’ ಹೋಟೆಲ್ ಶುರುಮಾಡಿದ್ದರಂತೆ. ‘ಪ್ರಾರಂಭದಲ್ಲಿ, ಚಿಕನ್ ಬಿರಿಯಾನಿ ಹಾಗೂ ಚಿಕನ್‌ನ ಕೆಲ ಖಾದ್ಯಗಳನ್ನು ಮಾತ್ರ ಹೋಟೆಲ್‌ನಲ್ಲಿ ಪರಿಚಯಿಸಿದ್ದೆವು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅದೇ ಸಂದರ್ಭದಲ್ಲಿ ಹೋಟೆಲ್‌ ಹೆಸರಿನ ವಿಚಾರವಾಗಿ ಸಮಸ್ಯೆ ಎದುರಾಯಿತು. ಹೀಗಾಗಿ, ‘ಅರಮನೆ ದೊನ್ನೆ ಬಿರಿಯಾನಿ’ ಎಂದು ಹೆಸರು ಬದಲಿಸಿದೆವು’ ಎನ್ನುತ್ತಾರೆ ಅಭಿಜಿತ್.

24 ಮಸಾಲೆ ಪದಾರ್ಥ

ಬಿರಿಯಾನಿ ತಯಾರಿಗೆ ಬೇಕಾಗುವ ಎಲ್ಲ ರೀತಿಯ ಮಸಾಲೆ ಪದಾರ್ಥಗಳನ್ನು ಸ್ವತಃ ಅಭಿಜಿತ್ ಅವರೇ ಮನೆಯಲ್ಲಿ ತಯಾರಿಸುತ್ತಾರೆ. ‘ಒಟ್ಟು 24 ರೀತಿಯ ಮಸಾಲೆ ಪದಾರ್ಥಗಳನ್ನು ಬಿರಿಯಾನಿಗೆ ಬಳಸುತ್ತೇನೆ. ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಶುಂಠಿ ಹಾಗೂ ಮೆಣಸಿನಕಾಯಿ ನಾಟಿಯದ್ದೇ ಆಗಿರುತ್ತದೆ’ ಎಂಬುದು ಅವರ ವಿವರಣೆ.

ಪ್ರತಿಗಂಟೆಗೊಮ್ಮೆ ತಯಾರಿ

‘ಬಿರಿಯಾನಿಯನ್ನು ಬಿಸಿಯಾಗಿದ್ದಾಗಲೇ ತಿಂದರೆ ಹೆಚ್ಚು ರುಚಿಕರ. ಹೀಗಾಗಿ, ಪ್ರತಿ ಗಂಟೆಗೊಮ್ಮೆ ಐದು ಕೆ.ಜಿ. ಚಿಕನ್ ಹಾಗೂ ಐದು ಕೆ.ಜಿ ಅಕ್ಕಿಯೊಂದಿಗೆ ಬಿರಿಯಾನಿ ತಯಾರಿಸುತ್ತೇವೆ. ಹೋಟೆಲ್‌ಗೆ ಬರುವ ಪ್ರತಿ ಗ್ರಾಹಕರಿಗೆ ಬಿಸಿಯಾದ ಬಿರಿಯಾನಿಯನ್ನೇ ನೀಡುತ್ತೇವೆ. ತಣ್ಣಗಾದ ಬಿರಿಯಾನಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ. ಒಂದು ವೇಳೆ ಕೊಟ್ಟರೆ, ಸಿಬ್ಬಂದಿಯನ್ನು ಪ್ರಶ್ನಿಸಿ’ ಎನ್ನುತ್ತಾರೆ ಅಭಿಜಿತ್.

‘ಬಲ್ಕ್ ಆರ್ಡರ್‌ಗಳು ಹೋಟೆಲ್‌ಗೆ ಬರುತ್ತವೆ. ಗ್ರಾಹಕರು ಆರ್ಡರ್ ಮಾಡುವ ಸ್ಥಳಕ್ಕೆ ಹೋಟೆಲ್‌ನ ಸಿಬ್ಬಂದಿಯೇ ಹೋಗಿ, ಆಹಾರ ಪೂರೈಸಿ ಬರುತ್ತಾರೆ. ಅದಕ್ಕೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಸ್ವೀಕರಿಸುವುದಿಲ್ಲ. ಪಾರ್ಸೆಲ್‌ಗೆ ಮಾತ್ರ ಆಯಾ ಖಾದ್ಯಗಳ ದರದ ಮೇಲೆ ಹೆಚ್ಚಾಗಿ ಐದು ರೂಪಾಯಿಯನ್ನು ಸ್ವೀಕರಿಸುತ್ತೇವೆ’ ಅವರು.

₹ 69ಕ್ಕೆ 750 ಗ್ರಾಂ ‘ಎಡಿಬಿ’

ಎಡಿಬಿಯಲ್ಲಿ ದೊರೆಯುವ ಚಿಕನ್ ಬಿರಿಯಾನಿ ಬೆಲೆ ಕೇವಲ ₹ 69. ಇಷ್ಟು, ಕಡಿಮೆ ಬೆಲೆಗೆ 750 ಗ್ರಾಂ ಪ್ರಮಾಣದ ಬಿರಿಯಾನಿಯನ್ನು ಗ್ರಾಹಕರಿಗೆ ನೀಡುತ್ತಿದೆ ಎಡಿಬಿ.

‘ನಗರದ ಬಹುತೇಕ ಹೋಟೆಲ್‌ಗಳಲ್ಲಿ ಚಿಕನ್ ಬಿರಿಯಾನಿಯ ದರ ₹ 100 ಗಡಿ ದಾಟಿರುತ್ತದೆ. ಆಟೊ ಚಾಲಕರು, ದಿನಗೂಲಿ ಕಾರ್ಮಿಕರು, ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಮಧ್ಯಮ ವರ್ಗದವರು ಹಾಗೂ ಅದಕ್ಕಿಂತ ಕೆಳವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರಮಾಣದ ಹಾಗೂ ರುಚಿಕರವಾದ ಬಿರಿಯಾನಿ ಕೊಡುವ ಸಲುವಾಗಿ ಎರಡು ವರ್ಷಗಳ ಹಿಂದೆ ಹೊಟೆಲ್ ಶುರುಮಾಡಿದೆವು’ ಎನ್ನುತ್ತಾರೆ ಅಭಿಜಿತ್.

ಗ್ರಾಹಕರೇ ಬೆಳೆಸಿದ ಹೋಟೆಲ್ ಇದು

‘ದೊಡ್ಡ ಕನಸು ಹೊತ್ತು ಜೆ.ಪಿ.ನಗರದಲ್ಲಿ ಎಡಿಬಿ ಹೋಟೆಲ್ ಶುರುಮಾಡಿದೆವು. ಹೋಟೆಲ್‌ನ ಖಾದ್ಯಗಳಿಗೆ ಮಾರುಹೋದ ಗ್ರಾಹಕರು ಪದೇ ಪದೇ ಬರತೊಡಗಿದರು. ದೀಪಕ್‌ರಾವ್, ನವೀನ್, ಸತೀಶ್ ಹಾಗೂ ಮುನಿರಾಜು ಎಂಬುವರು ಎಡಿಬಿಗೆ ಕಾಯಂ ಗ್ರಾಹಕರು. ‘ನಿಮ್ಮಲ್ಲಿ ಲಭ್ಯವಾಗುವ ಖಾದ್ಯಗಳನ್ನು ತುಂಬಾ ರುಚಿಯಾಗಿ ಮಾಡುತ್ತೀರಿ. ಬೇರೆ ಕಡೆಯೂ ಎಡಿಬಿ ಶಾಖೆಗಳನ್ನು ಪ್ರಾರಂಭಿಸಿ’ ಎಂದು ಅವರು ಸಲಹೆ ನೀಡಿದರು’ ಎಂದು ನೆನೆಯುತ್ತಾರೆ ಅಭಿಜಿತ್.

‘ಅವರು ಹೇಳಿದ್ದು ಸರಿ ಎಂದು ನಮಗೂ ಅನಿಸಿತು. ಆದರೆ, ಬೇರೆ ಶಾಖೆಗಳನ್ನು ತೆರೆಯಲು ಅಗತ್ಯ ಹಣಕಾಸು ಇರಲಿಲ್ಲ. ನಮ್ಮ ಪರಿಸ್ಥಿತಿ ಅರಿತ, ಆ ನಾಲ್ವರು ಸ್ನೇಹಿತರು ಲಕ್ಷಾಂತರ ರೂಪಾಯಿ ಆರ್ಥಿಕ ನೆರವು ಒದಗಿಸಿದರು. ಅವರಂತೆಯೇ ಸಾಕಷ್ಟು ಮಂದಿ ಗ್ರಾಹಕರು, ಬೇರೆ ಶಾಖೆ ಆರಂಭಿಸುವಂತೆ ಒತ್ತಾಯಿಸಿದ್ದರು. ಹೀಗಾಗಿ, ಗ್ರಾಹಕರೇ ಬೆಳೆಸಿದ ಹೋಟೆಲ್’ ಎನ್ನುತ್ತಾರೆ.

***

ಹೋಟೆಲ್ ಹೆಸರು: ಅರಮನೆ ದೊನ್ನೆ ಬಿರಿಯಾನಿ ಹೋಟೆಲ್

ವಿಶೇಷ ಖಾದ್ಯ: ಚಿಕನ್ ದೊನ್ನೆ ಬಿರಿಯಾನಿ

ಬೆಲೆ: ಒಂದಕ್ಕೆ ₹ 69

ಸಂಪರ್ಕ: 6360738836 /08043944445

ಆನ್‌ಲೈನ್ ಆರ್ಡರ್‌ಗೆ: www.aramanedonnebiriyani.com

Tags: 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !