ಮಂಗಳವಾರ, ಏಪ್ರಿಲ್ 20, 2021
29 °C
ಹೊಸ ಕ್ಯಾಂಪಸ್ ಮರೆ ಮಾಚುವ ಕಳೆ ಗಿಡಗಳು, ಹಳೆ ಕ್ಯಾಂಪಸ್‌ಗೆ ಭೇಟಿ ನೀಡುತ್ತಿರುವ ಪ್ರವಾಸಿಗರು

ಬಂಡೀಪುರ: ಕಾಣದ ಹೊಸ ಸಫಾರಿ ಕೌಂಟರ್‌, ಪ್ರವಾಸಿಗರ ಸುತ್ತಾಟ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

‌ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿದ್ದ ಸಫಾರಿ ಟಿಕೆಟ್ ಕೌಂಟರ್ ಅನ್ನು ಮೇಲುಕಾಮನಹಳ್ಳಿ ಬಳಿಯ ಎಸ್‌ಟಿ ಪಿಎಫ್ ಕ್ವಾಟ್ರಸ್‌ ಬಳಿಗೆ ಸ್ಥಳಾಂತರಿಸಿ ತಿಂಗಳು ಕಳೆದರೂ ಹೆಚ್ಚಿನ ಪ್ರವಾಸಿಗರು ಈಗಲೂ ಹಳೆಯ ಸಫಾರಿ ಟಿಕೆಟ್ ಕೌಂಟರ್‌ಗೆ ಭೇಟಿ ನೀಡುತ್ತಿದ್ದಾರೆ.

ಹೊಸ ಜಾಗದಲ್ಲಿ ಮಾರ್ಗಸೂಚಿ ಮತ್ತು ನಾಮಫಲಕಗಳು ಪ್ರವಾಸಿಗರಿಗೆ ಕಾಣುವ ರೀತಿಯಲ್ಲಿ ಇಲ್ಲದೆ ಇರುವುದರಿಂದ ಹೊಸ ಕೌಂಟರ್ ಬಳಿ ಮೂಲಕವೇ ಹಾದು ಹೋದರೂ ಗೊತ್ತಾಗುತ್ತಿಲ್ಲ. 

ಮಾಹಿತಿ ಕೊರತೆಯಿಂದಾಗಿ ಹಲವಾರು ಪ್ರವಾಸಿಗರು ಬಂಡೀಪುರಕ್ಕೆ ಹೋಗಿ ವಾಪಸ್‌ ಬರುತ್ತಿದ್ದಾರೆ. ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಈ ದೃಶ್ಯ ಹೆಚ್ಚಾಗಿ ಕಾಣಸಿಗುತ್ತದೆ.

ಮಾಹಿತಿ ಕೊರತೆ: ಬಂಡೀಪುರಕ್ಕಿಂತ 5 ಕಿ.ಮೀ ಮೊದಲೇ ಹೊಸ ಸಫಾರಿ ಕೌಂಟರ್‌ ಇದ್ದು, ಕೌಂಟರ್‌ನ ಸ್ವಾಗತ ಕಮಾನು ಇನ್ನೂ ನಿರ್ಮಾಣ ಪೂರ್ಣಗೊಂಡಿಲ್ಲ. ಸದ್ಯ ರಾಷ್ಟ್ರೀಯ ಹೆದ್ದಾರಿ 67ರ ಬದಿಯಲ್ಲಿ ಸಫಾರಿ ಕೌಂಟರ್‌ ತೋರಿಸುವ ಫಲಕಗಳನ್ನು ಹಾಕಲಾಗಿದೆ. ಆದರೆ, ಬೇಲಿ ಹಾಗೂ ಲಾಂಟಾನ ಗಿಡಗಳು ಅಡ್ಡವಿರುವ ಕಾರಣ ರಸ್ತೆಯಲ್ಲಿ ಸಾಗುವಾಗ ಸಫಾರಿ ಕೌಂಟರ್‌ ಕಾಣುವುದಿಲ್ಲ.

ಬಂಡೀಪುರ ಪ್ರವೇಶದ್ವಾರವೂ ಜಿ.ಎಸ್‌.ಬೆಟ್ಟ ವಲಯಾರಣ್ಯಾಧಿಕಾರಿ ಕಚೇರಿ ಬಳಿ ಇರುವ ಕಾರಣ ನಾನಾ ಕಡೆಗಳಿಂದ ಬರುವ ವಾಹನ ಚಾಲಕರು ಫಲಕ ಗಮನಿಸುತ್ತಿಲ್ಲ.

ಗೊತ್ತೇ ಆಗುವುದಿಲ್ಲ: ‘ಮೇಲುಕಾಮನಹಳ್ಳಿ ಬಳಿ ಸಫಾರಿ ಕೌಂಟರ್ ಇದೆ ಎಂಬುದು ಗೊತ್ತಾಗುವುದಿಲ್ಲ. ಸಫಾರಿ ಕೌಂಟರ್ ಆವರಣದ ಹೊರಗೆ ಲಂಟನಾ ಇತ್ಯಾದಿ ಕಳೆಗಿಡಗಳು ಬೆಳೆದು ನಿಂತಿವೆ. ಇದು ಇಡೀ ಕ್ಯಾಂಪಸ್‌ ಅನ್ನು ಮರೆಮಾಚಿದೆ. ರಸ್ತೆಯಲ್ಲಿ ಉಬ್ಬುಗಳಿಲ್ಲ. ಹಾಗಾಗಿ, ವಾಹನಗಳು ವೇಗವಾಗಿ ಚಲಿಸುವುದರಿಂದ ಬದಿಯಲ್ಲಿ ಅಳವಡಿಸಿರುವ ಸ್ವಾಗತ ಕಮಾನು ಕಾಣಿಸುತ್ತಿಲ್ಲ. ಸಂರಕ್ಷಿತ ಪ್ರದೇಶಕ್ಕೆ ಪ್ರವೇಶ ನೀಡುವಾಗ ಇರುವಂತೆ ರಸ್ತೆಯ ಮಧ್ಯಭಾಗದಲ್ಲಿ ಸ್ವಾಗತ ಕಮಾನು ಅಳವಡಿಸಬೇಕು. ಇದಾದರೆ ಎಲ್ಲರಿಗೂ ಕಾಣುತ್ತದೆ. ಇಲ್ಲವಾದರೆ 12 ಕಿ.ಮೀ ದೂರ ಚಲಿಸಿ ಮತ್ತೆ ವಾಪಸ್ ಬರಬೇಕಾಗುತ್ತದೆ’ ಎಂದು ವಾಹನ ಚಾಲಕ ರಂಜನ್ ಕುಮಾರ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು