8 ತಿಂಗಳಾದರೂ ಬಾರದ ಫಲಿತಾಂಶ!

7
ಬೆಂಗಳೂರು ವಿ.ವಿ: ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಪರದಾಟ

8 ತಿಂಗಳಾದರೂ ಬಾರದ ಫಲಿತಾಂಶ!

Published:
Updated:

ಬೆಂಗಳೂರು: ಈಗಾಗಲೇ ಎರಡನೇ ಸೆಮಿಸ್ಟರ್‌ ಪರೀಕ್ಷೆ ಬರೆದು ಆಗಿದೆ. ಇದೇ ತಿಂಗಳು 31ರೊಳಗೆ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬೇಕು. ಆದರೆ, ಮೊದಲ ಸೆಮಿಸ್ಟರ್‌ನ ಫಲಿತಾಂಶವೇ ಇನ್ನೂ ಬಂದಿಲ್ಲ!

ಇದು ಬೆಂಗಳೂರು ವಿಶ್ವವಿದ್ಯಾಲಯದ ಎಂ.ಕಾಂ ವಿದ್ಯಾರ್ಥಿಗಳ ಸ್ಥಿತಿ. ಡಿಸೆಂಬರ್‌ ಹಾಗೂ ಜನವರಿ ತಿಂಗಳಿನಲ್ಲಿಯೇ ವಿದ್ಯಾರ್ಥಿಗಳು ಮೊದಲ ಸೆಮಿಸ್ಟರ್‌ ಪರೀಕ್ಷೆ ಬರೆದಿದ್ದಾರೆ. ಜುಲೈನಲ್ಲಿ ಎರಡನೇ ಸೆಮಿಸ್ಟರ್‌ ಪರೀಕ್ಷೆ ಆಗಿದೆ. ಆಗಸ್ಟ್‌ 13ರಿಂದ ಮೂರನೇ ಸೆಮಿಸ್ಟರ್‌ನ ತರಗತಿಗಳು ಕೂಡ ಪ್ರಾರಂಭವಾಗಿವೆ.

‘ಎರಡನೇ ವರ್ಷಕ್ಕೆ ಕಾಲಿಟ್ಟರೂ ಮೊದಲ ವರ್ಷದ ಮೊದಲ ಸೆಮಿಸ್ಟರ್‌ನಲ್ಲಿ ಪಾಸಾಗಿದ್ದೀವಾ ಅನ್ನುವುದೇ ಗೊತ್ತಿಲ್ಲ. ಅಕಸ್ಮಾತ್‌ ಅನುತ್ತೀರ್ಣರಾಗಿದ್ದರೆ ಪರೀಕ್ಷೆ ಬರೆಯುವುದು ಯಾವಾಗ? ಒಟ್ಟೊಟ್ಟಿಗೆ ಎರಡು ವರ್ಷದ ಪರೀಕ್ಷೆಯನ್ನು ಬರೆಯೋದಕ್ಕೆ ಸಾಧ್ಯವೇ? ಅದಲ್ಲದೇ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬೇಕಾದರೆ ಮೊದಲ ವರ್ಷದ ಅಂಕಪಟ್ಟಿ ಬೇಕೇ ಬೇಕು’ ಎಂದು ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ವೈ.ಆರ್‌. ಲೋಕೇಶ್‌ ಅಳಲು ತೋಡಿಕೊಂಡರು.

‘ಮೊದಲ ಸೆಮಿಸ್ಟರ್‌ ಫಲಿತಾಂಶ ಬಂದರೆ ನಮ್ಮ ಓದಿನ ಮಟ್ಟ ಹೇಗಿದೆ ಅನ್ನುವುದು ಗೊತ್ತಾಗುತ್ತದೆ. ತಡವಾಗಿ ಫಲಿತಾಂಶ ಬಂದರೆ ಮರುಮೌಲ್ಯಮಾಪನಕ್ಕೆ ಅವಕಾಶ ಸಿಗುವುದೂ ಅನುಮಾನ. ನಾವು ನೆಟ್‌, ಸ್ಲೆಟ್‌ ಪರೀಕ್ಷೆಗೆ ಸಿದ್ಧತೆ ನಡೆಸಬೇಕಿದೆ. ಇದಕ್ಕೆ ಅರ್ಜಿ ಹಾಕುವ ಸಮಯ ಕೂಡ ಬಂದಿದೆ. ಆದರೆ ಫಲಿತಾಂಶ ಇಲ್ಲದೆ ಎಲ್ಲವೂ ಗೊಂದಲಮಯ ಅನ್ನಿಸುತ್ತಿದೆ’ ಎಂದು ವಿದ್ಯಾರ್ಥಿನಿ ಬಿಂದು ಹೇಳಿದರು.

‘ನಾವು ಎಂ.ಕಾಂ ಓದುತ್ತಿದ್ದೇವೆ ಎನ್ನುವುದಕ್ಕೆ ನಮ್ಮ ಬಳಿ ಈಗ ದಾಖಲೆಯೇ ಇಲ್ಲ. ಒಂದೂ ಸೆಮಿಸ್ಟರ್‌ ಫಲಿತಾಂಶ ಬರದಿರುವುದು ಮಂದಿನ ಓದಿಗೆ ತೊಂದರೆಯಾಗಿದೆ. ಬೇರೆ ವಿಭಾಗಗಳ ಫಲಿತಾಂಶ ಕೊಟ್ಟಿದ್ದಾರೆ. ನಮಗೆ ಮಾತ್ರ ಹೀಗೆ. ಕೇಳಿದರೆ ವಿಶ್ವವಿದ್ಯಾಲಯದ ಕಡೆಯಿಂದ ಸರಿಯಾದ ಮಾಹಿತಿ ಕೂಡ ಸಿಗುತ್ತಿಲ್ಲ’ ಎಂದು ಅವರು
ದೂರಿದರು.

‘ತಡವಾಗಲು ಬೋರ್ಡ್‌ ಮೌಲ್ಯಮಾಪನ ಕಾರಣ’

‘ಒಬ್ಬ ಮೌಲ್ಯಮಾಪಕನಿಂದ ಇನ್ನೊಬ್ಬ ಮೌಲ್ಯಮಾಪಕ ನೀಡುವ ಅಂಕಗಳಲ್ಲಿ 11ರಿಂದ 12 ಅಂಕಗಳ ವ್ಯತ್ಯಾಸ ಮಾತ್ರ ಇರಬಹುದು. ಅದಕ್ಕಿಂತ ಹೆಚ್ಚಿದ್ದರೆ ಬೋರ್ಡ್‌ ಮೌಲ್ಯಮಾಪನ (ಮೂರನೇ ವ್ಯಕ್ತಿಯಿಂದ) ಮಾಡಬೇಕಾಗುತ್ತದೆ. 48 ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಹೀಗೆ ಮಾಡಬೇಕಾಯಿತು. ಇದರಿಂದ ಸ್ವಲ್ಪ ತಡವಾಯಿತು. ಆ ನಂತರ ಒಎಮ್‌ಆರ್‌ ಶೀಟ್‌ನಲ್ಲಿ 10 ರಿಂದ 15 ವಿದ್ಯಾರ್ಥಿಗಳ ಅಂಕದಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಹಾಗೇ ಫಲಿತಾಂಶ ಕೊಟ್ಟರೆ ಗೊಂದಲವಾಗುತ್ತದೆ ಎಂಬ ಕಾರಣದಿಂದ ಇದನ್ನು ಸರಿಪಡಿಸಲು ಹೇಳಿದ್ದೇವೆ. ಎರಡು ದಿನದಲ್ಲಿ ಫಲಿತಾಂಶ ನೀಡುವಂತೆ ಆದೇಶಿಸಿದ್ದೇನೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಶಿವರಾಜ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !