ಶುಕ್ರವಾರ, ಜನವರಿ 27, 2023
18 °C

ಚಾಮರಾಜನಗರ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯ ಬಸವ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಮಂಗಳವಾರ ಕಾಯಕಯೋಗಿ ಬಸವೇಶ್ವರ ಅವರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಠ ಮಾನ್ಯಗಳು, ಸರ್ಕಾರಿ ಸಂಸ್ಥೆಗಳು, ಸಂಘ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, 12ನೇ ಶತಮಾನದಲ್ಲಿ ಅವರು ಜಗತ್ತಿಗೆ ಸಾರಿದ ಸಂದೇಶಗಳನ್ನು ಸ್ಮರಿಸಲಾಯಿತು. ‌

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತ ವತಿಯಿಂದ ಅತ್ಯಂತ ಸರಳವಾಗಿ ಆಚರಿಸಲಾಯಿತು. ಗ್ರಾಮೀಣ ಭಾಗಗಳಲ್ಲಿ ಜನರು ಬಸವಣ್ಣ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ಮಾಡಿ, ಕಾಯಕಯೋಗಿಯ ಜನ್ಮದಿನವನ್ನು ಆಚರಿಸಿದರು.

ವೀರಶೈವ–ಲಿಂಗಾಯದ ಸಮುದಾಯದವರು ತಮ್ಮ ಮನೆಗಳಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಸ್ನೇಹಿತರು, ನೆಂಟರಿಷ್ಟರನ್ನು ಆಮಂತ್ರಿಸಿ ಸಿಹಿ ಅಡುಗೆ ಸಿದ್ಧಪಡಿಸಿ ಬಡಿಸಿದರು.

ವಿವಿಧ ಕಡೆಗಳಲ್ಲಿ ಆಚರಣೆ

ಸಾಧನೆಗೆ ಸ್ಪೂರ್ತಿ: ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ವಿರಕ್ತ ಮಠದ ಗದ್ದಿಗೆ ಆವರಣದಲ್ಲಿ ಶ್ರೀ ಮಠದ ವತಿಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು.

ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ‘12 ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಪುರುಷ ಬಸವಣ್ಣ. ಸಮ ಸಮಾಜದ ಕನಸನ್ನು ಹೊಂದಿದ್ದ ಅವರು ಅಂದಿನ ಕಾಲದಲ್ಲೇ ಅನುಭವ ಮಂಟಪ ಸ್ಥಾಪಿಸಿ ಎಲ್ಲ ವರ್ಗದವರಿಗೂ ಸಮಾನ ಪ್ರಾತಿನಿಧ್ಯ ನೀಡಿ ಸಮಾನತೆಯ ಸಂದೇಶ ಸಾರಿ ಯುಗ ಪುರುಷರಾದರು. ಅವರ ಕಾಯಕ ತತ್ವ, ನಡೆ, ನುಡಿ, ಆಚಾರ-ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಸಲಹೆ ನೀಡಿದರು.

ಬಸವ ಜಯಂತಿ ಅಂಗವಾಗಿ ಜನರಿಗೆ ಮಜ್ಜಿಗೆ ಹಾಗೂ ಪಾನಕ ವಿತರಿಸಲಾಯಿತು.

ವೀರಶೈವ ಮಹಾಸಭಾ: ನಗರದ ಸತ್ತಿ ರಸ್ತೆಯಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ‘12ನೇ ಶತಮಾನದಲ್ಲಿ ಸ್ಥಾಪನೆಗೊಂಡ ವೀರಶೈವ ಲಿಂಗಾಯತ ಧರ್ಮ ಹಾಗು ಬಸವಣ್ಣ ಶರಣರ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿದೆ. ಇಂಥ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರು ಪುಣ್ಯವಂತರು. ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ ಹಾಗು ಜಾತಿ ವ್ಯವಸ್ಥೆಯ ವಿರುದ್ದ ಹೋರಾಟ ಮಾಡಿ ಪ್ರತ್ಯೇಕ ಧರ್ಮವನ್ನು ಸ್ಥಾಪನೆ ಮಾಡಿದ್ದ ಬಸವಣ್ಣ, ಜಗತ್ತಿಗೆ ಸರ್ವ ಶೇಷ್ಠ ಸಂತರು’ ಎಂದರು.

ನಗರ ಮಠದ ಚೆನ್ನಬಸವರಾಜ ಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಅವರು ಮಾತನಾಡಿ, ‘ಬಸವಣ್ಣ ಕಟ್ಟಿದ ಅನುಭವ ಮಂಟಪ ಇಂದಿನ ಸಂಸತ್‌ಗೆ ಸಮವಾಗಿದೆ. ಎಲ್ಲಾ ಜಾತಿ ವರ್ಗದವರನ್ನು ಸೇರಿಸಿಕೊಂಡು ಅನುಭವ ಮಂಟಪ ಸ್ಥಾಪನೆ ಮಾಡುವ ಜೊತೆಗೆ ವರ್ಗ ಹಾಗು ಜಾತಿ ರಹಿತ ಸಮಾಜ ನಿರ್ಮಾಣ ಮಾಡುವ ಕನಸು ಕಂಡಿದ್ದರು. ಇಂಥ ಬಸವಣ್ಣ ಅವರ ಅನುಯಾಯಿಗಳಾದ ನಾವೆಲ್ಲರೂ ಅವರ ಆಶಯದಂತೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸೋಣ ಎಂದರು.

ಮುಡುಕನಪುರದ ಶ್ರೀ ಷಡಕ್ಷರಿ ಸ್ವಾಮೀಜಿ, ಮಹಾಸಭಾದ ರಾಜ್ಯ ಪರಿಷತ್ ಸದಸ್ಯ ಹೆಗ್ಗವಾಡಿಪುರ ಎನ್‌ರಿಎಚ್ ಮಹದೇವಸ್ವಾಮಿ, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೋಡಸೋಗೆ ಶಿವಬಸಪ್ಪ ಮಾತನಾಡಿ, ತಾಲ್ಲೂಕು ಅಧ್ಯಕ್ಷ ಹೊಸೂರು ನಟೇಶ್, ವೀರಶೈವ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ಐಟಿಐ ಮಹದೇವಸ್ವಾಮಿ, ಮಹಸಭಾದ ಖಜಾಂಚಿ ಪಿ. ಮರಿಸ್ವಾಮಿ, ನಿರ್ದೇಶಕರಾದ ಜಿ. ಕುಮಾರಸ್ವಾಮಿ, ರಾಜೇಂದ್ರ, ಎಂ.ಪಿ.ತಮ್ಮಣ್ಣ, ನಾಗರಾಜು, ಶಿವಪಾದಪ್ಪ, ಬಸವರಾಜು, ಲತಾಜಯಣ್ಣ, ಪಾರ್ವತಮ್ಮ, ವಿಮಲಾಜಯಶಂಕರ್, ಮಂಜುಳಾ, ನಿರ್ಮಲ, ಗುರುಮಲ್ಲಮ್ಮ, ಮೂಡ್ಲುಪುರ ನಂದೀಶ್, ಮಹೇಶ್, ಪುಟ್ಟಸ್ವಾಮಿ, ಸ್ವಾಮಿ ಮತ್ತಿತರರು ಇದ್ದರು.

ಸೇವಾ ದಳ: ನಗರದ ಭಾರತ ಸೇವಾದಳದ ಜಿಲ್ಲಾ ಸಮಿತಿ ಕಚೇರಿಯಲ್ಲಿ ಸೇವಾದಳ ಸಂಸ್ಥಾಪಕ ಎನ್.ಎಸ್.ಹರ್ಡೀಕರ್ ಹಾಗೂ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಸಮಿತಿಯ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ  ಅವರು ಇಬ್ಬರ ಭಾಚಿತ್ರಕ್ಕೂ ಪುಷ್ಪಾರ್ಚನೆ ಮಾಡಿದರು. 

ಸೇವಾದಳದ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಕೇಂದ್ರ ಸಮಿತಿ ಸದಸ್ಯ ನಾಗರಾಜು, ತಾಲ್ಲೂಕು ಉಪಾಧ್ಯಕ್ಷ ಬಂಗಾರ ಗಿರಿ ನಾಯಕ ಕಾರ್ಯದರ್ಶಿ ನಾಗರಾಜು, ಮಹದೇವಪ್ಪ, ರಾಜು, ಮಹೇಶ್, ಕೆ.ವೀರಯ್ಯ ಇದ್ದರು.

ಜಿಲ್ಲಾಸ್ಪತ್ರೆ: ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯಲ್ಲಿ ಬಸವ ಜಯಂತಿ ಆಚರಿಸಲಾಯಿತು.  ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೃಷ್ಣಪ್ರಸಾದ್ ರವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಅರಿವಳಿಕೆ ತಜ್ಞರಾದ ಡಾ.ಸಂಜೀವ್, ಡಾ.ಮಹೇಶ್, ವೈದ್ಯರಾದ ಡಾ.ಸತ್ಯಪ್ರಕಾಶ್ ದೊಂಗಡೆ, ಡಾ.ಬಸವರಾಜು ಅಟ್ಲಾಪುರೆ, ಡಾ.ರವಿಶಂಕರ್, ಡಾ.ನವೀನ್ ಚಂದ್ರ, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ರಾಜಕೀಯ ಪಕ್ಷಗಳ ಮುಖಂಡರಿಂದ ಬಸವಣ್ಣನ ಸ್ಮರಣೆ

ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳಲ್ಲೂ ಬಸವ ಜಯಂತಿ ಆಚರಿಸಲಾಯಿತು. 

ಜಿಲ್ಲಾ ಕಾಂಗ್ರೆಸ್: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಮುಖಂಡರು ಪುಷ್ಪಾರ್ಚನೆ ಮಾಡಿದರು. 

ನಂತರ, ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ‘12 ಶತಮಾನದಲ್ಲಿ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಮಾನವತಾವಾದಿ ಬಸವಣ್ಣ. ಅವರ ಕಾಯಕ ತತ್ವ ಇಡೀ ಮನುಕುಲಕ್ಕೆ ಮಾದರಿ. ನುಡಿದಂತೆ ನಡೆಯಬೇಕೆಂಬ ಆದರ್ಶ ಮಾತು ಸಾರ್ವಕಾಲಿಕವಾದುದು’ ಎಂದರು.

ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಲತಾ ಜಯಣ್ಣ ಕೆಪಿಸಿಸಿ ಸದಸ್ಯ ಸೈಯದ್‌ ರಫಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬಸವರಾಜು ಜಯಸಿಂಹ, ಪ್ರಧಾನ ಕಾರ್ಯದರ್ಶಿ ಚಿಕ್ಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮದ್ ಅಜ್ಗರ್‌ಮುನ್ನಾ, ವಕೀಲ ಅರುಣ್‌ಕುಮಾರ್, ಕಾಗಲವಾಡಿ ಚಂದ್ರು ಎಪಿಎಂಸಿ ಸದಸ್ಯ ನಾಗೇಂದ್ರ, ಮುಖಂಡರಾದ ಸುಹೇಲ್‌ ಖಾನ್, ಪುಟ್ಟಸ್ವಾಮಿ, ಮಲ್ಲಿಕಾರ್ಜುನ್, ಲಿಂಗನಪುರ ಅಂಕಯ್ಯ, ಕೋಡಿಮೋಳೆ ಪ್ರಕಾಶ್, ಹೋಮ್ಮ ನಾಗನಾಯಕ ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದಾರೆ.

ಬಿಜೆಪಿ ಕಚೇರಿ: ನಗರದ ಮೇಘಾ ಕಾಂಪ್ಲೆಕ್ಸ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಪಕ್ಷದ ಮುಖಂಡರು ಮಹಾನ್‌ಮಾನವತಾವದಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರೊಂದುಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಫೃಥ್ವಿರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಎಂ. ಸುಂದ್ರಪ್ಪ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ನಗರ ಮಂಡಲ ಅಧ್ಯಕ್ಷ ಸುಂದರ್‌ರಾಜ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ರಾಜ್ಯ ಯುವಮೋರ್ಚಾದ ಕಾರ್ಯಕಾರಣಿ ಸದಸ್ಯ ಪ್ರಶಾಂತ್, ಎಸ್.ಸಿ.ಮೋರ್ಚಾದ ಅಧ್ಯಕ್ಷ ಶಿವು, ನಗರಸಭಾ ಸದಸ್ಯ ರಾಘವೇಂದ್ರ (ಗುಂಡಣ್ಣ), ದೊಡ್ಡರಾಯಪೇಟೆ ಮಹದೇವಸ್ವಾಮಿ, ಮಾರ್ಕೇಟ್‌ ಕುಮಾರ್, ಶಂಕರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನಲ್ಲೂರು ಮಹದೇವಪ್ಪ ಇತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು