ಬುಧವಾರದ ಬಜಾರ್‌ನಲ್ಲಿ ಕಿಕ್ಕಿರಿದ ಜನಸಂದಣಿ..!

7
ದೀಪಾವಳಿ ಅಮಾವಾಸ್ಯೆ; ಎಲ್ಲೆಡೆ ಶ್ರದ್ಧಾ–ಭಕ್ತಿ, ಸಡಗರ ಸಂಭ್ರಮದಿಂದ ಲಕ್ಷ್ಮೀ ಆರಾಧನೆ

ಬುಧವಾರದ ಬಜಾರ್‌ನಲ್ಲಿ ಕಿಕ್ಕಿರಿದ ಜನಸಂದಣಿ..!

Published:
Updated:
Deccan Herald

ವಿಜಯಪುರ: ಎತ್ತ ನೋಡಿದರೂ ಜನಸಾಗರ. ಬಜಾರ್‌ನಲ್ಲಿ ಹಾದು ಹೋಗಲು ಹಿಂದೇಟು ಹಾಕುವಂಥ ಸನ್ನಿವೇಶ. ನಸುಕಿನಿಂದ ರಾತ್ರಿವರೆಗೂ ಬಿಡುವಿಲ್ಲದ ವಹಿವಾಟು...

ವಿಜಯಪುರದ ಬಸವೇಶ್ವರ ವೃತ್ತದಿಂದ ಹಿಡಿದು ಜಿಲ್ಲಾ ಕ್ರೀಡಾಂಗಣದವರೆಗಿನ ರಸ್ತೆಯ ಆಸುಪಾಸು, ಆಶ್ರಮ ರಸ್ತೆಯ ಉದ್ದಕ್ಕೂ, ಬಿಎಲ್‌ಡಿಇ ಕಾಲೇಜು ಸುತ್ತಮುತ್ತ, ಸೊಲ್ಲಾಪುರ ರಸ್ತೆ, ಜಲ ನಗರ, ಇಬ್ರಾಹಿಂಪುರ ರೈಲ್ವೆ ಗೇಟ್‌, ಮಹಾತ್ಮಗಾಂಧಿ ರಸ್ತೆ, ಸಿದ್ಧೇಶ್ವರ ಗುಡಿ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಬುಧವಾರ ದಿನವಿಡಿ ತಾತ್ಕಾಲಿಕ ಬಜಾರ್‌ಗಳದ್ದೇ ದರ್ಬಾರು.

ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀ ಪೂಜಾ ಸಾಮಗ್ರಿ ಖರೀದಿಗೆ ನಗರವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಸಾಗರೋಪಾದಿ ಮಾರುಕಟ್ಟೆಗೆ ಕುಟುಂಬ ಸಮೇತ ತಂಡೋಪ ತಂಡವಾಗಿ ಏಕಕಾಲಕ್ಕೆ ದಾಂಗುಡಿಯಿಟ್ಟ ಪರಿಣಾಮ ಬಹುತೇಕ ರಸ್ತೆಗಳು ಜನದಟ್ಟಣೆ, ವಾಹನ ದಟ್ಟಣೆಯಿಂದ ಕಿಕ್ಕಿರಿದಿದ್ದವು.

ಇನ್ನೂ ನಗರದ ಹೃದಯ ಭಾಗದಲ್ಲಿರುವ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಲಿಡಲು ಜಾಗವಿರಲಿಲ್ಲ. ಮಂಗಳವಾರ ಮುಸ್ಸಂಜೆಯಿಂದಲೇ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ರಸ್ತೆ ನಡುವೆಯೇ ತಾತ್ಕಾಲಿಕ ಅಂಗಡಿ ಮಳಿಗೆ ತೆರೆದಿದ್ದ ವ್ಯಾಪಾರಿಗಳು ಭರ್ಜರಿ ವಹಿವಾಟು ನಡೆಸಿದರು.

ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು, ಚೆಂಡು ಹೂವಿನ ರಾಶಿ, ಬೃಹತ್‌ ಹಾರಗಳು ಎಲ್ಲೆಡೆ ಗೋಚರಿಸಿದವು. ಹಣ್ಣಿನ ದರ ಸೇರಿದಂತೆ ಹೂವಿನ ದರವೂ ಗಗನಮುಖಿಯಾಗಿತ್ತು. ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಿಕೊಳ್ಳಲು ಬಜಾರ್‌ಗೆ ದಾಂಗುಡಿಯಿಟ್ಟು ಭರ್ಜರಿ ಖರೀದಿ ನಡೆಸಿದವರೇ ಹೆಚ್ಚು.

ದುಬಾರಿ ದುನಿಯಾ: ಚೌಕಾಶಿ

ನಸುಕಿನಲ್ಲೇ ಖರೀದಿಗೆ ತೆರಳಿದವರಿಗೆ ದುಬಾರಿ ದುನಿಯಾದ ಶಾಕ್‌ ತಗುಲಿತು. ಸೂರ್ಯನ ತಾಪ ಇಳಿದಂತೆ ವಸ್ತುಗಳ ಧಾರಣೆಯೂ ಇಳಿಮುಖವಾಗಿದ್ದು, ಮುಸ್ಸಂಜೆ, ರಾತ್ರಿ ಖರೀದಿ ನಡೆಸಿದ ಗ್ರಾಹಕರಿಗೆ ತುಸು ಕಡಿಮೆ ಧಾರಣೆಗೆ ಪೂಜಾ ಸಾಮಗ್ರಿ ದೊರೆತವು.

ಚೆಂಡು ಹೂವು ಆರಂಭದಲ್ಲಿ ಒಂದು ಕೆ.ಜಿ.ಗೆ ₹ 200ರಂತೆ ಮಾರಾಟವಾದರೆ ಸಂಜೆ ₹ 100, ರಾತ್ರಿ ಇನ್ನೂ ಕಡಿಮೆ ಬೆಲೆಗೆ ಬಿಕರಿಯಾಯ್ತು. ಬಿಳಿ ಸೇವಂತಿಗೆ, ಹಳದಿ ಸೇವಂತಿಗೆ ಧಾರಣೆ ಬೆಳಿಗ್ಗೆ ₹ 160 ಇದ್ದರೆ ಸಂಜೆ ₹ 100, ಕಬ್ಬಿನ ಜಲ್ಲೆ ಜೋಡಿಗೆ ₹ 30, ಕುಂಬಳಕಾಯಿ ₹ 80ರಿಂದ ₹ 100, ಚೆಂಡು ಹೂವಿನ ಬಂಡಲ್‌ ಎರಡಕ್ಕೆ ₹ 30ರಿಂದ 40, ಬಟನ್ ಗುಲಾಬಿ ಕೆಂಪು, ಹಳದಿ ಒಂದು ಕೆ.ಜಿ.ಗೆ ₹ 100.

ನೀಲಿ ಸೇವಂತಿಗೆ ₹ 100ರಿಂದ ₹ 120, ಒಂದು ಡಜನ್‌ ಬಾಳೆಹಣ್ಣು ₹ 30ರಿಂದ 50, ತೆಂಗಿನ ಕಾಯಿ ₹ 20ರಿಂದ ₹ 40, ಪೂಜೆಗೆ ಬಳಸುವ ವೀಳ್ಯದ ಎಲೆ ₹ 10ಕ್ಕೆ 25, ಬಾಳೆ ಕಂದು ಜೋಡಿಗೆ ₹ 60ರಿಂದ ₹ 300, ಐದು ತರಹದ ತಲಾ ಐದೈದು ಹಣ್ಣಿನ ಬುಟ್ಟಿಗೆ ₹ 500ರ ಧಾರಣೆ ವಿಜಯಪುರದ ವಿವಿಧ ಮಾರುಕಟ್ಟೆಗಳಲ್ಲಿತ್ತು. ತರಹೇವಾರಿ ಹೂವಿನ ಹಾರಗಳು ಮಾರುಕಟ್ಟೆಯಲ್ಲಿ ಸೂಜಿಗಲ್ಲಿನಂತೆ ಗ್ರಾಹಕರನ್ನು ಆಕರ್ಷಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !