ಬುಧವಾರ, ನವೆಂಬರ್ 20, 2019
26 °C
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಆರೋಪ-– ಪ್ರತ್ಯಾರೋಪ

‘ನವ ನಗರೋತ್ಥಾನ’: ಶಾಸಕರ ‘ಕುರುಕ್ಷೇತ್ರ’

Published:
Updated:

ಬೆಂಗಳೂರು: ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ಯನ್ನು ರದ್ದುಪಡಿಸಿರುವ ಬಿಜೆಪಿ ಸರ್ಕಾರ, ಅದರ ಹೆಸರನ್ನು ‘ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ’ ಎಂದು ಬದಲಾಯಿಸಿ ಜಾರಿಗೊಳಿಸಲು ಮುಂದಾಗಿದೆ. ಈ ವಿಚಾರ ನಗರದ ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರ ನಡುವೆ ಜಟಾಪಟಿಗೆ ಕಾರಣವಾಗಿದೆ.

‘ಕಾಂಗ್ರೆಸ್‌–ಜೆಡಿಎಸ್‌ ಶಾಸಕರ ಕ್ಷೇತ್ರಗಳ ಅನುದಾನವನ್ನು ಕಡಿತ ಮಾಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಂಚಲಾಗಿದೆ.

ಅದರಲ್ಲೂ, ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ ಹಾಗೂ ಅನರ್ಹ ಶಾಸಕರು ಪ್ರತಿನಿಧಿಸುತ್ತಿದ್ದ ಯಶವಂತಪುರ, ರಾಜರಾಜೇಶ್ವರಿನಗರ, ಕೆ.ಆರ್‌.ಪುರ ಮತ್ತು ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಗಳಿಗೆ ಭರಪೂರ ಅನುದಾನ ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ’ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಆರೋಪಿಸಿದ್ದಾರೆ.

ಇನ್ನೊಂದೆಡೆ, ಬಿಜೆಪಿ ಶಾಸಕರು,‘ಕಳೆದ ಆರು ವರ್ಷಗಳಲ್ಲಿ ನಮ್ಮ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗಿತ್ತು. ಅದನ್ನು ಮುಖ್ಯಮಂತ್ರಿ ಸರಿಪಡಿಸಿದ್ದಾರೆ’ ಎಂದು ಈಗಿನ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

 

‘ಬಜೆಟ್‌ನಲ್ಲಿ ಮೆಟ್ರೊ’

ರಾಜರಾಜೇಶ್ವರಿನಗರಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವಂತೆ ಹಿಂದಿನ ಮುಖ್ಯ
ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಕೊಟ್ಟಿದ್ದೆ. ಅದಕ್ಕೆ ಸ್ಪಂದಿಸಿರಲಿಲ್ಲ. ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಹಲವು ಯೋಜನೆಗಳ ಪ್ರಸ್ತಾವ ಸಲ್ಲಿಸಿದ್ದೆ. ಅದಕ್ಕೆ ಕಿಮ್ಮತ್ತು ಕೊಟ್ಟಿರಲಿಲ್ಲ. ನನ್ನ ಬಹುತೇಕ ಬೇಡಿಕೆಗಳನ್ನು ‘ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ’ಯಲ್ಲಿ ಸೇರಿಸಲಾಗಿದೆ ಎಂದು ಗೊತ್ತಾಗಿದೆ. ರಾಜರಾಜೇಶ್ವರಿನಗರಕ್ಕೆ ಮೆಟ್ರೊ ಸಂಪರ್ಕ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಸೇರಿಸುವುದಾಗಿ ಮುಖ್ಯಮಂತ್ರಿ ವಾಗ್ದಾನ ನೀಡಿದ್ದಾರೆ. ಬಿಜೆಪಿ ಸರ್ಕಾರದ ಸ್ಪಂದನೆ ಚೆನ್ನಾಗಿದೆ.

ಮುನಿರತ್ನ, ರಾಜರಾಜೇರಿನಗರದ ಅನರ್ಹ ಶಾಸಕ

***

ಮತದಾರರ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಈಗ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ನಡೆಯಿಂದಾಗಿ ಯೋಜನೆಗಳ ಅನುಷ್ಠಾನ ಆರು ತಿಂಗಳು ವಿಳಂಬವಾಗಲಿದೆ. ಕ್ರಿಯಾಯೋಜನೆ ಸಿದ್ಧಪಡಿಸಿದ ಯೋಜನೆಗಳ ಅನುದಾನ ಕಡಿತ ಮಾಡಿದ್ದು ಸರಿಯಲ್ಲ. ಹೊಸ ಯೋಜನೆಗಳನ್ನು ಪ್ರಕಟಿಸಿ ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡಲಿ. ಅದಕ್ಕೆ ನಮ್ಮ ತಕರಾರು ಇಲ್ಲ. ದ್ವೇಷದ ರಾಜಕಾರಣ ಮಾಡದಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಎರಡು ಸಲ ಮನವಿ ಮಾಡಿದ್ದೆ. ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಭರವಸೆ ನೀಡಿದ್ದರು. ಕಾವೇರಿ ನೀರು ಪೂರೈಕೆ ಹಾಗೂ ಒಳಚರಂಡಿ ಕಾಮಗಾರಿಗಳಿಗಾಗಿ ನನ್ನ ಕ್ಷೇತ್ರದ ಎರಡು ವಾರ್ಡ್‌ಗಳಲ್ಲಿ ರಸ್ತೆಗಳನ್ನು ಕಿತ್ತು ಹಾಕಲಾಗಿದೆ. ಅನುದಾನ ಕಿತ್ತುಕೊಂಡಿದ್ದರಿಂದ ಈ ಕಾಮಗಾರಿಗಳೆಲ್ಲ ಸ್ಥಗಿತವಾಗಲಿವೆ. ಜನರು ವಾಸ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಮತದಾರರ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ.

ಕೃಷ್ಣ ಬೈರೇಗೌಡ, ಬ್ಯಾಟರಾಯನಪುರ (ಕಾಂಗ್ರೆಸ್‌)

***

‘ಪ್ರವಾಹಪೀಡಿತ ಪ್ರದೇಶವಾದರೂ ಅನುದಾನ ಕೊಟ್ಟಿರಲಿಲ್ಲ’

ನಗರದಲ್ಲಿ ಜೋರು ಮಳೆ ಸುರಿದರೆ ಪ್ರವಾಹದಿಂದ ಹೆಚ್ಚು ಹಾನಿ ಉಂಟಾಗುವುದು ನನ್ನ ಕ್ಷೇತ್ರದಲ್ಲಿ. ಕಳೆದ ಎರಡು ವರ್ಷಗಳಲ್ಲಿ ಉಂಟಾದ ಪ್ರವಾಹದಿಂದ ಎಚ್‌ಎಸ್‌ಆರ್‌ ಬಡಾವಣೆ, ಬನ್ನೇರುಘಟ್ಟ ರಸ್ತೆ ಮತ್ತಿತರ ಕಡೆಗಳಲ್ಲಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕೆ ಕನಿಷ್ಠ ಅನುದಾನ ನೀಡಲಾಗಿದೆ. ಅನುದಾನ ತಾರತಮ್ಯವನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ನಗರ ಸಂಚಾರಕ್ಕೆ ಬಂದ ವೇಳೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದೆ. ಈ ಹಿಂದೆ ಆಗಿರುವ ಲೋಪವನ್ನು ಸರಿಪಡಿಸಿ 'ನವ ಬೆಂಗಳೂರು ನಗರೋತ್ಥಾನ’ ಯೋಜನೆಯಲ್ಲಿ ಕ್ಷೇತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಸತೀಶ್‌ ರೆಡ್ಡಿ, ಬೊಮ್ಮನಹಳ್ಳಿ (ಬಿಜೆಪಿ)

 ***

‘ಇನ್ನಷ್ಟು ಅಭಿವೃದ್ಧಿಗೆ ಅವಕಾಶ’

ಮುಖ್ಯಮಂತ್ರಿಗಳ ‘ನವ ಬೆಂಗಳೂರು ಯೋಜನೆ’ಯಡಿ ನನ್ನ ಕ್ಷೇತ್ರಕ್ಕೆ ₹101 ಕೋಟಿ ಅನುದಾನ ಹಂಚಿಕೆಯಾಗಿತ್ತು. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ನನ್ನ ಕ್ಷೇತ್ರಕ್ಕೆ ಕೊಟ್ಟ ಅನುದಾನ ಕಡಿಮೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆದಿದ್ದೆವು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಈಗ ಹೆಚ್ಚಿನ ಅನುದಾನ ಹಂಚಿಕೆ ಮಾಡಿದ್ದಾರೆ. ಇದರಿಂದಾಗಿ, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ.

ಉದಯ ಗರುಡಾಚಾರ್‌, ಚಿಕ್ಕಪೇಟೆ (ಬಿಜೆಪಿ)

***

ಕೋರ್ಟ್‌ ಮೊರೆ ಹೋಗುವೆ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಿಬಿಎಂಪಿಗೆ ಸೇರ್ಪಡೆಯಾದ ಹಳ್ಳಿಗಳಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ಸಂಚಾರ ಕಷ್ಟವಾಗಿದೆ. ಕೆರೆಗಳು ಗಬ್ಬು ನಾರುತ್ತಿವೆ. ಒಂದೇ ಒಂದು ಉದ್ಯಾನವೂ ಅಭಿವೃದ್ಧಿ ಆಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಮನಗಂಡು ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ₹528 ಕೋಟಿ ಅನುದಾನ ಮಂಜೂರು ಮಾಡಿದ್ದರು. ಅದಕ್ಕೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿಗಳಿಗೆ ಜಾಬ್‌ಕೋಡ್‌ ಕೂಡಾ ನೀಡಲಾಗಿತ್ತು. ಇದೀಗ, ಬಿಜೆಪಿ ಸರ್ಕಾರದವರು ಬಹುತೇಕ ಅನುದಾನವನ್ನು ಕಿತ್ತುಕೊಂಡು ದ್ವೇಷದ ರಾಜಕಾರಣ ಮಾಡಿದ್ದಾರೆ. ಹೀಗಾದರೆ, ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ?

ಕ್ಷೇತ್ರದ ಜನರು 35 ವರ್ಷಗಳಿಂದ ಬಿಜೆಪಿಗೆ ಮತ ನೀಡಿದ್ದರು. ಅದನ್ನಾದರೂ ಗಮನದಲ್ಲಿಟ್ಟುಕೊಂಡು ಅನುದಾನ ಹಂಚಿಕೆ ಮಾಡಬೇಕಿತ್ತು. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅನುದಾನ ಹಂಚಿಕೆ ತಾರತಮ್ಯ ಸರಿಪಡಿಸುವಂತೆ ಕೋರುತ್ತೇನೆ. ಒಂದು ವೇಳೆ, ದ್ವೇಷದ ರಾಜಕಾರಣ ಕೈಬಿಡದಿದ್ದರೆ ತಿಂಗಳಾಂತ್ಯದಲ್ಲಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಿದ್ದೇವೆ. ಅನುದಾನ ಕಿತ್ತುಕೊಂಡ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗುವುದಕ್ಕೂ ಹಿಂದೇಟು ಹಾಕುವುದಿಲ್ಲ.

ಆರ್‌.ಮಂಜುನಾಥ್‌, ದಾಸರಹಳ್ಳಿ (ಜೆಡಿಎಸ್‌)

 

ಪ್ರತಿಕ್ರಿಯಿಸಿ (+)