ಮಳೆ ಸಂತ್ರಸ್ತರಿಗೆ ಬಿಬಿಎಂಪಿ ತಂಡ ನೆರವು

7

ಮಳೆ ಸಂತ್ರಸ್ತರಿಗೆ ಬಿಬಿಎಂಪಿ ತಂಡ ನೆರವು

Published:
Updated:

ಬೆಂಗಳೂರು: ಮಳೆ ಸಂತ್ರಸ್ತ ಕೊಡಗು ಜಿಲ್ಲೆಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಪರಿಹಾರ ಕಾರ್ಯಾಚರಣೆಗೆ ತೆರಳಲಿದೆ.

ಇಬ್ಬರು ಐಎಎಸ್‌ ಅಧಿಕಾರಿಗಳು, ಸಿಬ್ಬಂದಿಯನ್ನೊಳಗೊಂಡ ತಂಡ ಕಳುಹಿಸಲಾಗುವುದು. ನಗರ ಯೋಜನಾ ವಿಭಾಗದ ಎಂಜಿನಿಯರ್‌ಗಳು ಕ್ರೆಡಾಯ್‌ ಸಂಸ್ಥೆ ಜತೆ ಚರ್ಚಿಸಿ ಅಲ್ಲಿ ತಾತ್ಕಾಲಿಕ ಮನೆ, ಷೆಡ್‌ ನಿರ್ಮಿಸಲು ನೆರವಾಗಲಿದ್ದಾರೆ. ಪಾಲಿಕೆ ವೈದ್ಯರೂ ಕೂಡಾ ತೆರಳಲಿದ್ದಾರೆ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

ಪಾಲಿಕೆ ನಿಧಿಯಿಂದ ತಲಾ ₹ 1 ಕೋಟಿ ನೆರವನ್ನು ಕೊಡಗು ಹಾಗೂ ಕೇರಳಕ್ಕೆ ನೀಡಲಾಗುವುದು. ಬಿಬಿಎಂಪಿ ಸದಸ್ಯರ 1 ತಿಂಗಳ ಗೌರವಧನ, ಅಧಿಕಾರಿಗಳು ಮತ್ತು ನೌಕರರ ಒಂದು ದಿನದ ವೇತನವನ್ನು ಕೊಡಗು ಸಂತ್ರಸ್ತರ ಪರಿಹಾರ ಕಾಮಗಾರಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ನೀಡಲಾಗುವುದು ಎಂದು ಅವರು ತಿಳಿಸಿದರು. 

ವಾರ್ಡ್ ಮಟ್ಟದಲ್ಲಿ ಸದಸ್ಯರು ಪಾದಯಾತ್ರೆ ನಡೆಸಿ ಪರಿಹಾರ ಸಾಮಗ್ರಿ ಸಂಗ್ರಹಿಸಲಿದ್ದಾರೆ. ಪಾಲಿಕೆ ಆವರಣದ ಗಾಜಿನಮನೆ, ವಲಯ ಕಚೇರಿಗಳಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೌಂಟರ್ ತೆರೆಯಲಾಗುವುದು. ಜನರು ಈ ಕೌಂಟರ್‌ಗಳಲ್ಲಿ ಪರಿಹಾರ ಸಾಮಗ್ರಿ ಕೊಡಬಹುದು ಎಂದರು.

ದಾನಿಗಳು ಹಳೆಯ ಬಟ್ಟೆ, ವಸ್ತುಗಳನ್ನು ಕೊಡಬಾರದು. ಬಳಸಲು ಯೋಗ್ಯವಿರುವ ಒಳ್ಳೆಯ ವಸ್ತುಗಳನ್ನೇ ಕೊಡಬೇಕು ಎಂದು ಕೋರಿದರು.  ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘದಿಂದ 50 ಚೀಲ ಅಕ್ಕಿ ಕೊಡುವುದಾಗಿ ಸಂಘದ ಅಧ್ಯಕ್ಷ ಆನಂದ್ ಹೇಳಿದರು.

50 ಜನ ಅಧಿಕಾರಿಗಳು ಮತ್ತು ನೌಕರರ ತಂಡ ಕೊಡಗಿಗೆ ತೆರಳಿ ಪರಿಹಾರ ಕಾರ್ಯದಲ್ಲಿ ತೊಡಗಲಿದೆ ಎಂದರು. ಪತ್ರಿಕಾಗೋಷ್ಠಿಗೂ ಮುನ್ನ ನೌಕರರ ಸಂಘದ ಪ್ರತಿನಿಧಿಗಳು ಮತ್ತು ಮೇಯರ್ ನಡುವೆ ಮಾತಿನ ಚಕಮಕಿ ನಡೆಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !