ಶುಕ್ರವಾರ, ನವೆಂಬರ್ 15, 2019
22 °C
ಪೋಷಣ ಅಭಿಯಾನ ಜಾಥಾಗೆ ಚಾಲನೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಜಿಯಾ ತರನ್ನುಮ್ ಸಲಹೆ

ಅಪೌಷ್ಟಿಕತೆ ಬಗ್ಗೆ ಅರಿವು ಮೂಡಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಗರ್ಭಿಣಿಯರಲ್ಲಿನ ರಕ್ತಹೀನತೆ ನಿವಾರಣೆ ಹಾಗೂ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದೇ ರಾಷ್ಟ್ರೀಯ ಪೋಷಣ ಅಭಿಯಾನದ ಪ್ರಮುಖ ಉದ್ದೇಶ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.

ಜಿಲ್ಲಾ ಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಪೋಷಣ ಅಭಿಯಾನದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿ ಹೆಚ್ಚುತ್ತಿರುವ ರಕ್ತಹೀನತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆ ಅಡಿ ಇರುವ ತಾಯಿ ಮತ್ತು ಮಗುವಿನ ಸಂಪೂರ್ಣ ಆರೈಕೆಯ ಮಾರ್ಗಸೂಚಿಗಳ ಬಗ್ಗೆ ಜನಸಾಮಾನ್ಯರಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಅರಿವು ಮೂಡಿಸಬೇಕು. ರಕ್ತಹೀನತೆ, ಸ್ವಚ್ಛತೆ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿ ಜಾಥಾ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು’ ಎಂದರು.

‘ಶಿಶು ಮತ್ತು ತಾಯಂದಿರು ಸಾವಿರ ದಿನಗಳ ಕಾಲ ಉತ್ತಮ ಪೌಷ್ಠಿಕ ಆಹಾರ ಸೇವನೆ ಮಾಡುವುದು. ರಕ್ತ ಹೀನತೆ, ಅತಿಸಾರ ಬೇಧಿ ತಡೆಗಟ್ಟುವುದು, ಪೌಷ್ಟಿಕ ಆಹಾರ ಪೂರೈಕೆ ಮಾಡುವ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಅಪೌಷ್ಟಿಕತೆ ಪ್ರಮಾಣ ಶೂನ್ಯಕ್ಕೆ ಇಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಅಪೌಷ್ಟಿಕತೆ ಹೊಂದಿರುವ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸೊರಗಿರುತ್ತಾರೆ. ಅಂತಹ ಮಕ್ಕಳನ್ನು ಸದೃಢಗೊಳಿಸಲು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ನೀಡುವ ಅಗತ್ಯವಿದೆ. ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು, ಬಾಣಂತಿಯರು, ಮಕ್ಕಳನ್ನು ಗುರುತಿಸಿ, ಅವರ ಆರೋಗ್ಯ ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

‘ಪೌಷ್ಟಿಕ ಆಹಾರ ಆರೋಗ್ಯಕ್ಕೆ ಸಹಕಾರಿ. ಗರ್ಭಿಣಿ ಮತ್ತು ಬಾಣಂತಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಾಗೂ ಕಬ್ಬಿಣಾಂಶದ ಮಾತ್ರೆಗಳನ್ನು ಸೇವನೆ ಮಾಡಬೇಕು. ಮುಂಬರುವ ದಿನಗಳಲ್ಲಿ ಜಿಲ್ಲೆಯನ್ನು ಅಪೌಷ್ಟಿಕತೆ ಮುಕ್ತಗೊಳಿಸಲು ಎಲ್ಲರೂ ಪಣ ತೊಡಬೇಕು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ , ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕಿ ಬಿ.ಎಂ.ಲಕ್ಷಿದೇವಮ್ಮ , ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಎಲ್.ಹರ್ಷವರ್ಧನ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)