ಬಣ್ಣದಲ್ಲಿಲ್ಲ ಸೌಂದರ್ಯ

7

ಬಣ್ಣದಲ್ಲಿಲ್ಲ ಸೌಂದರ್ಯ

Published:
Updated:
Prajavani

ಹೆಣ್ಣು ಎಂದಾಕ್ಷಣ ಸೌಂದರ್ಯ, ಅವಳ ಚೆಲುವು ಅಡಗಿರುವುದೇ ಗೌರವರ್ಣದಲ್ಲಿ ಎಂಬುದು ಅನೇಕರ ಅಭಿಪ್ರಾಯ. ಕಪ್ಪು-ಬಿಳುಪುಗಳ ಗರಿಮೆಯಲ್ಲಿ ‘ನಾ ಕರಿಯಳೆಂದು ನೀ ಜರಿಯಬೇಡ ಬಿಳಿ ಗೆಳತಿ ಗರ್ವದಿಂದ’ ಎಂಬ ಪ್ರಸಿದ್ಧ ಕವಿವಾಣಿಯೊಂದು ನೆನಪಿಗೆ ಬರುವುದು. ವಾಸ್ತವತೆಗೆ ಕನ್ನಡಿ ಹಿಡಿದ ಸಾಲುಗಳಿವು. ವರ್ಣವು ಎಂದಿಗೂ ಅಂದಕ್ಕೆ ಅಡ್ಡಿಯಾಗದು. ರಾಮ, ಕೃಷ್ಣ, ದ್ರೌಪದಿಯರು ಕಪ್ಪಾದರೂ ಚೆಲುವರಲ್ಲವೇ? ಕಪ್ಪಿನ ಹಿನ್ನಲೆಯಲ್ಲೇ ಬಿಳಿಯ ಬಣ್ಣ ಎದ್ದು ತೋರುವುದು.

ಒಬ್ಬರ ಪ್ರತಿಭೆ, ಸಾಮರ್ಥ್ಯದಿಂದ ವ್ಯಕ್ತಿತ್ವವನ್ನು ಅಳೆಯದೆ ಕೇವಲ ಬಣ್ಣದಿಂದ ಅಳೆಯುವುದು ಎಷ್ಟು ಸರಿ? ಕೇವಲ ಬಣ್ಣದಿಂದ ಮನುಷ್ಯರ ಗುಣ, ನಡತೆಯನ್ನು ಅಳೆಯಲು ಸಾಧ್ಯವೇ? ಕೇವಲ ಕಪ್ಪು ಬಣ್ಣದಿಂದ ಕೀಳರಿಮೆ ಬೆಳೆಸಿಕೊಳ್ಳದೆ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರಷ್ಟೇ ಸಾಕು, ಹೊರ ರೂಪದಲ್ಲಿ ಸುಂದರವಾಗಿ ಕಾಣುತ್ತಾರೆ. ಪ್ರಕೃತಿ ನಿಯಮಕ್ಕನುಸಾರವಾಗಿ ಬಣ್ಣದಲ್ಲಿ ವ್ಯತ್ಯಾಸವಾಗಬಹುದು. ಆದರೆ ವ್ಯಕ್ತಿತ್ವದಲ್ಲಲ್ಲ. ಹಾಗೆ ನೋಡಿದರೆ ಎಲ್ಲರಲ್ಲೂ ಒಂದು ಕುಂದು ಇದ್ದೇ ಇರುವುದು. ಬಣ್ಣ ಕಪ್ಪೇ ಇರಲಿ, ಬಿಳಿಯೇ ಇರಲಿ, ಅದರ ಬಗ್ಗೆ ಗಮನ ಕೊಡದೆ ಗುರಿಯೆಡೆಗೆ ಮುನ್ನುಗ್ಗುವುದೇ ನಮ್ಮ ನೈಜ ಬಣ್ಣವಾಗಿರಬೇಕು.

ಬಹಳ ಹಿಂದಿನಿಂದಲೂ ಹೆಣ್ಣಿನ ಸೌಂದರ್ಯ ಮೀಮಾಂಸೆಯನ್ನು ಉಪಮೆಯೊಂದಿಗೆ ವರ್ಣಿಸುವಲ್ಲಿ ನಮ್ಮ ಕವಿಗಳು, ಕಲಾವಿದರದು ಎತ್ತಿದ ಕೈ. ಕಥೆ, ಕಾದಂಬರಿಗಳಲ್ಲೂ ಹೆಣ್ಣನ್ನು ವೇಗವರ್ಧಕವಾಗಿ, ಉಪಭೋಗ ಸಾಮಗ್ರಿಯಾಗಿ ಬಳಸಿ ಓದುಗರ ಸಂಖ್ಯೆ ಹೆಚ್ಚಿಸಲು ಬಳಸುವ ತಂತ್ರವೂ ಹೌದು.

ಹೆಣ್ಣನ್ನು ಅವಳ ಸೌಂದರ್ಯ, ಮೈ ಬಣ್ಣದಿಂದ ಮಾತ್ರ ಗುರುತಿಸದೆ ಅವಳ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟು ಅಂತರಂಗ ಸೌಂದರ್ಯಕ್ಕೆ ಗಮನ ನೀಡಬೇಕು. ಪ್ರತೀ ಹೆಣ್ಣೂ ಕೇವಲ ಬಾಹ್ಯ ಸೌಂದರ್ಯಕ್ಕೇ ಬೆಲೆ ಕೊಡುವಳೆಂದರೆ ಅದು ಅವಳಲ್ಲಿನ ದೌರ್ಬಲ್ಯವೆನ್ನಬಹುದು. ಅವಳಲ್ಲಿರುವ ವಿದ್ಯೆ, ಪ್ರತಿಭಾ ಕೌಶಲ್ಯ ಮಾತ್ರ ಎಲ್ಲ ಕ್ಷೇತ್ರಗಳಲ್ಲೂ ಅವಳಿಗೆ ಮಾನ್ಯತೆಯನ್ನು ತಂದುಕೊಡುವುದು. ನಿಸ್ವಾರ್ಥ ಭಾವದಿಂದಿದ್ದು, ಸಕಾರಾತ್ಮಕ ಅಂಶಗಳೇ ಅವಳಲ್ಲಿ ತುಂಬಿರಬೇಕು. ಮಾಡುವ ಎಲ್ಲ ಕೆಲಸಗಳನ್ನು ಪ್ರೀತಿಯಿಂದ ಮನಸ್ಸಿಟ್ಟು ಮಾಡಿದಾಗ ಯಶಸ್ಸಿನ ಜೊತೆ ಗೆಲುವು, ಆತ್ಮವಿಶ್ವಾಸಗಳು ಅವಳ ಸೌಂದರ್ಯದ ಮೂಲಧಾತುವಾಗುವುದು.

ಹೆಣ್ಣನ್ನು ದೇಹಮಾತ್ರ ಗ್ರಹಿಕೆಯಿಂದ, ಸೌಂದರ್ಯದ ಬಂಧನದಿಂದ ಬಿಡುಗಡೆಗೊಳಿಸಿದಾಗಲೇ ಅವಳ ನೈಜ ಸೌಂದರ್ಯ ಮುನ್ನೆಲೆಗೆ ಬರುವುದು. ಕಪ್ಪು-ಬಿಳುಪನ್ನು ಮೀರಿದ ಅಂತರಂಗದ ಸೌಂದರ್ಯವೇ ನಿಜವಾದ ಸೌಂದರ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !