ಶನಿವಾರ, ಜನವರಿ 18, 2020
21 °C

2020ರ ಥೀಮ್ ಬಣ್ಣ ಕ್ಲಾಸಿಕ್‌ನೀಲಿ

ಆರ್.ಚೋರಾಡಿ Updated:

ಅಕ್ಷರ ಗಾತ್ರ : | |

Prajavani

ಪ್ರತಿ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಮುಂದಿನ ವರ್ಷದ ಬಣ್ಣದ ಆಯ್ಕೆ ಪದ್ಧತಿಯನ್ನು ಪ್ಯಾಂಟನ್ ಕಲರ್ ಇನ್‌ಸ್ಟಿಟ್ಯೂಟ್ ರೂಢಿಸಿಕೊಂಡು ಬಂದಿದೆ. ‘ಕಲರ್ ಆಫ್ ದಿ ಇಯರ್’ ಪರಿಕಲ್ಪನೆಯಲ್ಲಿ 2020ರ ಬಣ್ಣ ‘ಕ್ಲಾಸಿಕ್ ಬ್ಲೂ’.

ಪ್ರತಿ ಹಳೆಯ ವರ್ಷ ಕಳೆದು ಹೊಸವರ್ಷದ ಸಂಭ್ರಮ ಆವರಿಸುವಂತೆ ಫ್ಯಾಷನ್‌ ಕ್ಷೇತ್ರದಲ್ಲೂ ವರ್ಷ ವರ್ಷಕ್ಕೆ ಹೊಸ ಅಲೆಗಳು ಬೀಸುತ್ತಿರುತ್ತವೆ. ಬೇರೆ ಬೇರೆ ವಿನ್ಯಾಸದ, ಬಣ್ಣಗಳ, ವಿಭಿನ್ನ ರೂಪದ ಬಟ್ಟೆಗಳು ಫ್ಯಾಷನ್ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ.

ಪ್ರತಿ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಮುಂದಿನ ವರ್ಷದ ಬಣ್ಣದ ಆಯ್ಕೆ ಪದ್ಧತಿಯನ್ನು ಪ್ಯಾಂಟನ್ ಕಲರ್ ಇನ್‌ಸ್ಟಿಟ್ಯೂಟ್ ರೂಢಿಸಿಕೊಂಡು ಬಂದಿದೆ. ‘ಕಲರ್ ಆಫ್ ದಿ ಇಯರ್’ ಪರಿಕಲ್ಪನೆಯಲ್ಲಿ 2020ರ ಬಣ್ಣ ‘ಕ್ಲಾಸಿಕ್ ಬ್ಲೂ’.

ಕಳೆದ ಇಪ್ಪತ್ತು ವರ್ಷಗಳಿಂದ ರೂಢಿಯಲ್ಲಿರುವ ಈ ಪರಿಕಲ್ಪನೆಯು ಫ್ಯಾಷನ್, ಕ್ರೀಡೆ, ಒಳಾಂಗಣ ವಿನ್ಯಾಸ ಮುಂತಾದ ಕ್ಷೇತ್ರಗಳಲ್ಲಿ ಬಣ್ಣದ ರಂಗು ಬೀರುವಂತೆ ಮಾಡುತ್ತದೆ.  

ಕ್ಲಾಸಿಕ್ ನೀಲಿ ಬಣ್ಣವು ಶಾಂತಿ, ಸೊಗಸು ಹಾಗೂ ನಿರಂತರತೆಯ ಧ್ಯೋತಕವಾಗಿದೆ. ಈ ಬಣ್ಣವು ಮನುಷ್ಯನ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ತರುವ ಬಣ್ಣವಾಗಿದೆ ಎಂಬುದು ಫ್ಯಾಷನ್ ತಜ್ಞರ ಅಭಿಪ್ರಾಯ.

ಫ್ಯಾಷನ್ ಕ್ಷೇತ್ರದಲ್ಲಿ ಕ್ಲಾಸಿಕ್ ನೀಲಿ ಬಣ್ಣಕ್ಕೆ ತನ್ನದೇ ಆದ ಗೌರವವಿದೆ. ಫ್ಯಾಷನ್ ಎಂಬ ರಂಗಿನ ಲೋಕದಲ್ಲಿ ಈ ನೀಲಿ ಬಣ್ಣದ ಕೊಡುಗೆಯೂ ಕಡಿಮೆ ಏನಿಲ್ಲ.

ಸೀರೆ, ಚೂಡಿದಾರ್, ಕುರ್ತಾ, ಜೀನ್ಸ್, ಪಲಾಝೋ, ಕ್ರಾಪ್ ಟಾಪ್, ಟ್ಯೂನಿಕ್, ಜಾಕೆಟ್, ಸ್ಕರ್ಟ್ ಹೀಗೆ ಹೆಂಗಳೆಯರ ನೆಚ್ಚಿನ ಎಲ್ಲಾ ಬಗೆಯ ದಿರಿಸಿನಲ್ಲೂ ಈ ನೀಲಿ ಬಣ್ಣ ತನ್ನ ಇರುವನ್ನು ಸಾರಿದೆ.

ಮಾನಿನಿಯರ ವಾರ್ಡ್‌ರೋಬ್‌ನಲ್ಲಿ ಕನಿಷ್ಠ ಮೂರು ಜೊತೆಯಾದರೂ ನೀಲಿ ಬಣ್ಣದ ದಿರಿಸಿಗೆ ಜಾಗವಿದ್ದೇ ಇರುತ್ತದೆ ಎನ್ನುವುದು ವಿನ್ಯಾಸಕರ ಮಾತು.

ನೀಲಿಗೆ ಹೊಂದುವ ಕಪ್ಪು, ಬಿಳಿ

ಕ್ಲಾಸಿಕ್ ನೀಲಿ ಬಣ್ಣದ ಗೌನ್‌, ಸ್ಕರ್ಟ್, ಚೂಡಿದಾರ್ ಯಾವುದೇ ಬಗೆಯ ಡ್ರೆಸ್ ಇರಲಿ ಪೂರ್ತಿ ಅದೇ ಬಣ್ಣದ್ದೇ ಧರಿಸುವುದೂ ಒಂದು ಟ್ರೆಂಡ್. ಜೊತೆಗೆ ನೀಲಿ ಬಣ್ಣದೊಂದಿಗೆ ಹೆಚ್ಚು ಹೊಂದಿಕೆಯಾಗುವುದು ಬಿಳಿ ಬಣ್ಣ. ನೀಲಿ ಬಣ್ಣದ ಕುರ್ತಾಕ್ಕೆ ಬಿಳಿ ಬಣ್ಣದ ಪ್ಯಾಂಟ್‌ ಧರಿಸಿದರೆ ಒಂದು ಒಳ್ಳೆಯ ಕಾಂಬಿನೇಷನ್ ಆಗುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ನೀಲಿ ಬಣ್ಣದ ಪಲಾಝೋ ಮೇಲೆ ಬಿಳಿ ಬಣ್ಣದ ಉದ್ದನೆಯ ತೋಳಿನ ಟಾಪ್ ಧರಿಸಬೇಕು.

ಕಪ್ಪು ಬಣ್ಣವೂ ಕ್ಲಾಸಿಕ್ ನೀಲಿ ಬಣ್ಣದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ನೀಲಿ ಬಣ್ಣದ ಜೀನ್ಸ್ ಅಥವಾ ಸಿಗರೇಟ್ ಪ್ಯಾಂಟ್ ಮೇಲೆ ಕಪ್ಪು ಬಣ್ಣದ ಟಾಪ್ ಧರಿಸಿದರೆ ಮುದ್ದಾಗಿ ಕಾಣಬಹುದು.

ಆಧುನಿಕ ಯುವತಿಯರ ನೆಚ್ಚಿನ ಬಣ್ಣ

ಆಧುನಿಕ ಯುಗದ ಯುವತಿಯರು ಕ್ಲಾಸಿಕ್ ನೀಲಿ ಬಣ್ಣದೊಂದಿಗೆ ಗರಿಮುರಿ, ಅಚ್ಚ ಬಿಳಿ ಬಣ್ಣದ ಬಟ್ಟೆಗಳನ್ನು ಮಿಕ್ಸ್ ಅಂಡ್ ಮ್ಯಾಚ್ ಮಾಡಿ ಧರಿಸಲು ಇಷ್ಟಪಡುತ್ತಾರೆ. ಆಫೀಸ್, ಷಾಪಿಂಗ್, ಪಿಕ್ನಿಕ್ ಎಲ್ಲಿಗೇ ಹೋಗುವುದಿರಲಿ ಈ ನೀಲಿ  ಬಣ್ಣವನ್ನು ಪ್ಯಾಂಟ್, ಟಾಪ್ ಅಥವಾ ಶಾಲಿನ ರೂಪದಲ್ಲಿ ಮಿಕ್ಸ್ ಅಂಡ್ ಮ್ಯಾಚ್ ಮಾಡಿಕೊಳ್ಳುವುದು ಇಂದಿನ ಟ್ರೆಂಡ್. ಅದರೊಂದಿಗೆ ಬೆಳ್ಳಿಯ ಆಭರಣಗಳನ್ನು ಧರಿಸಿದರೆ ಸುಂದರವಾಗಿ ಕಾಣುವುದಲ್ಲದೆ ಪಾರ್ಟಿಗಳಿಗೆ ಹೋಗಲು ಇದು ಸೂಕ್ತ. ಕ್ಲಾಸಿಕ್ ನೀಲಿಯೊಂದಿಗೆ ಗಾಢ ಕಿತ್ತಳೆ ಬಣ್ಣವೂ ಸರಿ ಹೊಂದುತ್ತದೆ. ಅಲ್ಲದೇ ನೀಲಿಯೊಂದಿಗೆ ಚಿಟ್ಟೆ ಹಳದಿ ಬಣ್ಣವೂ ಮಿಕ್ಸ್ ಅಂಡ್ ಮ್ಯಾಚ್ ಮಾಡಲು ಸೂಕ್ತ ಎಂಬುದು ಡಿಸೈನರ್‌ ಅಂಜಲಿ ಭಾಸ್ಕರ್ ಅಭಿಪ್ರಾಯ.

ಸಾಮಾನ್ಯವಾಗಿ ಎಲ್ಲರೂ ಮೆಚ್ಚುವ ಕ್ಲಾಸಿಕ್ ನೀಲಿ ಬಣ್ಣಕ್ಕೆ ‘ಸಮತ್ವಂ‘ ಎಂದು ಕರೆಯಲು ಬಯಸುತ್ತಾರೆ ಅಂಜಲಿ. ಈ ಬಣ್ಣ ಎಲ್ಲಾ ವಯೋಮಾನದವರಿಗೂ ಹೊಂದುತ್ತದೆ ಎನ್ನುವುದು ಅವರ ಮಾತು. ಜೊತೆಗೆ ಎಲ್ಲಾ ಬಣ್ಣದವರೂ ನೀಲಿ ಬಣ್ಣವನ್ನು ಧರಿಸಲು ಇಷ್ಟಪಡುತ್ತಾರೆ, ಇದು ಎಲ್ಲಾ ವರ್ಣದವರಿಗೂ ಸೂಕ್ತ ಎಂಬುದು ಅವರ ಅಭಿಮತ.

ಚಳಿಗಾಲಕ್ಕೂ ನೀಲಿ ಸಾಥ್

ಚಳಿಗಾಲದಲ್ಲಿ ಜನರು ಹೆಚ್ಚಾಗಿ ಜಾಕೆಟ್ ಧರಿಸಲು ಇಷ್ಟಪಡುತ್ತಾರೆ. ಪೂರ್ಣ ನೀಲಿ ಬಣ್ಣದ ಜಾಕೆಟ್ ಧರಿಸುವುದು ಕೊಂಚ ಡಲ್ ಎನ್ನಿಸುತ್ತದೆ. ಆ ಕಾರಣಕ್ಕೆ ನೀಲಿಯೊಂದಿಗೆ ಕಪ್ಪು ಹಾಗೂ ಬಿಳುಪಿನ ಚೌಕಟ್ಟುಗಳಿರುವ ಜಾಕೆಟ್ ಧರಿಸಿದರೆ ಸುಂದರವಾಗಿ ಕಾಣಬಹುದು. ಜೊತೆಗೆ ನೀಲಿ ಬಣ್ಣದ ಉಣ್ಣೆಯ ಟೋಪಿ ಹಾಗೂ ಶಾಲು ಕೂಡ ಟ್ರೆಂಡ್‌ಗೆ ಸಾಥ್ ನೀಡುತ್ತದೆ.

ಪ್ಯಾಂಟ್‌ಗಳು..

ಸಾಮಾನ್ಯವಾಗಿ ಕ್ಲಾಸಿಕ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸುವುದಕ್ಕಿಂತ ಟ್ರೌಸರ್ಸ್‌ ಧರಿಸಲು ಹೆಂಗಳೆಯರು ಹೆಚ್ಚು ಇಷ್ಟಪಡುತ್ತಾರೆ. ಗಾಢ ನೀಲಿ ಬಣ್ಣದ ಟ್ರೌಸರ್ಸ್‌ಗಳ ಮೇಲೆ ಬಿಳಿ, ಹಳದಿ, ಆಕಾಶ ನೀಲಿ ಬಣ್ಣದ ವೆರೈಟಿ ಟಾಪ್‌ಗಳು ಹೆಚ್ಚು ಹೊಂದುತ್ತವೆ.

ಪ್ರತಿಕ್ರಿಯಿಸಿ (+)