7

ಆತ್ಮವಿಶ್ವಾಸವೇ ಸೌಂದರ್ಯ

Published:
Updated:

‘ನಾನು ಸಾರಿಕಾ ಎಚ್‌.ಎಸ್‌. ನನ್ನೂರು ಸಕಲೇಶಪುರ. ಎಂ.ಕಾಂ ಮುಗಿದ ನಂತರ ವೃತ್ತಿ ಅರಸಿ ಬೆಂಗಳೂರಿಗೆ ಬಂದೆ. ಆರು ತಿಂಗಳು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದೆ. ಆದರೆ ನನ್ನ ಆಸಕ್ತಿ, ಗಮನ ಎಲ್ಲವೂ ಮಾಡೆಲಿಂಗ್‌ ಬಗ್ಗೆ ಇದ್ದಿದ್ದರಿಂದ ಉದ್ಯೋಗದಿಂದ ದೂರ ಸರಿದೆ. ನನ್ನನ್ನು ಬೆಂಗಳೂರಿನಲ್ಲಿಯೇ ನೆಲೆಸುವಂತೆ ಮಾಡಿದ್ದು ಮಾಡೆಲಿಂಗ್‌ ಕ್ಷೇತ್ರ. ಒಂದು ವರ್ಷದಿಂದ ಮಾಡೆಲಿಂಗ್‌ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. 

ನೃತ್ಯ ಎಂದರೆ ಮೊದಲಿನಿಂದಲೂ ಅಚ್ಚುಮೆಚ್ಚು. ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನನಗೇ ಮೊದಲ ಸ್ಥಾನ. ನಾನು 6ನೇ ತರಗತಿ ಓದುತ್ತಿದ್ದಾಗ ‘ಮಾರ್ಡನ್‌ ರಾಮಾಯಣ’ದಲ್ಲಿ ರಾವಣ ಪಾತ್ರ ಮಾಡಬೇಕಿದ್ದ ನನ್ನ ಸ್ನೇಹಿತೆ ಅನಾರೋಗ್ಯದಿಂದಾಗಿ ಶಾಲೆಗೆ ಬರದೇ ಇದ್ದಾಗ, ಶಿಕ್ಷಕರ ಮುಂದೆ ನಾನು ಅವಳು ಹೇಳಬೇಕಿದ್ದ ಡೈಲಾಗ್‌ ಅನ್ನು ಸ್ವಲ್ಪವೂ ತಡವರಿಸದೇ ಪಟಪಟ ಅಂತ ಹೇಳಿಬಿಟ್ಟೆ. ಅದನ್ನು ಗಮನಿಸಿದ ನನ್ನ ಶಿಕ್ಷಕರು ಆ ಪಾತ್ರ ಮಾಡಲು ನನಗೆ ಅನುಮತಿಯಿತ್ತರು. ಹೀಗೆ ನನಗೆ ರಂಗಭೂಮಿಯೊಡನೆ ನಂಟು ಬೆಳೆಯತೊಡಗಿತು. ಇದೇ ಇಂದು ನಾನು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕಾರಣವೂ ಆಯಿತು. 

ಪಾಕಿಸ್ತಾನಿ ವಸ್ತ್ರ ವಿನ್ಯಾಸ ಮಾಡುತ್ತಿದ್ದ ಸಮ್ಮರ್‌ಶೇಖ್‌ ಅವರ ವಸ್ತ್ರಗಳಿಗೆ ರೂಪದರ್ಶಿಯಾಗಿ ಮೊದಲು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದು ಮರೆಯಲಾಗದ ಕ್ಷಣ. ಇಲ್ಲಿಯವರೆಗೂ ರಾಜೇಶ್‌ ಶೆಟ್ಟಿ, ಶಿಲ್ಪಿ ಚೌಧರಿ, ಸೈಫ್‌ ಹಂಸ, ನವೀನ್‌ ಕುಮಾರ್‌, ದಿನೇಶ್‌ ರಾಜ್‌ ಮತ್ತು ಶಿವ ಕೃಷ್ಣ ಇವರೊಟ್ಟಿಗೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದೇನೆ. ಈ ಕ್ಷೇತ್ರದ ಪ್ರತಿ ಹಂತದಲ್ಲಿಯೂ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ.

‌ಖ್ಯಾತ ನಿರ್ದೇಶಕ ಎಂ.ಎಸ್‌. ಸತ್ಯು ಅವರ ನಿರ್ದೇಶನದ ನಾಟಕದಲ್ಲಿ ಅಭಿನಯಿಸಿದ್ದೇನೆ. ಸದ್ಯ ಎಂ.ಸಿ. ಆನಂದ್ ಅವರು ನಿರ್ದೇಶಿಸುತ್ತಿರುವ ನಾಟಕದಲ್ಲಿ ಅಭಿನಯಿಸುತ್ತಿದ್ದೇನೆ. ಇದು ರಾಜಕೀಯ ವಿಷಯಗಳ ಕುರಿತಾಗಿದೆ.

ನನ್ನ ಕುಟುಂಬದವರು ನನ್ನ ಆಸೆಗಳಿಗೆ ಒತ್ತಾಸೆಯಾಗಿದ್ದಾರೆ. ಅಪ್ಪನಿಗೆ ಮಕ್ಕಳು ಓದಿನ ಬಗ್ಗೆ ಗಮನಹರಿಸಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಅಮ್ಮನಿಗೂ ಮೊದಲಿನಿಂದಲೂ ಮಾಡೆಲಿಂಗ್‌ ಕ್ಷೇತ್ರದ ಬಗ್ಗೆ ಆಸಕ್ತಿ ಇರಲಿಲ್ಲ. ಆ ಕಾರಣದಿಂದ ನನ್ನ ಶಿಕ್ಷಣ ಮುಗಿಯುವವರೆಗೂ ಇವಾವುದರ ಬಗ್ಗೆಯೂ ನಾನು ಅವರೊಟ್ಟಿಗೆ ಮಾತನಾಡುತ್ತಿರಲ್ಲಿಲ್ಲ. ಈಗ ಎಲ್ಲವೂ ಬದಲಾಗಿದೆ. ನನ್ನ ಕನಸು, ಆಸೆಗಳಿಗೆ ಹೆಗಲಾಗಿ ನನ್ನೊಟ್ಟಿಗಿದ್ದಾರೆ.

ನೃತ್ಯ, ಮಾಡೆಲಿಂಗ್‌ ಮತ್ತು ರಂಗಭೂಮಿ ಈ ಮೂರು ನನ್ನಿಷ್ಟದ ಕ್ಷೇತ್ರಗಳು. ಕಾಲೇಜು ಮುಗಿದ ನಂತರ ಅನಿವಾರ್ಯವಾಗಿ ಸಮಯ ಹೊಂದಾಣಿಕೆ ಮಾಡಲಾಗದೇ ನೃತ್ಯವನ್ನು ಕೈಬಿಟ್ಟೆ. ಉಳಿದ ಎರಡು ಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಹಲವಾರು ಬಾರಿ ಕಷ್ಟ ಎನ್ನಿಸಿದ್ದುಂಟು. ಕೆಲವೊಮ್ಮೆ ಒಂದೇ ದಿನ ಎರಡು ಕಾರ್ಯಕ್ರಮಗಳು ಇದ್ದಾಗ ನಿಭಾಯಿಸುವುದೇ ಒಂದು ಕಲೆ. 

ಊಟದ ವಿಷಯದಲ್ಲಿ ನಾನು ಅಷ್ಟೇನೂ ಕಟ್ಟುನಿಟ್ಟು ಅಲ್ಲ. ಇಷ್ಟವಾದದ್ದನ್ನು ತಿನ್ನುತ್ತೇನೆ. ಬೆಳಗ್ಗೆ ಮತ್ತು ಮಧ್ಯಾಹ್ನ ಗ್ರೀನ್‌ ಟೀ ಕುಡಿಯುತ್ತೇನೆ. ಇದು ನನ್ನನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ. ಪ್ರತಿದಿನ ಅರ್ಧ ಗಂಟೆ ದೈಹಿಕ ಕಸರತ್ತು ನಡೆಸುತ್ತೇನೆ. ಮುಂದೆ ಉತ್ತಮ ಅವಕಾಶ ಸಿಕ್ಕರೆ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಅದಕ್ಕಾಗಿ ಅಂಗಸೌಷ್ಟವ ಕಾಯ್ದುಕೊಳ್ಳುತ್ತಿದ್ದೇನೆ. 

**

ಜೀವನದಲ್ಲಿ ಯಾವ ಕೆಲಸವು ಒತ್ತಡವಲ್ಲ. ನಾವು ಹಾಗೆ ಅಂದುಕೊಳ್ಳುತ್ತೇವಷ್ಟೆ. ಯಾವುದೇ ಕೆಲಸದ ಬಗ್ಗೆಯಾಗಲಿ ನಮಗಿರುವ ಆಸಕ್ತಿ ಮತ್ತು ಶ್ರದ್ಧೆ ನಮ್ಮ ಗುರಿ ತಲುಪಲು ಸಹಕಾರಿ
 –ಸಾರಿಕಾ ಎಚ್‌. ಎಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !