ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತ್ರವೈಭವ ಯಾನ

Last Updated 3 ಜುಲೈ 2018, 20:27 IST
ಅಕ್ಷರ ಗಾತ್ರ

* ಜಿಂದಗಿ ಫಾಲ್‌ ಫ್ಯಾಷನ್‌ 18ನಲ್ಲಿ ನಿಮ್ಮ ವಿನ್ಯಾಸಗಳ ಕುರಿತು ಹೇಳಿ...
ಒಂದು ವಾರ ಆರು ವಸ್ತ್ರ ವಿನ್ಯಾಸಕರ ಉಡುಪಗಳ ಪ್ರದರ್ಶನ ಇತ್ತು. ಗ್ರ್ಯಾಂಡ್‌ ಫಿನಾಲೆಯಲ್ಲಿ ನಾನು ವಿನ್ಯಾಸಮಾಡಿದ ವಸ್ತ್ರಗಳ ಪ್ರದರ್ಶನ ಇದೆ. ಸಂಪ್ರದಾಯಿಕ, ಆಧುನಿಕ ಎರಡೂ ಇಲ್ಲಿ ರಾರಾಜಿಸಲಿವೆ. ‘ಲವ್‌ ನೆವರ್ ಡೈಸ್‌’ ಎನ್ನುವುದು ಇದರ ಥೀಮ್‌. ವಸ್ತ್ರಗಳ ಮೂಲಕ ರ‍್ಯಾಂಪ್‌ ಮೇಲೆ ಕಥೆ ಹೆಣೆದಿದ್ದೇವೆ.

* ನಿಮ್ಮ ಕುಟುಂಬದ ಬಗ್ಗೆ..
ನನ್ನದು ಪ್ರೇಮ ವಿವಾಹ. ಗಗನಸಖಿಯನ್ನು ಪ್ರೀತಿಸಿ ಮದುವೆಯಾಗಿದ್ದೆ. ವಿವಾಹವಾದ 9 ವರ್ಷಗಳ ನಂತರ ವಿಚ್ಛೇದನವಾಯಿತು. ಕೃಷ್ಣ ಮತ್ತು ರಾಯನ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ‘ಸದ್ಯ ಹ್ಯಾಪಿಲಿ ಡಿವೋರ್ಸ್ಡ್‌, ಸಿಂಗಲ್‌ ಪೆರೆಂಟ್‌’.

* ಫ್ಯಾಷನ್‌ ಜಗತ್ತಿನ ಬಗ್ಗೆ ಒಲವು ಮೊಳೆತದ್ದು, ಹೇಗೆ?
ಪೂರ್ಣಕಾಲಿಕವಾಗಿ ವಸ್ತ್ರವಿನ್ಯಾಸದಲ್ಲಿ ತೊಡಗಿಕೊಳ್ಳುವ ಪೂರ್ವದಲ್ಲಿ ‘ಕಾರ್ ಅ್ಯಂಡ್‌ ಸ್ಟೈಲ್‌’ ಎನ್ನುವ ಕಾರಿನ ಬಿಡಿಭಾಗಗಳ ಶೋ ರೂಮ್‌ ಇಟ್ಟುಕೊಂಡಿದ್ದೆ. ನನ್ನಲ್ಲಿ ಸಂಗ್ರಹವಿದ್ದ ಒಂದಷ್ಟು ವಸ್ತ್ರಗಳಿಗೆ ನವೀನ ಸ್ಪರ್ಶ ನೀಡಿ 3 ದಿನಗಳ ಪ್ರದರ್ಶನದಲ್ಲಿ ಭಾಗವಹಿಸಿದೆ. ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿಂದ ಫ್ಯಾಷನ್ ಜಗತ್ತಿನಲ್ಲಿ ಸಕ್ರಿಯವಾದೆ. ಮತ್ತೆ ಹಿಂತಿರುಗಿ ನೋಡಿದ್ದೆ ಇಲ್ಲ.

* ನಿಮ್ಮ ವಿನ್ಯಾಸಗಳು ಹಾಗೂ ನಿಮ್ಮ ‘ಲೇಬಲ್’ ಕುರಿತು ಹೇಳಿ..
ನನ್ನ ವಿನ್ಯಾಸಗಳು ‘ಕೃಷ್ಣ ದೆಂಬ್ಲ’(ಕೆ.ಡಿ) ಎಂದು ಹೆಸರಿನೊಂದಿಗೆ ಜನಪ್ರಿಯತೆ ಗಳಿಸುತ್ತಿವೆ. ನನ್ನ ಮಗನ ಹೆಸರದು. ನನ್ನ ವಿನ್ಯಾಸಗಳು ಕ್ರಿಯಾಶೀಲವಾಗಿರುತ್ತವೆ ಎನ್ನುವ ನಂಬಿಕೆ ನನಗಿದೆ. ಹೆಚ್ಚು ಸ್ಟೋನ್‌ಗಳನ್ನು ಬಳಸುವುದೇ ನನ್ನ ಟ್ರೇಡ್‌ ಮಾರ್ಕ್‌. ಪ್ರತಿ ಬಾರಿ ವಿನ್ಯಾಸ ಮಾಡುವಾಗಲೂ ಕೇವಲ ರ‍್ಯಾಂಪ್‌ಗೆ ಸೀಮಿತವಲ್ಲ ಎನ್ನುವುದು ನನ್ನ ಮನದಲ್ಲಿರುತ್ತದೆ.

* ವಿನ್ಯಾಸಗಳಿಗೆ ಸ್ಫೂರ್ತಿ ಏನು?
ಜಗತ್ತಿನಲ್ಲಿನ ಎಲ್ಲ ಸುಂದರ ವಸ್ತುಗಳು ನನಗೆ ಸ್ಫೂರ್ತಿ. ಅದು ವ್ಯಕ್ತಿ, ವಸ್ತು, ವಿಷಯ ಯಾವುದಾದರೂ ಆಗಿರಬಹುದು.

* ಉದ್ಯಮ ಹಿನ್ನೆಲೆಯಿಂದ ಬಂದ ನಿಮಗೆ ಕುಟುಂಬದ ಸಹಕಾರ ಹೇಗಿತ್ತು?
ಪ್ರಾರಂಭದಲ್ಲಿ ಸಹಜವಾಗಿಯೇ ತುಸು ಅಸಹನೆ ತೋರಿದರು. ಈಗ ನನ್ನ ಖ್ಯಾತಿಯನ್ನು ಅವರು ಸಂಭ್ರಮಿಸುತ್ತಿದ್ದಾರೆ. ಕಾರ್ಯದ ಒತ್ತಡದ ನಡುವೆಯೂ ಕುಟುಂಬಕ್ಕೂ ಸಾಕಷ್ಟು ಸಮಯ ನೀಡುತ್ತೇನೆ.

* ಫ್ಯಾಷನ್ ಕ್ಷೇತ್ರದಲ್ಲಿ ಯಾವುದೇ ಪದವಿ ಪಡೆಯದ ಹೊರತಾಗಿಯೂ ಇಷ್ಟು ದೂರ ಕ್ರಮಿಸಿದ್ದೀರಿ. ಎಂದಾದರೂ ಫ್ಯಾಷನ್‌ ಪದವಿ ಪಡೆಯಬೇಕಿತ್ತು ಎಂದೆನಿಸಿದುಂಟೆ?
ಖಂಡಿತಾ ಇಲ್ಲ. ಏಕೆಂದರೆ ಫ್ಯಾಷನ್ ಜಗತ್ತಿಗೆ ಅಗತ್ಯವಾದ ಕ್ರಿಯಾಶೀಲತೆ, ಒಲವು ಹುಟ್ಟಿನಿಂದಲೇ ಬರಬೇಕೆ ಹೊರತು ತರಗತಿಗಳಲ್ಲಿ ಅದನ್ನು ಕಲಿವುದು ಅಸಾಧ್ಯ. ಕೋರ್ಸ್‌ಗಳು ಕೇವಲ ಪ್ರಮಾಣಪತ್ರಕ್ಕೆ ಸೀಮಿತ.

* ಭವಿಷ್ಯದ ವಿನ್ಯಾಸಕರಿಗೆ ನಿಮ್ಮ ಸಲಹೆ?
ಶ್ರಮವೆಂಬ ಬಂಡಿಗೆ ಆತ್ಮವಿಶ್ವಾಸ ಎಂಬ ಇಂಧನ ಜೊತೆಗಿದ್ದರೆ ಯಾರಾದರೂ ಯಶಸ್ಸೆಂಬ ಗುರಿಯನ್ನು ಸುಲಭವಾಗಿ ತಲುಪಬಹುದು. ಶ್ರಮದ ಹೊರತಾಗಿ ಯಶಸ್ಸಿಗೆ ಯಾವುದೇ ವಾಮಮಾರ್ಗಗಳಿಲ್ಲ.

* ಫ್ಯಾಷನ್ ಕ್ಷೇತ್ರದಲ್ಲಿ ಆಗಾಗ್ಗೆ ಬದಲಾಗುವ ಟ್ರೆಂಡ್ ಏನನ್ನು ಆಧರಿಸಿರುತ್ತದೆ?
‘ಸಮಯ’ವೇ ಟ್ರೆಂಡ್‌ನ ರೂವಾರಿ. ಕಾಲಕ್ಕೆ ತಕ್ಕಂತೆ ಹೊಸ ಮನಸುಗಳು ನಾವೀನ್ಯವನ್ನು ಬಯಸುತ್ತವೆ. ಅದೇ ಬದಲಾವಣೆಗೆ ಕಾರಣ. ಅದರ ಹೊರತಾಗಿ ಬಣ್ಣಗಳು ಟ್ರೆಂಡ್‌ ಆಗುವುದು, ಇದು ಈ ವರ್ಷದ ಬಣ್ಣ ಎನ್ನುವುದೆಲ್ಲ ತಪ್ಪು ಪರಿಕಲ್ಪನೆಗಳು. ಇವುಗಳನ್ನು ಅನುಸರಿಸುವುದು ಸಹ ಅವೈಜ್ಞಾನಿಕ. ಧರಿಸಲು ಎಷ್ಟು ಸಮಂಜಸವಾಗಿವೆ ಎನ್ನುವುದಷ್ಟೇ ಮುಖ್ಯ.

* ನಿಮ್ಮ ವಿನ್ಯಾಸಗಳಲ್ಲಿ ಬಣ್ಣ ಹಾಗೂ ಸ್ಟೋನ್‌ಗಳೇ ಹೆಚ್ಚು ವಿಜ್ರಂಭಿಸುತ್ತವೆ. ಬಣ್ಣಗಳ ಆಯ್ಕೆ ಹೇಗೆ?
ವ್ಯಕ್ತಿಯ ಚರ್ಮದ ವರ್ಣ, ಎತ್ತರ, ಗಾತ್ರ, ತೂಕಗಳಿಗೆ ಅನುಗುಣವಾಗಿ ಬಣ್ಣಗಳನ್ನು ಆಯ್ಕೆಮಾಡಬೇಕು. ಈ ಕ್ಷೇತ್ರದಲ್ಲಿ ಅನುಭವ ಪಡೆದಂತೆ ವ್ಯಕ್ತಿಯನ್ನು ನೋಡಿದಾಕ್ಷಣ ಅವರಿಗೆ ಇಂತಹ ಬಣ್ಣ ಹೊಂದಿಕೆಯಾಗುತ್ತದೆ ಎನ್ನುವುದು ಗ್ರಹಿಕೆಯಾಗುತ್ತದೆ. ಸ್ಟೋನ್‌ಗಳು ವಸ್ತ್ರಗಳಿಗೆ ಆಕರ್ಷಕ ನೋಟ ನೀಡುತ್ತವೆ ಹಾಗಾಗಿ ಅವುಗಳಿಗೆ ಆದ್ಯತೆ ನೀಡುತ್ತೇನೆ.

* ನಿಮ್ಮ ಪ್ರಕಾರ ಫ್ಯಾಷನ್‌ ಎಂದರೆ?
ನೀವು ಧರಿಸುವ ಉಡುಪನ್ನು ಹೇಗೆ ಪ್ರಸ್ತುತಪಡಿಸಬೇಕು ಎನ್ನುವುದನ್ನು ಅರಿತಿರಬೇಕು. ಯಾವ ಉಡುಪು ಧರಿಸಿದ್ದೇವೆ ಎನ್ನುವುದಕ್ಕಿಂತ ಆತ್ಮವಿಶ್ವಾಸ ಮುಖ್ಯ. ಗ್ಲಾಮರಸ್‌ ಉಡುಪು ಧರಿಸಿದ ಕೂಡಲೇ, ಫ್ಯಾಷನಬಲ್ ಎಂದಲ್ಲ. ಮುಖದಲ್ಲಿನ ಮಂದಹಾಸ, ವ್ಯಕ್ತಿಯ ವ್ಯಕ್ತಿತ್ವವೂ ಉಡುಪಿಗೆ ಪೂರಕವಾಗಿರಬೇಕು.

ವಸ್ತ್ರವಿನ್ಯಾಸಕ ರಮೇಶ್ ದೆಂಬ್ಲ
ವಸ್ತ್ರವಿನ್ಯಾಸಕ ರಮೇಶ್ ದೆಂಬ್ಲ

***

ರ‍್ಯಾಪಿಡ್‌ ಫೈರ್‌

ನಿಮ್ಮ ರೋಲ್‌ ಮಾಡೆಲ್‌: ಉಡುಪುಗಳ ಬಗ್ಗೆ ಅರಿವು, ಆಸಕ್ತಿ ಇರುವ ಎಲ್ಲರೂ.

ಕನಸು: ಕೆ.ಡಿ. ಫ್ಯಾಷನ್‌ ಟೂರ್

ಕನಸಿನ ಷೋ ಸ್ಟಾಪರ್‌: ಜೂಲಿಯಾ ರಾಬೆರ್ಟ್ಸ್‌

ಸ್ಟೈಲ್ ಸ್ಟೇಟ್‌ಮೆಂಟ್‌: ಬೂಟ್ಸ್‌ ಮತ್ತು ಸ್ಕಾರ್ಫ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT