ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬುಗಳ ಅಂದಚಂದ...

ಬ್ಯೂಟಿ ಟಿಪ್ಸ್‌
Last Updated 20 ಜುಲೈ 2018, 19:30 IST
ಅಕ್ಷರ ಗಾತ್ರ

ಹುಬ್ಬೇರಿಸಿ, ಹುಬ್ಬುಗಂಟಿಕ್ಕಿ, ಹುಬ್ಬು ಹಾರಿಸಿ... ಏನೆಲ್ಲ ಭಾವನೆಗಳನ್ನು ರವಾನಿಸಿಬಿಡಬಹುದು... ನಮ್ಮ ಬೇಂದ್ರೆ ಅಜ್ಜ ಸಹ ’ ಹುಬ್ಬು ಹಾರಿಸಿದಾಗ ಹಬ್ಬಾ ಅನಿಸಿತು ನನಗ’ ಅಂತ ಒಂದು ಹಾಡಿನೊಳಗ ನಲ್ಲನ ಬಗ್ಗೆ ಹೇಳ್ತಾರ.

ಇಂಥ ಹುಬ್ಬುಗಳು ಯಾವತ್ತಿಗೂ ನಮ್ಮ ಮುಖಭಾವ, ಮುಖದ ಅಂದ, ನಮ್ಮ ವ್ಯಕ್ತಿತ್ವದ ಬಿಂಬವಾಗಿಯೂ ಇರುತ್ತವೆ. ಕೂಡಿದ ಹುಬ್ಬು ಅದೃಷ್ಟದ ಸಂಕೇತ ಎಂದು ನಂಬುವವರೂ ಇದ್ದಾರೆ. ಏನೇ ಇರಲಿ, ನಮ್ಮ ಮುಖದ ಆಕಾರಕ್ಕೆ ತಕ್ಕಂತೆ ಹುಬ್ಬಿನಾಕಾರ ಇರಬೇಕು.

ಕಣ್ಣಿನಾಕಾರ ತಿಳಿದಂತೆಯೇ ಮುಖದ ಆಕಾರ ತಿಳಿಯಬೇಕಾದರೆ ಒಂದು ಸರಳ ಪ್ರಯೋಗವನ್ನು ಕೈಗೊಳ್ಳೋಣ. ನಂತರ ನಮ್ಮ ಮುಖದ ಆಕಾರಕ್ಕೆ ತಕ್ಕಂತೆ ಹುಬ್ಬಿನಲಂಕಾರ ಹೇಗೆ ಮಾಡಿಕೊಳ್ಳಬಹುದು ಎಂದು ಯೋಚಿಸಬಹುದು.

ನೈಸರ್ಗಿಕವಾಗಿ, ಸಹಜವಾಗಿಯೇ ನಿಮ್ಮ ಮುಖಕ್ಕೆ ಹೊಂದುವಂತಹ ಹುಬ್ಬುಗಳನ್ನೇ ಹೊಂದಿರುತ್ತೀರಿ. ಅವುಗಳನ್ನು ಭಿನ್ನವಾಗಿ ಕಾಣಬೇಕೆಂದು ಬೇಕಾಬಿಟ್ಟಿ ವಿನ್ಯಾಸಗೊಳಿಸಿದರೆ ಅದು ತದ್ವಿರುದ್ಧ ಫಲಿತಾಂಶವನ್ನೇ ನೀಡುತ್ತದೆ.

ಮೇಕಪ್‌ ಕಲಾವಿದರಿಗೆ ಒಂದು ಮುಖದ ಆಕಾರ, ಕಣ್ಣಿನಲಂಕಾರಕ್ಕೂ, ಮುಖದ ಅಲಂಕಾರಕ್ಕೂ ಹುಬ್ಬೇ ದಿಕ್ಸೂಚಿಯಿದ್ದಂತೆ. ಸಾಧ್ಯವಿದ್ದಷ್ಟೂ ಸಹಜ ಹುಬ್ಬಿನಾಕಾರವನ್ನೇ ಉಳಿಸಿಕೊಳ್ಳುವುದು ಒಳಿತು. ಅಂದರೆ ಹುಬ್ಬಿನ ಒಳಭಾಗ ಅಥವಾ ಕೆಳಭಾಗದಲ್ಲಿರುವ ಎಕ್ಸ್ಟ್ರಾ ಕೂದಲನ್ನು ಮಾತ್ರ ತೆಗೆಯಬೇಕು. ಹುಬ್ಬಿನ ಉಬ್ಬಿದ್ದಲ್ಲಿ ಮಾತ್ರ ಬಿಲ್ಲಿನಂತೆ ಬಾಗಿರಲಿ. ಅದು ಶಿಖರದ ಆಕಾರ ಪಡೆಯಬೇಕೆ ಬೇಡವೇ ಎನ್ನುವುದನ್ನು, ನೀವಲ್ಲ, ನಿಮ್ಮ ಮುಖದ ಆಕಾರ ನಿರ್ಧರಿಸಲಿ.

ಮೂಲ ಶೇಪಿಂಗ್‌ ಮಾಡುವುದಾದರೆ ಮೂಗಿನ ಆರಂಭಿಕ ಹಂತದಿಂದೀಚೆ ಹುಬ್ಬನ್ನು ಬಾಗಿಸಿ, ಕಣ್ಣಿನ ಕೊನೆಯವರೆಗೆ ಬೆಳೆದಿರುತ್ತವೆ. ಹುಬ್ಬಿನ ಒಳಭಾಗದಲ್ಲಿ ಹೆಚ್ಚುವರಿಯಾಗಿರುವ ಕೂದಲನ್ನು ನಿವಾರಣೆ ಮಾಡಿಸಿಕೊಂಡು ಉಬ್ಬಿರುವಲ್ಲಿ ಶಿಖರದಂತೆ ಶೇಪ್‌ ಮಾಡಿಸಿಕೊಳ್ಳಿ. ಕಣ್ಣಿನ ಕೊನೆಗೊಂದೆರಡು ಎಳೆಯಷ್ಟು ಉದ್ದಕ್ಕೆ ಬಿಟ್ಟರಾಯಿತು. ಕೆಲವರಿಗೆ ಇಷ್ಟುದ್ದದ ಹುಬ್ಬೇ ಇರುವುದಿಲ್ಲ. ಸಾಮಾನ್ಯವಾಗಿ ಅಂಥವರಿಗೆ ಕಣ್ಣು ಒಳಭಾಗದಲ್ಲಿ ಅಡಗಿಕೊಂಡಂತೆ ಇರುತ್ತವೆ. ನಮಗೆಲ್ಲ ಮುಖದ ಆಕಾರಗಳು ಗೊತ್ತಿವೆ. ದುಂಡುಮುಖ, ಕೋಲುಮುಖ, ಬಾದಾಮಿಯಾಕಾರದ ಮುಖ, ಚೌಕಟ್ಟಿನ ಮುಖ, ವಜ್ರದಾಕಾರ ಹಾಗೂ ಹೃದಯದಾಕಾರದ ಮುಖಗಳೆಂದು ಆಕಾರದ ಪ್ರಕಾರ ವಿಂಗಡಿಸಲಾಗಿದೆ.

ಈಗ ಈ ಆಕಾರದನ್ವಯ ಹುಬ್ಬುಗಳ ಅಲಂಕಾರ ಹೇಗಿರಬೇಕು ಎಂಬುದನ್ನು ನೋಡೋಣ. ಆದರೆ ನಿಮಗೆ ನಿಮ್ಮ ಮುಖದ ಆಕಾರ ಹೇಗಿದೆ ಎಂದು ಗೊತ್ತಿದೆಯೇ? ನಿರ್ಧರಿಸುವುದು ಹೇಗೆ? ಪುಟ್ಟದೊಂದು ಕನ್ನಡಿ ತೊಗೊಳ್ಳಿ. ಎಡಗೈನಲ್ಲಿ ಕನ್ನಡಿ ಹಿಡಿದುಕೊಂಡು, ನಿಮ್ಮ ಪ್ರತಿಬಿಂಬದಲ್ಲಿ ಮುಖದ ಸುತ್ತ ಗೆರೆ ಎಳೆಯುತ್ತ ಹೋಗಿರಿ. ಆ ಗೆರೆ ಸೂಚಿಸುವ ಆಕಾರ ಯಾವುದಕ್ಕೆ ಸಮೀಪವಾಗಿದೆಯೆಂದು ನೋಡಿ, ನಿಮ್ಮ ಮುಖದಾಕಾರವನ್ನು ನಿರ್ಧರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT