ಶನಿವಾರ, ಸೆಪ್ಟೆಂಬರ್ 18, 2021
28 °C
‘ಸೀ–ಬರ್ಡ್’ ಚಾಲಕ, ಕ್ಲೀನರ್‌ಗಳಿಗೆ ಶೋಧ: ಬೈಕ್ ಸವಾರನಿಗೆ ಥಳಿಸಿ ಸಕಲೇಶಪುರಕ್ಕೆ ಕರೆದೊಯ್ದಿದ್ದರು

ಅಜಾಗರೂಕತೆ ಪ್ರಶ್ನಿಸಿದ್ದಕ್ಕೆ ಬಸ್‌ನಲ್ಲೇ ಅಪಹರಿಸಿದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಾಗರೂಕತೆಯಿಂದ ಬಸ್ ಚಾಲನೆ ಮಾಡುವಂತೆ ಹೇಳಿದ್ದಕ್ಕೆ ನನ್ನ ಹಾಗೂ ಸ್ನೇಹಿತನ ಮೇಲೆ ರಾಡ್‌ನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ ‘ಸೀ–ಬರ್ಡ್‌’ ಬಸ್‌ ಚಾಲಕ ಹಾಗೂ ಕ್ಲೀನರ್‌ಗಳು, ನಂತರ ನನ್ನನ್ನು ಅಪಹರಿಸಿ ಸಕಲೇಶಪುರಕ್ಕೆ ಕರೆದೊಯ್ದಿದ್ದರು’ ಎಂದು ಆರೋಪಿಸಿ ರಘು (22) ಎಂಬುವರು ಪೀಣ್ಯ ಠಾಣೆಗೆ ದೂರು ಕೊಟ್ಟಿದ್ದಾರೆ.

ಹಲ್ಲೆಯಿಂದ ರಘು ಅವರ ಬೆನ್ನು, ಕುತ್ತಿಗೆಗೆ ಗಾಯಗಳಾಗಿವೆ. ತುಟಿ ಸಹ ಹರಿದು ಹೋಗಿದ್ದು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಹರಣ (ಐಪಿಸಿ 363), ಕೊಲೆಯತ್ನ (307) ಹಾಗೂ ಜೀವಬೆದರಿಕೆ (506) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗುದ್ದುವಂತೆಯೇ ಬಂದ: ‘ನಾನು ಆಕಾಶ್ ಎಂಬುವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತೇನೆ. ಶುಕ್ರವಾರ ರಾತ್ರಿ ನನಗೆ ಕರೆ ಮಾಡಿದ್ದ ಅವರು, ‘ನವರಂಗ್ ಥಿಯೇಟರ್ ಬಳಿ ಹೋಗು. ಅಲ್ಲಿಗೆ ನನ್ನ ಸ್ನೇಹಿತ ಬಂದು ಹಣ ಕೊಡುತ್ತಾನೆ’ ಎಂದು ಹೇಳಿದ್ದರು. ಹೀಗಾಗಿ, ಗೆಳೆಯ ಮಂಜುನಾಥ್‌ನನ್ನು ಕರೆದುಕೊಂಡು ಬೈಕ್‌ನಲ್ಲಿ ನವರಂಗ್‌ ಬಳಿ ತೆರಳಿದ್ದೆ. ಅಲ್ಲಿ ಕೆಲಸ ಮುಗಿಸಿಕೊಂಡು ಅಂಚೆಪಾಳ್ಯದಲ್ಲಿರುವ ನನ್ನ ಮನೆಗೆ ವಾಪಸಾಗುವಾಗ ಗಲಾಟೆ ನಡೆಯಿತು’ ಎಂದು ರಘು ದೂರಿನಲ್ಲಿ ವಿವರಿಸಿದ್ದಾರೆ.

‘ತುಮಕೂರು ರಸ್ತೆ ಮೇಲ್ಸೇತುವೆ ಇಳಿದು ನವಯುಗ ಟೋಲ್ ಬಳಿ ಹೋಗುತ್ತಿದ್ದಾಗ ‘ಸೀ–ಬರ್ಡ್‌’ ಬಸ್ ನಮಗೆ ಗುದ್ದುವಂತೆಯೇ ಬಂತು.  ಜಾಗರೂಕತೆಯಿಂದ ಹೋಗುವಂತೆ ಕೂಗಿ ಹೇಳಿದಾಗ, ಚಾಲಕ ಬಸ್ ನಿಲ್ಲಿಸಿ ನಮಗೇ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಸರಿಯಾಗಿ ಮಾತನಾಡುವಂತೆ ಹೇಳಿದಾಗ, ಆತ ಹಾಗೂ ಇಬ್ಬರು ಕ್ಲೀನರ್‌ಗಳು ರಾಡ್‌ಗಳಿಂದ ನಮಗೆ ಹೊಡೆಯಲಾರಂಭಿಸಿದರು.’

‘ಇತರೆ ವಾಹನ ಸವಾರರು ನಮ್ಮ ರಕ್ಷಣೆಗೆ ಬಂದರೆ, ಅವರ ಮೇಲೂ ದಾಳಿಗೆ ಯತ್ನಿಸಿದರು. ಕೊನೆಗೆ ಮಂಜುನಾಥ್‌ನನ್ನು ಅಲ್ಲೇ ಬೀಳಿಸಿ, ನನ್ನನ್ನು ಬಸ್‌ನಲ್ಲಿ ಎಳೆದುಕೊಂಡು ಹೊರಟರು. ‘ಈ ಬಸ್ ಯಾರದ್ದು ಗೊತ್ತಾ? ನಮಗೇ ಮಾತನಾಡುತ್ತೀರಾ? ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಸಿದರು. ಚಾಲಕನ ಹೆಸರು ಹರೀಶ್ ಎಂದು, ಒಬ್ಬ ಕ್ಲೀನರ್ ಅಭಿಲಾಷ್ ಎಂದು ಪರಸ್ಪರರ ಸಂಭಾಷಣೆಯಿಂದ ಗೊತ್ತಾಯಿತು. ಮತ್ತೊಬ್ಬನ ಹೆಸರು ತಿಳಿಯಲಿಲ್ಲ.’

‘ನಸುಕಿನ ವೇಳೆ 4 ಗಂಟೆ ಸುಮಾರಿಗೆ ಸಕಲೇಶಪುರ ಬಸ್ ‌ನಿಲ್ದಾಣದಲ್ಲಿ ನಿಲ್ಲಿಸಿದಾಗ, ನಾನು ಅವರಿಂದ ತಪ್ಪಿಸಿಕೊಂಡೆ. ನಂತರ ಇನ್ನೊಂದು ಬಸ್ಸಿನಲ್ಲಿ ಬೆಂಗಳೂರಿಗೆ ವಾಪಸಾದೆ. ಈ ವೇಳೆಗಾಗಲೇ ಗೆಳೆಯ ಮಂಜುನಾಥ್, ನಡೆದ ಘಟನೆಯನ್ನು ನನ್ನ ತಾಯಿ, ತಮ್ಮ ಹಾಗೂ ಮಾಲೀಕ ಆಕಾಶ್ ಅವರಿಗೆ ತಿಳಿಸಿದ್ದ. ಇದರಿಂದ ಅವರೆಲ್ಲರೂ ಗಾಬರಿಗೊಂಡಿದ್ದರು.’

‘ಮಧ್ಯಾಹ್ನ ನಗರಕ್ಕೆ ಬಂದ ನಾನು, ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿ ಅವರೆಲ್ಲರಿಗೂ ವಿಷಯ ತಿಳಿಸಿದೆ. ನನ್ನ ಮೇಲೆ ಹಲ್ಲೆ ನಡೆಸಿದ ಆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಸಿ.ಸಿ ಟಿ.ವಿ ಕ್ಯಾಮೆರಾ ಸಾಕ್ಷ್ಯ
‘ಬಸ್‌ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ಶೋಧ ನಡೆಸುತ್ತಿದ್ದೇವೆ. ಸಿ.ಸಿ ಟಿ.ವಿ ಕ್ಯಾಮೆರಾದ ಡಿವಿಆರ್ ಪೆಟ್ಟಿಗೆ ಕೊಡುವಂತೆ ಟೋಲ್‌ ಸಿಬ್ಬಂದಿಯನ್ನೂ ಕೇಳಿದ್ದೇವೆ. ದೂರುದಾರರ ತುಟಿ ಹರಿದಿರುವುದರಿಂದ ಪೂರ್ತಿ ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಪೀಣ್ಯ ‍ಪೊಲೀಸರು ಹೇಳಿದರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು