ಬಿಜೆಪಿ ಸದಸ್ಯರಿಬ್ಬರ ನಡುವೆ ಜಟಾಪಟಿ..!

7
ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ

ಬಿಜೆಪಿ ಸದಸ್ಯರಿಬ್ಬರ ನಡುವೆ ಜಟಾಪಟಿ..!

Published:
Updated:
Deccan Herald

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ, ಶನಿವಾರ ಬಿಜೆಪಿ ಸದಸ್ಯರಾದ ರಾಜಶೇಖರ ಮಗಿಮಠ ಹಾಗೂ ಆನಂದ ಧುಮಾಳೆ ನಡುವೆ ಆರಂಭಗೊಂಡ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ತಕ್ಷಣವೇ ಸಭೆಯಲ್ಲಿದ್ದ ಸದಸ್ಯರು, ಹೊರಭಾಗದಲ್ಲಿದ್ದ ಪೊಲೀಸರು ಸಭಾಂಗಣ ಪ್ರವೇಶಿಸಿ, ಇಬ್ಬರನ್ನೂ ಸಮಾಧಾನ ಪಡಿಸಲು ಯತ್ನಿಸಿದರು.

ಇದರಿಂದ ಸಾಮಾನ್ಯ ಸಭೆ ನಡೆಯುತ್ತಿದ್ದ ಸಭಾಂಗಣದಲ್ಲಿ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇಬ್ಬರೂ ಸದಸ್ಯರು ಪರಸ್ಪರ ಆರೋಪ–ಪ್ರತ್ಯಾರೋಪ, ಬೆದರಿಕೆಗಳನ್ನು ಹಾಕಿಕೊಂಡರು. ಏಕವಚನದಲ್ಲಿ ನಿಂದಿಸಿದರು.

ಬಿಜೆಪಿ ಸದಸ್ಯ ರವೀಂದ್ರ ಲೋಣಿ ಜಟಾಪಟಿ ನಡೆಸುತ್ತಿದ್ದ ಇಬ್ಬರು ಸದಸ್ಯರ ಕಾಲಿಗೆ ಬಿದ್ದು, ವಿಜಯಪುರದ ಮರ್ಯಾದೆ ಕಳೆಯಬೇಡಿ ಎಂದು ಗೋಗರೆದರೂ; ಸದಸ್ಯರಿಬ್ಬರು ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾದರು.

‘ಆನಂದ ದುಮಾಳೆ ಮದ್ಯದ ಅಮಲಿನಲ್ಲಿ ನನ್ನ ಮೇಲೆ ಹಲ್ಲೆಗೆ ಮುಂದಾದರು. ಬೆದರಿಕೆ ಹಾಕಿದರು. ಅವರನ್ನು ತಕ್ಷಣವೇ ವೈದ್ಯಕೀಯ ಪರೀಕ್ಷೆಗೊಳಪಡಿಸಬೇಕು. ಅವರನ್ನು ಸದಸ್ಯತ್ವದಿಂದ ವಜಾಗೊಳಿಸಬೇಕು. ಈ ಸಂಬಂಧ ಪೊಲೀಸರಿಗೆ ದೂರು ನೀಡುವೆ’ ಎಂದು ರಾಜಶೇಖರ ಮಗಿಮಠ ಪತ್ರಕರ್ತರಿಗೆ ತಿಳಿಸಿದರು.

‘ಸಭೆಯಲ್ಲಿ ಮಗಿಮಠ ಪ್ರಸ್ತಾಪಿಸಿದ್ದ ವಿಷಯಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಲು ಮುಂದಾದೆ. ಏಕವಚನದಲ್ಲಿ ನಿಂದಿಸಿದರು. ಇದರಿಂದ ಕೈ ಮಿಲಾಯಿಸಲು ಮುಂದಾಗಿದ್ದು ನಿಜ. ಆದರೆ ಅವರ ಮೇಲೆ ಹಲ್ಲೆ ನಡೆಸಿಲ್ಲ. ವ್ಯವಸ್ಥಿತ ಪಿತೂರಿ ನಡೆಸಿ ನನ್ನ ತೇಜೋವಧೆಗೆ ಮುಂದಾಗಿದ್ದಾರೆ. ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಆನಂದ ಧುಮಾಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !