ಗೃಹಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಶನಿವಾರ, ಮೇ 25, 2019
22 °C

ಗೃಹಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ‌ರಾಜ್ಯದ ಗೃಹ ಸಚಿವ ಎಂ.ಬಿ.ಪಾಟೀಲ ಅವರು ಬಿಜೆಪಿ, ಹಿಂದೂ ಪರ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಚಾಮರಾಜೇಶ್ವರಸ್ವಾಮಿ ದೇವಸ್ಥಾನ, ಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ, ಧರಣಿ ಕುಳಿತರು. ಎಂ.ಬಿ.ಪಾಟೀಲ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

‘ಸಮ್ಮಿಶ್ರ ಸರ್ಕಾರದ ದ್ವೇಷ ರಾಜಕಾರಣ ಮಿತಿ ಮೀರುತ್ತಿದೆ. ರಾಜಕೀಯ ವಿರೋಧಿಗಳು ಮತ್ತು ಮಾಧ್ಯಮದ ವಿರುದ್ಧ ಕೂಡ ಸರ್ಕಾರ ಪ್ರತೀಕಾರದ ಕ್ರಮಕ್ಕೆ ಮುಂದಾಗುತ್ತಿರುವುದು ಶೋಚನೀಯ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಮಾಡುವಂತೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದರು. ಜೆಡಿಎಸ್ ಶಾಸಕ ನಾರಾಯಣಗೌಡ ಅವರು ನಟರಾದ ದರ್ಶನ್, ಯಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೂ ಯಾವುದೇ ಕ್ರಮ ಜರುಗಿಸಲಿಲ್ಲ’ ಎಂದು ಮನವಿಯಲ್ಲಿ ದೂರಿದ್ದಾರೆ. 

‘ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಹಿತೈಷಿಗಳ ವಿರುದ್ಧ ದೂರು ದಾಖಲಿಸಿ ಬೆದರಿಸಲು ಪೊಲೀಸರನ್ನು ದುರ್ಬಳಕೆ ಮಾಡಲಾಗುತ್ತಿದೆ. ಐಪಿಸಿ 307ರಡಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿದ್ದರೂ ಕೇವಲ ಬಿಜೆಪಿ ಕಾರ್ಯಕರ್ತರನ್ನು ಮಾತ್ರ ಬಂಧಿಸಲಾಗುತ್ತಿದೆ. ಪ್ರಧಾನಿ ಹತ್ಯೆ ಮಾಡುವಂತೆ ಪ್ರಚೋದನಕಾರಿ ಹೇಳಿಕೆ ನೀಡಿದವರನ್ನು ಬಂಧಿಸದ ಸರ್ಕಾರ, ಕೇವಲ ಸರ್ಕಾರದ ವಿರುದ್ಧದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಬಿಜೆಪಿ ಬಗ್ಗೆ ಅಭಿಮಾನ ಹೊಂದಿರುವ ಪತ್ರಕರ್ತರಿಗೂ ಕಿರುಕುಳ ನೀಡಿ ಬಂಧಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕವಡೆ ಕಾಸಿನ ಬೆಲೆಯೂ ಉಳಿದಿಲ್ಲ’ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

‘ಈ ವಿದ್ಯಮಾನಗಳ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೌನಕ್ಕೆ ಶರಣಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜಕೀಯ ದ್ವೇಷ ಬದಿಗಿಟ್ಟು ಆಡಳಿತ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದು ಶೆಟ್ಟಿ, ನಾಗೇಂದ್ರಸ್ವಾಮಿ, ಮುಖಂಡರಾದ ಪುಟ್ಟಅರಸು, ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಸವಣ್ಣ, ನಗರಸಭೆ ಸದಸ್ಯ ರಾಘವೇಂದ್ರ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಮ್ಮ, ವನಜಾಕ್ಷಿ, ಶಿವಮ್ಮ, ಜಯಶ್ರೀ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !