‘ಹಿಂದಿ ಹೇರಿಕೆಯಿಂದ ಸ್ವಾಯತ್ತತೆಗೆ ಕುತ್ತು’

7
ಕೆ.ವಿ.ನಾರಾಯಣ ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ

‘ಹಿಂದಿ ಹೇರಿಕೆಯಿಂದ ಸ್ವಾಯತ್ತತೆಗೆ ಕುತ್ತು’

Published:
Updated:
Prajavani

ಬೆಂಗಳೂರು: ‘ಎಲ್ಲ ರಾಜ್ಯಗಳಲ್ಲೂ 1ರಿಂದ 8ನೇ ತರಗತಿವರೆಗೆ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಅಂಶ ಪ್ರಸ್ತಾವಿತ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಒಂದುವೇಳೆ ಈ ನೀತಿ ಜಾರಿಗೊಂಡರೆ ರಾಜ್ಯದ ಸ್ವಾಯತ್ತತೆಗೆ ಕುತ್ತು ಎದುರಾಗಲಿದೆ’ ಎಂದು ಚಿಂತಕ ಜಿ.ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು. 

ಬಿ.ಎಂ.ಶ್ರೀ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಶಿಕ್ಷಣ ನೀತಿ ಸಮಿತಿಯ ಶಿಫಾರಸು ಅಚ್ಚರಿ ಮೂಡಿಸಿದೆ. ಈ ಬಗೆಯ ತೀರ್ಮಾನ ರಾಷ್ಟ್ರದ ವಿವಿಧ ಭಾಷೆಗಳಿಗೆ ಬಗೆಯುವ ದ್ರೋಹವಾಗಿ ಪರಿಣಮಿಸುವ ಸಾಧ್ಯತೆಯಿದೆ. ಸಂವಿಧಾನದಲ್ಲಿ ರಾಜ್ಯಗಳ ಸ್ವಾಯತ್ತತೆಯ ಪಾತ್ರ, ಮಹತ್ವ ಏನು ಎಂಬುದರ ಬಗ್ಗೆ ಸಮರ್ಥವಾಗಿ ತಿಳಿಯಬೇಕಿದೆ. ಭಾಷೆಗಳ ಅಸ್ತಿತ್ವಕ್ಕೆ ಕುತ್ತು ಬರುತ್ತಿರುವುದರ ಕುರಿತು ದೀರ್ಘ ಚರ್ಚೆ ಮಾಡಿ, ಕ್ರೀಯಾಶೀಲರಾಗುವ ದಾರಿಯನ್ನು ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.

ವಿಮರ್ಶಕ ಬಸವರಾಜ ಕಲ್ಗುಡಿ, ‘ಭಾಷೆ ಸಾಹಿತ್ಯದ ಜೀವವಾಗಬೇಕು. ಈ ಬಗ್ಗೆ ಕಾಳಜಿವುಳ್ಳ ಬರಹಗಾರ ಕೆ.ವಿ.ನಾರಾಯಣ ಅವರು. ತೊಂಡು ಮೇವನ್ನು ಜಗಿದು ವ್ಯವಧಾನದಿಂದ ರಸ ಹೀರುವ ಜಾನುವಾರಗಳಂತೆ ಸಾಹಿತ್ಯದ ಓದುಗರಿಗೂ ಓದಿನ ತಾಳ್ಮೆ ಅಗತ್ಯ’ ಎಂದು ತಿಳಿಸಿದರು.

‘ನಮ್ಮ ನಡುವಿನ ಜೀವ ಸಂಕುಲದ ಧ್ವನಿಯನ್ನು ಅರಿಯುವ ವಿನ್ಯಾಸಗಳನ್ನು ಕೆ.ವಿ.ಎನ್‌ ಅವರ ಬರಹಗಳಲ್ಲಿ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ವಾಂಸ ಕೆ.ವಿ.ನಾರಾಯಣ, ‘ನಾನು 5ನೇ ತರಗತಿಯಲ್ಲಿದ್ದಾಗ ಬಿ.ಎಂ.ಶ್ರೀ ಅವರ ಕಾವ್ಯವನ್ನು ಪಠ್ಯವಾಗಿ ಓದುತ್ತಿದ್ದೆ. ಆ ಮೂಲಕವೇ ಅವರು ನನ್ನ ಅರಿವಿಗೆ ಬಂದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಿಎಂಶ್ರೀ ಕೊಡುಗೆ ಅಪಾರ. ಇವತ್ತು ಅವರ ಹೆಸರಿನ ಪ್ರತಿಷ್ಠಾನದ ಮೂಲಕ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯ. ಪ್ರಶಸ್ತಿಗಳು ನಮ್ಮನ್ನು ವಿನಮ್ರರನ್ನಾಗಿ ಮಾಡುತ್ತವೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !