ಬಸ್ಸಿನಲ್ಲಿ ‌ನಿರ್ವಾಹಕ– ಟೆಕಿ ಮಾರಾಮಾರಿ

ಮಂಗಳವಾರ, ಜೂನ್ 18, 2019
29 °C

ಬಸ್ಸಿನಲ್ಲಿ ‌ನಿರ್ವಾಹಕ– ಟೆಕಿ ಮಾರಾಮಾರಿ

Published:
Updated:
Prajavani

ಬೆಂಗಳೂರು: ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲೇ ನಿರ್ವಾಹಕ ಹಾಗೂ ಸಾಫ್ಟ್‌ವೇರ್‌ ಎಂಜಿನಿಯರ್ ನಡುವೆ ಮಾರಾಮಾರಿ ನಡೆದಿದ್ದು, ಆ ಸಂಬಂಧ ದೂರು– ಪ್ರತಿ ದೂರು ದಾಖಲಾಗಿದೆ.

‘ಐಟಿಪಿಎಲ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಸಿದ್ಧಾರ್ಥ್ ಪಂಕಜ್‌, ಟಿನ್‌ ಫ್ಯಾಕ್ಟರಿಯಿಂದ ಐಟಿಪಿಎಲ್‌ಗೆ ಬಸ್ಸಿನಲ್ಲಿ ತೆರಳುತ್ತಿದ್ದರು. ಅದೇ ಬಸ್ಸಿನಲ್ಲಿ ಕೃಷ್ಣಪ್ಪ ಎಂಬುವರು ನಿರ್ವಾಹಕರಾಗಿದ್ದರು. ಅವರಿಬ್ಬರ ನಡುವೆ ಗಲಾಟೆ ಆಗಿದೆ’ ಎಂದು ಪೊಲೀಸರು ಹೇಳಿದರು.

‘ಸಿದ್ಧಾರ್ಥ್ ಅವರು ಬಸ್ ಚಲಿಸುತ್ತಿದ್ದ ವೇಳೆ ಬಾಗಿಲು ಬಳಿ ನಿಂತುಕೊಂಡಿದ್ದರು. ಅದನ್ನು ಪ್ರಶ್ನಿಸಿದ್ದ ನಿರ್ವಾಹಕ, ‘ನೀನು ಕೆಳಗೆ ಬಿದ್ದು ಸತ್ತರೆ, ನಾನು ಉತ್ತರ ಕೊಡಬೇಕು. ಬಾಗಿಲು ಬಿಟ್ಟು ಒಳಗೆ ಬಾ’ ಎಂದು ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಟೆಕಿ, ನಿರ್ವಾಹಕನ ಜೊತೆ ಜಗಳ ತೆಗೆದಿದ್ದರು. ಮಾತಿಗೆ ಮಾತು ಬೆಳೆದು ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದರು.’

‘ಅದನ್ನು ಗಮನಿಸಿದ್ದ ಚಾಲಕ, ಬಸ್ಸನ್ನೇ ಠಾಣೆಗೆ ಚಲಾಯಿಸಿಕೊಂಡು ಬಂದಿದ್ದ. ‘ಸರ್ಕಾರಿ ನೌಕರನ ಕರ್ತವ್ಯಕ್ಕೆ ಸಿದ್ಧಾರ್ಥ್‌ ಅಡ್ಡಿಪಡಿಸಿದ್ದಾನೆ’ ಎಂದು ನಿರ್ವಾಹಕ ದೂರು ನೀಡಿದ್ದಾರೆ. ಪ್ರತಿ ದೂರು ನೀಡಿರುವ ಟೆಕಿ, ‘ನಿರ್ವಾಹಕನೇ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ’ ಎಂದು ಆರೋಪಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.  

ಫೇಸ್‌ಬುಕ್‌ನಲ್ಲಿ ಆಕ್ರೋಶದ ಪೋಸ್ಟ್: ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಟೆಕಿ ಸಿದ್ಧಾರ್ಥ್‌, ‘ಬೆಂಗಳೂರಿನಲ್ಲಿ ಹೊರ ರಾಜ್ಯದವರಿಗೆ ರಕ್ಷಣೆಯೇ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಸ್ಥಳೀಯರು ಹೊರರಾಜ್ಯದವರನ್ನು ನೋಡುವ ರೀತಿಯೇ ಬೇರೆ. ನನ್ನ ಮೇಲೆಯೇ ನಿರ್ವಾಹಕ ಹಲ್ಲೆ ಮಾಡಿದ್ದು, ಪೊಲೀಸರಿಂದಲೂ ನನಗೆ ನ್ಯಾಯ ಸಿಕ್ಕಿಲ್ಲ’ ಎಂದು ಅವರು ದೂರಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 12

  Amused
 • 3

  Sad
 • 3

  Frustrated
 • 35

  Angry

Comments:

0 comments

Write the first review for this !