4,000 ಬಸ್‌ಗಳ ಜಾಹೀರಾತು ತೆರವಿಗೆ ಕ್ರಮ

7

4,000 ಬಸ್‌ಗಳ ಜಾಹೀರಾತು ತೆರವಿಗೆ ಕ್ರಮ

Published:
Updated:
ಬಿಎಂಟಿಸಿ

ಬೆಂಗಳೂರು: 4,000 ಬಸ್‌ಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆರಂಭಿಸಿದೆ.

ಬಸ್‌ನ ಒಳಗೆ ನಿಂತಿರುವ ಪ್ರಯಾಣಿಕರಿಗೆ ಹೊರಗಿನ ದೃಶ್ಯಗಳು ಕಾಣಿಸದೆ ತೊಂದರೆ ಅನುಭವಿಸುತ್ತಿರುವ ಕುರಿತು ಸಾಕಷ್ಟು ದೂರು ಕೇಳಿ ಬಂದ ಕಾರಣ ಕಿಟಕಿಯ ಮೇಲೆ ಇರುವ ಜಾಹೀರಾತುಗಳನ್ನು ತೆರವುಗೊಳಿಸಲು ಮುಂದಾಗಿದೆ. 

‘4000 ಬಸ್‌ಗಳ ಮೇಲಿನ ಜಾಹೀರಾತು ಒಪ್ಪಂದ ಜೂನ್‌ 30ಕ್ಕೆ ಮುಗಿದಿದೆ. 1,000 ಬಸ್‌ಗಳ ಹಿಂಬದಿಯಲ್ಲಿ ಜಾಹೀರಾತು ಅಳವಡಿಸುವ ಸಂಬಂಧ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಇದಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್‌ ತಿಳಿಸಿದರು.

‘ಎರಡು ವರ್ಷಗಳ ಹಿಂದೆ ನಾನು ನಗರಕ್ಕೆ ಬಂದಾಗ, ಬಸ್‌ ಹೋಗುತ್ತಿರುವ ಮಾರ್ಗ ಕಾಣದೆ ತುಂಬಾ ಕಷ್ಟ ಆಗುತ್ತಿತ್ತು. ಇದೇ ಕಾರಣಕ್ಕೆ ಆಟೊದಲ್ಲಿ ಪ್ರಯಾಣಿಸಲು ಆರಂಭಿಸಿದ್ದೆ. ಈಗ ಜಾಹೀರಾತುಗಳನ್ನು ತೆರವುಗೊಳಿಸುತ್ತಿರುವುದನ್ನು ಕೇಳಿ ಸಂತೋಷವಾಗಿದೆ’ ಎಂದು ಕುಮಾರಸ್ವಾಮಿ ಲೇಔಟ್‌ ನಿವಾಸಿ ಪ್ರಸನ್ನ ಕುಮಾರ್‌ ಹೇಳಿದರು.

ಆದಾಯ ಹೆಚ್ಚಳ
5,000 ಬಸ್‌ಗಳಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ಕಲ್ಪಿಸುವುದರಿಂದ ಬಿಎಂಟಿಸಿಗೆ ತಿಂಗಳಿಗೆ ₹1ಕೋಟಿ ಆದಾಯ ಬರುತ್ತಿದೆ. ಬಸ್‌ಗಳ ಕಿಟಕಿ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸಿದರೂ ನಷ್ಟ ಉಂಟಾಗದು.

‘ಜಾಹೀರಾತು ದರವನ್ನು ಹೆಚ್ಚಿಸಲಾಗಿದೆ. ಹಿಂಬದಿಯ ಜಾಹೀರಾತುಗಳನ್ನು ಹೆಚ್ಚಿನ ಬಸ್‌ಗಳ ಮೇಲೆ ಅಳವಡಿಸಲಿದ್ದೇವೆ. ಇದರಿಂದ ನಷ್ಟ ಆಗಿಲ್ಲ. ತಿಂಗಳಿಗೆ ಈಗ ₹1ಕೋಟಿಗಿಂತ ಹೆಚ್ಚು ಆದಾಯ ಬರುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಳಿ–ನೀಲಿ ಬಣ್ಣದ ಬಸ್‌ಗಳು
ಬಿಳಿ ಹಾಗೂ ನೀಲಿ ಮಿಶ್ರಿತ ಬಣ್ಣದ ಹೊಸ ಬಸ್‌ಗಳು ರಸ್ತೆಗೆ ಇಳಿಯಲಿವೆ. ಹವಾನಿಯಂತ್ರಿತ ಹಾಗೂ ಕೇಸರಿ ಬಣ್ಣದ ಕೆಲವು ಬಸ್‌ಗಳನ್ನು ಹೊರತುಪಡಿಸಿ ಉಳಿದಂತೆ ಬಿಳಿ–ನೀಲಿ ಬಣ್ಣದ ಬಸ್‌ಗಳನ್ನು ಬಿಡಲಾಗುತ್ತದೆ.

‘ವಿವಿಧ ಬಣ್ಣ ಹೊಂದಿರುವ ಸರ್ಕಾರಿ ಬಸ್‌ಗಳು ನೋಡುವುದಕ್ಕೆ ಖಾಸಗಿ ಬಸ್‌ಗಳಂತೆ ಕಾಣುತ್ತವೆ. ಇದರಿಂದ ಗೊಂದಲ ಉಂಟಾಗುತ್ತದೆ’ ಎಂದು ಜೂನ್‌ ತಿಂಗಳಿನ ಸಭೆಯಲ್ಲಿ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಎಲ್ಲಾ ಬಸ್‌ಗಳನ್ನು ವರ್ಷಕ್ಕೆ ಒಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪರೀಕ್ಷೆಗೆ ಬಂದಾಗ ಬಣ್ಣ ಬದಲಿಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !