ಸೋಮವಾರ, ಮಾರ್ಚ್ 1, 2021
30 °C

ಬಿಆರ್‌ ಬೆಟ್ಟ: ಯಾತ್ರಿನಿವಾಸ ‘ಮಯೂರ’ಕ್ಕೆ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿ ರಂಗನಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಯಾತ್ರಿ ನಿವಾಸವನ್ನು  ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ವ್ಯಾಪ್ತಿಯಲ್ಲಿ ಬರುವ ಮಯೂರ ಹೋಟೆಲ್‌ ಸಮೂಹಕ್ಕೆ ಹಸ್ತಾಂತರಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ಮಿಸಲಾಗಿದ್ದ ಯಾತ್ರಿ ನಿವಾಸವನ್ನು ಪ್ರವಾಸೋದ್ಯಮ ಇಲಾಖೆ ದೇವಾಲಯದ ಆಡಳಿತ ಮಂಡಳಿಗೆ ಈ ಹಿಂದೆ ಹಸ್ತಾಂತರಿಸಿತ್ತು. ಇದಕ್ಕಾಗಿ ಆಡಳಿತ ಮಂಡಳಿಯು ಪ್ರವಾಸೋದ್ಯಮಕ್ಕೆ ₹5,000 ಪಾವತಿಸಿತ್ತು. ಆದರೆ, ಅದು ಕಟ್ಟಡವನ್ನು ನಿರ್ವಹಿಸದೇ ಇದ್ದುದರಿಂದ ಪಾಳು ಬಿದ್ದಿತ್ತು. ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್‌ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾತ್ರಿ ನಿವಾಸದ ಸ್ಥಿತಿಯನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕೆಲವು ದಿನಗಳ ಹಿಂದೆ ಇಲಾಖೆಯು ಯಾತ್ರಿ ನಿವಾಸದ ನಿರ್ವಹಣೆಯ ಹೊಣೆಯನ್ನು ಮಯೂರ ಸಮೂಹಕ್ಕೆ ಒಪ್ಪಿಸಿದೆ. ಈ ತಿಂಗಳಲ್ಲಿ ವಸತಿಗೃಹ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

‘ನಾವು ಕಟ್ಟಡವನ್ನು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸಿದ್ದೆವು. ಇಲಾಖೆಗೆ ₹5 ಸಾವಿರವನ್ನೂ ನೀಡಿತ್ತು. ಆದರೆ ಸರಿಯಾಗಿ ನಿರ್ವಹಿಸಿರಲಿಲ್ಲ. ಯಾತ್ರಿ ನಿವಾಸವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಮುಜರಾಯಿ ಇಲಾಖೆ ಆಯುಕ್ತರು ಕೂಡ ಪತ್ರ ಬರೆದಿದ್ದರು. ಹಾಗಾಗಿ, ಅನಿವಾರ್ಯವಾಗಿ ನಮ್ಮ ಇಲಾಖೆಯ ಅಂಗ ಸಂಸ್ಥೆ ಮಯೂರ ಸಮೂಹಕ್ಕೆ ಕಟ್ಟಡವನ್ನು ಹಸ್ತಾಂತರಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜನಾರ್ದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಕಟ್ಟಡ ಬಳಕೆಗೆ ಮುಕ್ತವಾಗು‌ವುದರಿಂದ, ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಕೈಗೆಟುಕುವ ದರದಲ್ಲೇ ಕೊಠಡಿಗಳು ಬಾಡಿಗೆಗೆ ಸಿಗಲಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.