ಮದುಮಗಳವಸ್ತ್ರ ವೈವಿಧ್ಯ

ಸೋಮವಾರ, ಮೇ 20, 2019
30 °C

ಮದುಮಗಳವಸ್ತ್ರ ವೈವಿಧ್ಯ

Published:
Updated:
Prajavani

ಕನಸು ತುಂಬಿದ ಕಣ್ಗಳಿಗೆ ಕಣ್ಗಪ್ಪಿನ ದೃಷ್ಟಿಬೊಟ್ಟು. ಮುಡಿ ತುಂಬಿದ ಮಲ್ಲಿಗೆ ಹೂವು. ಕತ್ತಿನ ತುಂಬ ವೈವಿಧ್ಯ ಆಭರಣ, ಕೈಯಲ್ಲಿ ಮಿಂಚುವ ತೋಳು ಬಂಧಿ, ಸೊಂಟವನ್ನು ನಯವಾಗಿ ಅಪ್ಪಿದ ಸೊಂಟದ ಪಟ್ಟಿ. ಝಗಮಗಿಸುವ ಬೆಳಕಿಗೆ ಸೆಡ್ಡು ಹೊಡೆಯುವಂತಹ ಹೊಳಪಿನ ಉಡುಪು, ಕಳೆ ತುಂಬಿದ ಮೊಗಕ್ಕೆ ಪ್ರಸಾದನದ ಚಿತ್ತಾರ... ಮದುಮಗಳ ಅಲಂಕಾರದ ಪರಿಪೂರ್ಣ ಲಕ್ಷಣಗಳಿವು. 

ಮನಸುಗಳ ನಾಡಿಮಿಡಿತ ಹಿಡಿದು ಮಗ್ಗಲು ಬದಲಿಸುವ ಕ್ಷೇತ್ರ ಫ್ಯಾಷನ್‌. ಹೀಗಾಗಿ ಮದುವೆಯಲ್ಲಿ ಟ್ರೆಂಡ್‌ಗೆ ತಕ್ಕಂತೆ ತಯಾರಾಗ ಬಯಸುವ ವಧು, ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕು. ಫ್ಯಾಷನ್‌ ಕ್ಷೇತ್ರದ ಒಳಹರಿವನ್ನು ಸಮರ್ಥವಾಗಿ ಅರಿತಿದ್ದರೆ ಮಾತ್ರವೇ ವಧುವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುವ ಅತಿಥಿಗಳ ಎದುರು ವಿಶಿಷ್ಟ ಛಾಪು ಮೂಡಿಸಲು ಸಾಧ್ಯ.

ತಿಳಿ ಬಣ್ಣಗಳ ಟ್ರೆಂಡ್‌

ಹೆಣ್ಮಕ್ಕಳ ಮನದೊಳಗೆ ಸೀರೆಗಳ ಸಡಗರ ಸದಾ ರಿಂಗಣಿಸುತ್ತಲೇ ಇರುತ್ತದೆ. ಹೀಗಾಗಿಯೇ ಮೆಹಂದಿ, ಆರತಕ್ಷತೆಗೆ ಲೆಹೆಂಗಾ, ಗೌನ್‌ ಧರಿಸುವ ಪರಿಪಾಠ ಬೆಳೆಯುತ್ತಿದ್ದರೂ, ಮುಹೂರ್ತಕ್ಕೆ ಸೀರೆ ಉಡುವುದೇ ದಕ್ಷಿಣ ಭಾರತದ ಸಂಪ್ರದಾಯ. ಮದುವೆಗೆ ಎಂದರೆ ಅಪ್ಪ ಅಮ್ಮನ ಪ್ರೀತಿಯಷ್ಟೇ ಬೆಚ್ಚಗೆ ಕಾಪಿಡುವ ಪೈಠಾನಿ, ಕಾಂಜೀವರಂ, ಬನಾರಸ್‌, ಮೊಳಕಾಲ್ಮೂರು, ಉಪ್ಪಡ, ಕುಟ್ಟು, ಇಳಕಲ್‌,  ಹೀಗೆ ಜರಿ ಇರುವ, ರಾಯಲ್‌ ಲುಕ್ ನೀಡುವ ಸಂಗ್ರಹ ಮನ ಸೆಳೆಯುತ್ತದೆ. ಮೊದಲೆಲ್ಲ ಮೆರೂನ್‌, ಪಿಂಕ್‌, ಹಸಿರು ಗಾಢ ಬಣ್ಣದ ಸೀರೆಗಳನ್ನೇ ಮದುವೆಗೆ ತೊಡುತ್ತಿದ್ದರು. ಬಂಗಾರದ ಆಭರಣಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಆದರೀಗ ಸೀರೆಗಳ ಬಣ್ಣ ಮತ್ತು ಒಡವೆಗಳಲ್ಲಿಯೂ ಬದಲಾವಣೆಯಾಗಿದೆ.

ಪಿಯಾಂಕಾ ಚೋಪ್ರಾ , ಅನುಷ್ಕಾ ಶರ್ಮಾ ತಮ್ಮ ಮದುವೆಯಲ್ಲಿ ಸವ್ಯಸಾಚಿ ವಿನ್ಯಾಸದ ತಿಳಿ ಬಣ್ಣದ ಉಡುಪು ತೊಟ್ಟು ಹೊಸ ಟ್ರೆಂಡ್‌ ಸೃಷ್ಟಿಸಿದರು. ಇವರಿಂದ ಪ್ರೇರಣೆ ಪಡೆದು ಗಾಢ ವರ್ಣಗಳಾದ ಕಡುಗುಲಾಬಿ, ಕಿತ್ತಳೆ, ಕೆಂಪು, ಹಸಿರು, ನೀಲಿ ಬಣ್ಣಗಳನ್ನು ಬದಿಗೊತ್ತಿ ತಿಳಿ ಬಣ್ಣಗಳ ಬ್ರೈಡಲ್‌ ವೇರ್‌ಗಳು ಈಗಾಗಲೇ ರಾರಾಜಿಸುತ್ತಿವೆ. ಇದರ ಜೊತೆಗೆ ತಿಳಿಗೆಂಪು, ಆಕಾಶ ನೀಲಿ, ಮೆಜೆಂಟಾ, ಕನಕಾಂಬರ ಬಳಕೆ ಹೆಚ್ಚುತ್ತಿವೆ. ತಿಳಿ ಬಣ್ಣದ ಸೀರೆಗೆ ಗಾಢ ಬಣ್ಣದ ಅಂಚುಗಳು ಪ್ರಚುರತೆ ಪಡೆದಿವೆ. 

ಸೀರೆಯ ಸೊಬಗನ್ನು ಹೆಚ್ಚಿಸುವ ಬ್ಲೌಸ್‌ಗಳು ಮಹತ್ವ ಪಡೆದುಕೊಳ್ಳುತ್ತಿವೆ. ಅದ್ದೂರಿ ಕುಸೂರಿಯುಳ್ಳ ಬ್ಲೌಸ್‌ ಈಗಿನ ಟ್ರೆಂಡ್‌. ಸೀರೆ ಸರಳವಾಗಿದ್ದರೂ, ಎಂಬ್ರಾಯ್ಡರಿ ಅದಕ್ಕೆ ಶ್ರೀಮಂತ ನೋಟ ನೀಡುತ್ತದೆ. ಮೆಷಿನ್‌ ಎಂಬ್ರಾಯ್ಡರಿಗಳಿಗಿಂತ ಹ್ಯಾಂಡ್‌ ಎಂಬ್ರಾಯ್ಡರಿಗಳು ಸದ್ದು ಮಾಡುತ್ತಿವೆ. 

ಅರಿಸಿನ ಶಾಸ್ತ್ರಕ್ಕೆ ಹಸಿರು, ಹಳದಿ ಬಣ್ಣಗಳ ಸೀರೆಗಳು ಹೆಚ್ಚಾಗಿ ಬಳಕೆಯಾಗುತ್ತಿವೆ. ಆರತಕ್ಷತೆಗೆ ತಿಳಿ ಗುಲಾಬಿ ಮತ್ತು ಲಿಂಬೆ ಹಸಿರು ಸೀರೆ, ಗಿಳಿ ಹಸಿರು ಬಣ್ಣದ ಸೀರೆ ಸುಂದರವಾಗಿ ಕಾಣುತ್ತದೆ. 

‌ಸೀರೆ ಈಗ ಸಾಂಪ್ರದಾಯಿಕ ಉಡುಪು ಎಂಬ ಪಟ್ಟಕ್ಕಷ್ಟೇ ಸೀಮಿತವಾಗಿರದೆ, ಆಶ್ಚರ್ಯವೆನಿಸುವಂತಹ ವಿನ್ಯಾಸಗಳು ಮಾರುಕಟ್ಟೆ ಪ್ರವೇಶಿಸಿವೆ ರಫಲ್‌, ಡಿಸೈನರ್‌, ಪ್ಯಾಂಟ್‌ ಸೀರೆ... ಇಂತಹ ಕಾರ್ಯಕ್ರಮಗಳಿಗೆ ಧರಿಸಬಹುದು. 

ಒಂದು ವೇಳೆ ಅಂಗಡಿಯಲ್ಲಿ ನಿಮಗೆ ಒಪ್ಪುವಂತಹ ಉಡುಪು ದೊರಕದೆ ಹೋದರೆ ವಸ್ತ್ರ ವಿನ್ಯಾಸಕರ ಮೊರೆ ಹೋಗಬಹುದು. ದೇಹದ ಆಕಾರಕ್ಕೆ ಹೊಂದುವಂತೆ ದಿರಿಸನ್ನು ತಯಾರಿಸಿಕೊಡುತ್ತಾರೆ.

ಅತಿ ಭಾರದ ಸಾಂಪ್ರದಾಯಿಕ ಸೀರೆಗಳನ್ನು ಖರೀದಿಸುವ ಬದಲು ಎಲ್ಲಾ ಸಮಾರಂಭಗಳಿಗೆ ಸರಿಹೊಂದುವ ಹಗುರ ರೇಷ್ಮೆ ಸೀರೆಗಳನ್ನು ಖರೀದಿಸಿದರೆ ಭವಿಷ್ಯದಲ್ಲಿ ಇತರ ಕಾರ್ಯಕ್ರಮಗಳಿಗೂ ಧರಿಸಬಹುದು.

ಮದುವೆಗೆ ಟೆಂಪಲ್‌ ವಿನ್ಯಾಸದ ಆಭರಣಗಳು, ಆ್ಯಂಟಿಕ್‌, ಕುಂದನ್‌... ಹೀಗೆ ವಿವಿಧ ವಿನ್ಯಾಸದ ಆಭರಣಗಳ ಪ್ರಚಲಿತದಲ್ಲಿವೆ. ಇತರ ಶಾಸ್ತ್ರಗಳಾದ ಅರಿಸಿನ, ಮೆಹೆಂದಿ, ಪೂಜೆ, ಗೃಹಪ್ರವೇಶ, ಆರತಕ್ಷತೆ ಸಮಾರಂಭಗಳಿಗೆ ಸೀರೆಗೆ ಸರಿಹೊಂದುವ ಒಡವೆಗಳನ್ನು ಮೊದಲೇ ಪಟ್ಟಿ ಮಾಡಿಟ್ಟುಕೊಳ್ಳುವುದು ಒಳಿತು. 

ಉಡುಪಿನ ಜೊತೆಗೆ ಮೇಕಪ್‌ ಕೂಡ ಮುಖ್ಯ. ಮದುವೆ ದಿನ ಮೇಕಪ್‌ ಪ್ರಯೋಗಿಸಿ ಅದು ಮುಖಕ್ಕೆ ಹೊಂದದಿದ್ದರೆ ಏನು ಗತಿ? ಎಂದು ಚಿಂತಿಸುವ ಅಗತ್ಯವಿಲ್ಲ. ಮದುವೆಗೆ ಒಂದು ತಿಂಗಳು ಇದೆ ಎನ್ನುವಾಗ ಬ್ಯೂಟಿಷಿಯನ್‌ ಭೇಟಿಯಾಗಿ ಸಲಹೆ ಪಡೆಯಬಹುದು. ಅವರು ಸೀರೆಯ ಬಣ್ಣಕ್ಕೆ ಹೊಂದುವಂತೆ ಮೇಕಪ್‌ ಮಾಡುತ್ತಾರೆ. ಗ್ಲೋ, ಶೈನಿಂಗ್‌ ಮೇಕಪ್‌ ಸದ್ಯದ ಟ್ರೆಂಡ್‌. ಮದುವೆಗೆ ಮುಂಚೆಯೇ ಮೇಕಪ್‌ ಟ್ರಯಲ್‌ ತೋರಿಸುವುದರಿಂದ ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಅವಕಾಶವೂ ಇರುತ್ತದೆ. 

ಹಳೆ ಸೀರೆಗೆ ಮರುಜೀವ

ಮದುವೆ ಎನ್ನುವುದು ಮಹತ್ವವಾದ ಘಟ್ಟ. ಈ ಸಮಾರಂಭದ ಪ್ರತಿ ಸನ್ನಿವೇಶವೂ ಸ್ಮೃತಿ ಪಟದಲ್ಲಿ ಅಚ್ಚಳಿಯದಂತೆ ಉಳಿಯಬೇಕು ಎಂಬುದೇ ಯುವತಿಯರ ಬಯಕೆ. ಈ ಕಾರಣಕ್ಕೆ ಅಮ್ಮನ ಮದುವೆಯ ಸೀರೆಗೆ ಮರುಜೀವ ನೀಡುವ ಪರಿಪಾಟ ಆರಂಭವಾಗಿದೆ. ಡಿಸೈನರ್‌ ಬಳಿ ಸೀರೆ ವಿನ್ಯಾಸ ಮಾಡಿಸಿಕೊಳ್ಳುವ ಮದುಮಗಳು ಅಮ್ಮನ ಸೀರೆಯ ಒಂದು ಭಾಗವನ್ನು ತಮ್ಮ ಮದುವೆಯ ಸೀರೆಗೆ ಇರಿಸಿಕೊಳ್ಳುತ್ತಾರೆ. ಈ ಟ್ರೆಂಡ್‌ ಉತ್ತರ ಭಾರತದಲ್ಲಿ ಹೆಚ್ಚಿದೆ. ಇತ್ತೀಚೆಗೆ ಮದುವೆಯಾದ ಇಶಾ ಅಂಬಾನಿ ಅವರಮ್ಮನ ಮೂವತ್ತೈದು ವರ್ಷಗಳ ಹಳೆಯ ಸೀರೆಯನ್ನು ತಮ್ಮ ಲೆಹೆಂಗಾದಲ್ಲಿ ಬಳಕೆ ಮಾಡಿದ್ದರು. ಪ್ರಿಯಾಂಕಾ ಚೋಪ್ರಾ ಮದುವೆಯ ಗೌನ್‌ನಲ್ಲಿ ಅವರಪ್ಪನ ಹೆಸರು ಬರೆಸಿಕೊಂಡಿದ್ದರು. ದಕ್ಷಿಣ ಭಾರತಕ್ಕೆ ಈ ಟ್ರೆಂಡ್‌ ಇನ್ನು ಬಂದಿಲ್ಲ. 

ಈಗೆಲ್ಲ ಅದ್ದೂರಿ ಆಭರಣಗಳನ್ನೇ ಬಳಸುವುದರಿಂದ ಸೀರೆಗಳ ಬಣ್ಣ ತಿಳಿಯಾಗಿರಬೇಕು. ಇದರಿಂದ ವಧುವಿನ ಮೊಗ ಎದ್ದು ಕಾಣುತ್ತದೆ. ಸೀರೆ ಗಾಢವಾಗಿದ್ದು, ಆಭರಣವೂ ಅದ್ದೂರಿಯಾಗಿದ್ದರೆ, ಮದುಮಗಳು ಡಲ್‌ ಎನಿಸುತ್ತಾಳೆ. 

ಇಂಚರಾ ಸುರೇಶ್‌, ಡಿಸೈನರ್‌ 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !