ಬುಧವಾರ, ಅಕ್ಟೋಬರ್ 16, 2019
22 °C
ಕೇಂದ್ರದಿಂದ ಬರದ ನೆರೆ ಪರಿಹಾರ: ರಾಜ್ಯ ಸರ್ಕಾರ, ವಿರೋಧ ಪಕ್ಷಗಳ ವಿರುದ್ಧ ಬಿಎಸ್‌ಪಿ ಆಕ್ರೋಶ

ಅ.5: ಸಂಸದರ ರಾಜೀನಾಮೆಗೆ ಒತ್ತಾಯಿಸಿ ಧರಣಿ

Published:
Updated:
Prajavani

ಚಾಮರಾಜನಗರ: ನೆರೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನರಿಗೆ ಕೇಂದ್ರದಿಂದ ಪರಿಹಾರ ಕೊಡಿಸಲು ವಿಫಲವಾಗಿರುವ ರಾಜ್ಯದ ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಇದೇ 5ರಂದು ರಾಜ್ಯದಾದ್ಯಂತ ಧರಣಿ ನಡೆಸಲಿದೆ.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಅವರು, ‘ರಾಜ್ಯದಲ್ಲಿ ಬಿಜೆಪಿಯ 25 ಸಂಸದರು ಇದ್ದಾರೆ. ಪಕ್ಷೇತರರೂ ಒಬ್ಬರು ಇದ್ದಾರೆ. ಆದರೆ, ಇದುವರೆಗೆ ಇವರು ಯಾರೂ ನೆರೆ ಪರಿಹಾರದ ಬಗ್ಗೆ ಧ್ವನಿ ಎತ್ತಿಲ್ಲ. ಗೃಹ ಸಚಿವ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಪರಿಹಾರ ನೀಡಬೇಕು ಎಂಬ ಬೇಡಿಕೆ ಇಟ್ಟಿಲ್ಲ’ ಎಂದು ಅವರು ಆಕ್ರೋಶ ಪಡಿಸಿದರು.

‘ರಾಜ್ಯದ ಎಲ್ಲ ಸಂಸದರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದಕ್ಕೆ ಆಗ್ರಹಿಸಿ ಇದೇ 5ರಂದು ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯರ್ತರು ಧರಣಿ ‌ನಡೆಸಲಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿಯನ್ನೂ ಸಲ್ಲಿಸಲಿದ್ದೇವೆ’ ಎಂದರು.

ರಾಜ್ಯ ಸರ್ಕಾರ, ವಿರೋಧ ಪಕ್ಷಗಳೂ ವಿಫಲ: ‘ನೆರೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಿಲ್ಲ. ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿ ತೋರಿಸಬೇಕಾದ ವಿರೋಧ ಪಕ್ಷಗಳು ಕೂಡ ಸುಮ್ಮನಿವೆ. ಸರ್ಕಾರವನ್ನು ಎಚ್ಚರಿಸುವಲ್ಲಿ ಎರಡೂ ಪಕ್ಷಗಳು ವಿಫಲವಾಗಿವೆ’ ಎಂದು ದೂರಿದರು.

ದೇಶದ ಭಾಗವಲ್ಲವೇ?: ‘ನೆರೆಯಿಂದಾಗಿ 6 ಲಕ್ಷ ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ. 1.90 ಕೋಟಿ ಮಂದಿ ಬಾಧಿತರಾಗಿದ್ದಾರೆ. ರಾಜ್ಯ ಸರ್ಕಾರ ಕೇವಲ ₹10 ಸಾವಿರ ಪರಿಹಾರ ನೀಡಿದೆ. ಕೇಂದ್ರ ಸಚಿವರಾದ ಅಮಿತ್‌ ಶಾ ಹಾಗೂ ನಿರ್ಮಲಾ ಸೀತಾರಾಮನ್‌ ಅವರು ಬಂದು ವೈಮಾನಿಕ ಸಮೀಕ್ಷೆ ನಡೆಸಿದ್ದರೂ ನಯಾ ಪೈಸೆ ಪರಿಹಾರ ಕೇಂದ್ರದಿಂದ ಸಿಕ್ಕಿಲ್ಲ. ಇದೆಲ್ಲ ಗಮನಿಸುತ್ತಿದ್ದರೆ, ರಾಜ್ಯವು ದೇಶದ ಒಕ್ಕೂಟ ವ್ಯವಸ್ಥೆಯ ಭಾಗವಲ್ಲವೇನೋ ಎಂಬ ಅನುಮಾನ ಬರುತ್ತದೆ’ ಎಂದು ನಾಗೇಂದ್ರ ಹೇಳಿದರು.

ಅದ್ಧೂರಿ ಬೇಕಿರಲಿಲ್ಲ: ‘ರಾಜ್ಯದ ಜನರು ಸಂಕಷ್ಟದಲ್ಲಿರುವಾಗ ದಸರಾವನ್ನು ಅದ್ಧೂರಿಯಾಗಿ ಆಚರಿಸಬೇಕಿರಲಿಲ್ಲ. ಸರಳವಾಗಿ ಮಾಡಲು ಅವಕಾಶ ಇತ್ತು’ ಎಂದು ಅವರು ಹೇಳಿದರು.

ಬಿಎಸ್‌ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ, ಮುಖಂಡರಾದ ಕೃಷ್ಣಯ್ಯ, ಬ್ಯಾಡಮೂಡ್ಲು ಬಸವಣ್ಣ ಮತ್ತು ಬಾಮ ಕೃಷ್ಣಮೂರ್ತಿ ಇದ್ದರು.

‘ಮೋದಿ ಎದುರು ಪ್ರತಾಪ ತೋರಿಸಲಿ’

‘ಕೇಂದ್ರದಿಂದ ನೆರೆ ಪರಿಹಾರದ ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರು ಹಾಗೂ ರಾಜ್ಯ ಸರ್ಕಾರದ ಕೆಲವು ಸಚಿವರು ದರ್ಪದಿಂದ ವರ್ತಿಸುತ್ತಿದ್ದಾರೆ. ರಾಜ್ಯದ ಜನರು ಭಿಕ್ಷೆ ಬೇಡುತ್ತಿಲ್ಲ. ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಸಂಸದ ಪ್ರತಾಪ್‌ ಸಿಂಹ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ತಮ್ಕ ಪ್ರತಾಪ ಪ್ರದರ್ಶಿಸಿ, ನೆರೆ ಪರಿಹಾರ ಮೊತ್ತವನ್ನು ರಾಜ್ಯಕ್ಕೆ ತರಲಿ’ ನಾಗೇಂದ್ರ ಸವಾಲು ಹಾಕಿದರು.

Post Comments (+)