ಗುರುವಾರ , ಫೆಬ್ರವರಿ 25, 2021
25 °C
ಬಜೆಟ್: ಹುಸಿಯಾದ ನಿರೀಕ್ಷೆಗಳು

ಗಡಿಜಿಲ್ಲೆಗೆ ಧಕ್ಕಿದ್ದು ₹11.8 ಕೋಟಿ, ದೊಡ್ಡ ಕೊಡುಗೆಗಳಿಲ್ಲ, ನಿರಾಸೆಯೇ ಎಲ್ಲ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿರುವ ಬಜೆಟ್‌ ಗಡಿಜಿಲ್ಲೆಯ ಜನರಿಗೆ ನಿರಾಸೆ ಉಂಟು ಮಾಡಿದೆ. ಬಜೆಟ್‌ನಲ್ಲಿ ಜಿಲ್ಲೆಗೆ ನೇರವಾಗಿ ಹಂಚಿಕೆ ಮಾಡಿರುವ ಹಣ ಎರಡಂಕಿಯೂ ದಾಟಿಲ್ಲ. 

ಘೋಷಣೆ ಮಾಡಿರುವ ವಿವಿಧ ಯೋಜನೆಗಳ ಲಾಭ ಜಿಲ್ಲೆಯ ರೈತರು ಹಾಗೂ ಜನರಿಗೆ ಸಿಗುತ್ತದೆಯಾದರೂ, ಜಿಲ್ಲೆಗಾಗಿ ದೊಡ್ಡ ಯೋಜನೆಗಳನ್ನು ಘೋಷಿಸಿಲ್ಲ. ಜಿಲ್ಲೆಯಲ್ಲಿ ಮೂರು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಕುಮಾರಸ್ವಾಮಿ ಅವರು ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ₹8.5 ಕೋಟಿ ಹಣ ಹಂಚಿಕೆ ಮಾಡಿದ್ದಾರೆ. 

ಸ್ಥಗಿತಗೊಂಡಿರುವ ‌ಚಾಮರಾಜನಗರ ರೇಷ್ಮೆ ಕಾರ್ಖಾನೆಯ ಪುನರುಜ್ಜೀವನಕ್ಕೆ ₹ 5 ಕೋಟಿ, ಸಂತೇಮರಹಳ್ಳಿಯಲ್ಲಿರುವ ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ಹೊಸ ರೀಲಿಂಗ್‌ ಯಂತ್ರ ಅಳವಡಿಸಲು ಹಾಗೂ ಯುವಜನರಿಗೆ ತರಬೇತಿ ನೀಡುವ ಉದ್ದೇಶಕ್ಕೆ ₹2 ಕೋಟಿ ಹಾಗೂ ಬಾಲಕಿಯರ ಕ್ರೀಡಾ ಹಾಸ್ಟೆಲ್‌ ನಿರ್ಮಾಣಕ್ಕೆ ₹1.5 ಕೋಟಿ ಹಂಚಿಕೆ ಮಾಡಿರುವುದು ಬಿಟ್ಟರೆ, ಜಿಲ್ಲೆಗೆ ಬೇರೆ ಯಾವ ಹೊಸ ಕಾರ್ಯಕ್ರಮಗಳನ್ನೂ ಘೋಷಣೆ ಮಾಡಲಾಗಿಲ್ಲ.  

ನಿರೀಕ್ಷೆ ಹುಸಿ: ಕಳೆದ ವರ್ಷ ಮೈತ್ರಿ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ₹50 ಕೋಟಿ ಹಾಗೂ ಭರಚುಕ್ಕಿ ಜಲಪಾತ ಸುತ್ತಮುತ್ತಲಿನ ಅಭಿವೃದ್ಧಿಗೆ ₹2.5 ಕೋಟಿ ಘೋಷಿಸಲಾಗಿತ್ತು. 

ಈ ಬಾರಿ ಯಾವುದಾದರೂ ದೊಡ್ಡ ಯೋಜನೆಯೊಂದನ್ನು ಜಿಲ್ಲೆಗೆ ಕೊಡಬಹುದು. ನೀರಾವರಿಗೆ ಸಂಬಂಧಿಸಿದ ಹೊಸ ಯೋಜನೆಯನ್ನು ಘೋಷಣೆ ಮಾಡಬಹುದು, ಕಾಡಂಚಿನ ಗ್ರಾಮಗಳ ಸಮಸ್ಯೆಗಳ ನಿವಾರಣೆ, ಮಾನವ –ವನ್ಯಜೀವಿ ಸಂಘರ್ಷ ತಡೆಗೆ ಕ್ರಮಗಳನ್ನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಅದೆಲ್ಲವೂ ಹುಸಿಯಾಗಿದೆ. ಆದರೆ, ಆನೆ–ಮಾನವ ಸಂಘರ್ಷ ತಡೆಗೆ ರಾಜ್ಯದಾದ್ಯಂತ ರೈಲ್ವೆ ಕಂಬಿಯ ಬೇಲಿ ನಿರ್ಮಾಣ ಪ್ರಸ್ತಾವ ಬಜೆಟ್‌ನಲ್ಲಿದೆ. ಹಾಗಾಗಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲೂ ಬೇಲಿ ನಿರ್ಮಾಣವಾಗಬಹುದು ಎಂದು ನಿರೀಕ್ಷಿಸಬಹುದು.

ಹಾಸ್ಟೆಲ್‌ಗೆ ₹3.3 ಕೋಟಿ: ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗಾಗಿ ತಲಾ ಒಂದು ಸಂಯುಕ್ತ ಹಾಸ್ಟೆಲ್‌ ನಿರ್ಮಾಣಕ್ಕೆ ₹100 ಕೋಟಿ ಮೀಸಲಿಡಲಾಗಿದೆ. ಇದರ ಅನ್ವಯ ಜಿಲ್ಲೆಯಲ್ಲೂ ಒಂದು ಹಾಸ್ಟೆಲ್‌ ನಿರ್ಮಾಣವಾಗಲಿದ್ದು, ಇದಕ್ಕೆ ₹3.3 ಕೋಟಿ ಅನುದಾನ ಸಿಗುವ ಸಾಧ್ಯತೆ ಇದೆ. 

ಬಜೆಟ್‌ನ ಸಮಗ್ರ ನೋಟವನ್ನು ಮೆಚ್ಚಿಕೊಂಡರೂ, ಜಿಲ್ಲೆಯನ್ನು ಕಡೆಗಣಿಸಿರುವುದಕ್ಕೆ ಜನರು ವಿವಿಧ ಪಕ್ಷಗಳ ಮುಖಂಡರು, ರೈತ ಮುಖಂಡರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ರೇಷ್ಮೆಗೆ ಇನ್ನಷ್ಟು ಪ್ರೋತ್ಸಾಹ ಬೇಕಿತ್ತು: ಒಂದು ಕಾಲದಲ್ಲಿ ‘ರೇಷ್ಮೆನಾಡು’ ಎಂದೇ ಖ್ಯಾತಿ ಹೊಂದಿದ್ದ ಜಿಲ್ಲೆಯಲ್ಲಿ ಐದು ರೇಷ್ಮೆ ಕಾರ್ಖಾನೆಗಳು (ಚಾಮರಾಜನಗರ, ಸಂತೇಮರಹಳ್ಳಿ, ಮಾಂಬಳ್ಳಿ, ಮುಡಿಗುಂಡ, ಕೊಳ್ಳೇಗಾಲ) ಕಾರ್ಯನಿರ್ವಹಿಸುತ್ತಿದ್ದವು. ಈಗ ಕೊಳ್ಳೇಗಾಲ ಬಿಟ್ಟರೆ ಉಳಿದ ಎಲ್ಲ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಈ ಬಜೆಟ್‌ನಲ್ಲಿ ಚಾಮರಾಜನಗರ ಮತ್ತು ಸಂತೇಮರಳ್ಳಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ. ರೇಷ್ಮೆ ಸಚಿವ ಸಾ.ರಾ. ಮಹೇಶ್‌ ಅವರು ನವೆಂಬರ್‌ ತಿಂಗಳಲ್ಲಿ ಸಂತೇಮರಹಳ್ಳಿ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡಿದ್ದರು. 

ಇಡೀ ಜಿಲ್ಲೆಯ ಎಲ್ಲ ಕಾರ್ಖಾನೆಗಳ ಪುನರುಜ್ಜೀವನಕ್ಕಾಗಿ ಒಂದು ಪ್ಯಾಕೇಜ್‌ ಮಾಡಿದ್ದರೆ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯವನ್ನು ರೈತ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ. 

‘ಜಿಲ್ಲೆಗೆ ದೊಡ್ಡ ಕೊಡುಗೆ ಏನಿಲ್ಲ. ಜಿಲ್ಲೆಯಲ್ಲಿ ಪದೇ ‍ಪದೇ ಕಾಣಿಸುತ್ತಿರುವ ಬರಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಯನ್ನು ರೂಪಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅಂತಹ ಯೋಜನೆಯನ್ನೇ ಪ್ರಸ್ತಾಪಿಸಿಲ್ಲ’ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಕಾಡಿನ ಒಳಭಾಗದಲ್ಲಿರುವ ಗ್ರಾಮಗಳು ಹಾಗೂ ಜಿಲ್ಲೆಯ ಕಾಡಂಚಿನ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಬಗ್ಗೆ ವಿಶೇಷ ಪ್ಯಾಕೇಜ್‌ ರೂಪಿಸಬಹುದಿತ್ತು. ಅದೂ ಆಗಿಲ್ಲ’ ಎಂದು ಅವರು ಹೇಳಿದರು.

ಹೊಗೆನಕಲ್‌ ಜಲಪಾತ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನಬೆಟ್ಟ ಸೇರಿದಂತೆ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಅವುಗಳ ಅಭಿವೃದ್ಧಿಯ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ.  

ರಾಜ್ಯದಲ್ಲಿ ಅತಿ ಹೆಚ್ಚು ಬರಪೀಡಿತ ಮತ್ತು ಅಂತರ್ಜಲ ಮಟ್ಟ ಕುಸಿದಿರುವ 100 ತಾಲ್ಲೂಕುಗಳಲ್ಲಿ ಬರ ನಿರೋಧಕ ಜಲಾನಯನ ಚಟುವಟಿಕೆ ಕೈಗೊಳ್ಳಲು ₹100 ಕೋಟಿ ಅನುದಾನ ನೀಡುವುದಾಗಿ ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ತಾಲ್ಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ತಾಲ್ಲೂಕುಗಳ ಹೆಸರಿದ್ದರೆ, ಒಂದು ತಾಲ್ಲೂಕಿಗೆ ₹1 ಕೋಟಿಯಂತೆ ಅನುದಾನ ಸಿಗಲಿದೆ.

ಉಳಿದಂತೆ, ಹಾಲು ಉತ್ಪಾದಕರಿಗೆ ಲೀಟರ್‌ಗೆ ₹6 ಪ್ರೋತ್ಸಾಹ ಧನ, ಸಿರಿಧಾನ್ಯ ಬೆಳೆಯುವ ರೈತರಿಗಾಗಿ ಘೋಷಿಸಿರುವ ‘ರೈತ ಸಿರಿ’ ಯೋಜನೆಯ ಪ್ರಯೋಜನ ಜಿಲ್ಲೆಯ ರೈತರಿಗೂ ದೊರೆಯಲಿದೆ.

 ರೈತರಿಗೆ, ಶಿಕ್ಷಣಕ್ಕೆ ಒತ್ತು 

ಇದೊಂದು ಉತ್ತಮ ಬಜೆಟ್‌. ಕೃಷಿ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜಿಲ್ಲೆಗೆ ಈಗಾಗಲೇ ಎಲ್ಲ ರೀತಿಯ ಯೋಜನೆಗಳು ಬಂದಿವೆ. ಚಾಮರಾಜನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯೊಂದು ಅನುಷ್ಠಾನಗೊಳ್ಳಬೇಕು. ₹220 ಕೋಟಿಯ ಯೋಜನೆಯ ಬ‌ಗ್ಗೆ ಇನ್ನೂ ಪ್ರಸ್ತಾವನೆ ಕಳುಹಿಸಲಾಗಿಲ್ಲ. ಹಾಗಾಗಿ, ಅದು ಬಾಕಿ ಉಳಿದಿದೆ.

–ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ

ನಿರಾಶಾದಾಯಕ ಬಜೆಟ್‌

ನಮ್ಮ ಜಿಲ್ಲೆಗೆ ಅತ್ಯಂತ ಅಗತ್ಯವಿರುವಂತಹ ಯೋಜನೆಗಳಿಗೆ ಅನುದಾನ ನೀಡಲಾಗಿಲ್ಲ. ಬರಪೀಡಿತವಾಗಿರುವ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವಂತಹ ಯೋಜನೆಗಳ ಅಗತ್ಯವಿತ್ತು. ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ತಡೆಗೆ ಕ್ರಮ ಕೈಗೊಳ್ಳಬೇಕಿತ್ತು. ಅದು ಯಾವುದೂ ಆಗಿಲ್ಲ. ಹಿಂದಿನ ಬಜೆಟ್‌ನಲ್ಲಿ ಘೋಷಿಸಿರುವ ಸಾಲಮನ್ನಾ ಇನ್ನೂ ಆಗಿಲ್ಲ. ಚುನಾವಣೆಗಾಗಿ ರೈತರನ್ನು ಓಲೈಸಲಾಗಿದೆ. ಇದೊಂದು ನಿರಾಶಾದಾಯಕ ಬಜೆಟ್‌  

ಸಿ.ಎಸ್‌. ನಿರಂಜನಕುಮಾರ್‌, ಗುಂಡ್ಲುಪೇಟೆ ಶಾಸಕ

ರೈತರ ಪರವಾದ ಬಜೆಟ್‌

ಇದೊಂದು ರೈತ ಪರವಾದ ಬಜೆಟ್‌. ಜಿಲ್ಲೆಗೆ ನೇರವಾಗಿ ₹8.5 ಕೋಟಿ ಅನುದಾನ ಬಂದರೂ, ಬೇರೆ ಬೇರೆ ಯೋಜನೆಗಳಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ಇದರಿಂದ ನಮ್ಮ ಜಿಲ್ಲೆಗೆ ಅನುಕೂಲವಾಗಲಿದೆ. ಹಾಲಿನ ಪ್ರೋತ್ಸಾಹಧನ ಹೆಚ್ಚಿಸಲಾಗಿದೆ. ಸಿರಿ ಧಾನ್ಯ ಬೆಳೆಗಾರರಿಗೆ ₹10,000 ನೀಡುವ ಘೋಷಣೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ.

–ಆರ್‌.ನರೇಂದ್ರ, ಹನೂರು ಶಾಸಕ

ಜಿಲ್ಲೆಗೆ ಸಿಗದ್ದಕ್ಕೆ ಅಸಮಾಧಾನ

ಇದೊಂದು ಸಮಗ್ರ ಬಜೆಟ್‌. ಇದು ಕರ್ನಾಟಕದ ಎಲ್ಲ ಭಾಗಗಳ ಸಮಾನ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ, ನಮ್ಮ ಜಿಲ್ಲೆಗೆ ನೀಡಲಾಗಿರುವ ಅನುದಾನದ ಬಗ್ಗೆ ಸಣ್ಣ ಅಸಮಾಧಾನ ಇದೆ. ಇನ್ನಷ್ಟು ಕೊಡುವುದಕ್ಕೆ ಅವಕಾಶ ಇತ್ತು. ವಿಶೇಷ ಕಾಳಜಿ ನೀಡಬೇಕಾದಂತಹ ಹಲವು ವಿಷಯಗಳು ಇಲ್ಲಿದ್ದವು. ಆದರೆ, ಎರಡು ರೇಷ್ಮೆ ಕಾರ್ಖಾನೆಗಳ ಅಭಿವೃದ್ಧಿಗೆ ಮಾತ್ರ ಹಣ ಹಂವಿಕೆ ಮಾಡಲಾಗಿದೆ.

–ಎನ್‌.ಮಹೇಶ್‌, ಕೊಳ್ಳೇಗಾಲ ಶಾಸಕ

ರೈತರ ಮತ ಪಡೆಯುವ ಯತ್ನ

ರೈತರ ಖಾತೆಗೆ ನೇರ ದುಡ್ಡು ಹಾಕುವಂತಹ ಯೋಜನೆಗಳು ನಮಗೆ ಬೇಡ. ನಮಗೆ ಸಂಸ್ಕರಣಾ ಘಟಕಗಳು, ಶೀತಲೀಕರಣ ಘಟಕಗಳಂತಹ ಸೌಲಭ್ಯ ಬೇಕು. ಹೋದ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಇನ್ನೂ ಜಾರಿಗೊಂಡಿಲ್ಲ. ಬೆಂಬಲ ಬೆಲೆ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಚುನಾವಣೆಯಲ್ಲಿ ರೈತರ ಮತ ಪಡೆಯಲು ಮಾಡಿರುವ ಯತ್ನ ಇದು. ಸ್ವಾಮಿನಾಥನ್‌ ವರದಿ ಜಾರಿಗಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕುವ ತೀರ್ಮಾನ ಕೈಗೊಳ್ಳಬೇಕಿತ್ತು

–ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು