ಶನಿವಾರ, ಮೇ 15, 2021
25 °C
ಹಣದುಬ್ಬರ ನಿಯಂತ್ರಣ: ಸುಬ್ಬರಾವ್ ಸ್ಪಷ್ಟನುಡಿ

`ಜನರ ಉಳಿತಾಯ ರಕ್ಷಿಸಲೆಂದೇ ಬಿಗಿಕ್ರಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಜೂನ್ 17ರಂದು ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದೆ. ಹಣದುಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ `ಆರ್‌ಬಿಐ' ಮೂಲ ಬಡ್ಡಿದರವನ್ನು ಇನ್ನಷ್ಟು ತಗ್ಗಿಸಬಹುದು ಎಂಬ ಭಾರಿ ನಿರೀಕ್ಷೆಯಲ್ಲಿದೆ ಉದ್ಯಮ ವಲಯ.`ರೆಪೊ' ಬಡ್ಡಿದರ(ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಬಡ್ಡಿದರ) ತಗ್ಗಿದರೆ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಅದರಿಂದ  ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು `ಭಾರತೀಯ ಕೈಗಾರಿಕಾ ಒಕ್ಕೂಟ'(ಸಿಐಐ) ಆಶಾಭಾವ ವ್ಯಕ್ತಪಡಿಸಿದೆ.ಆದರೆ, ಹಣದುಬ್ಬರ ಹಿತಕರ ಮಟ್ಟಕ್ಕೆ ತಗ್ಗುವವ ರೆಗೂ ಬಿಗಿ ಹಣಕಾಸು ನೀತಿಯನ್ನೇ ಮುಂದುವರಿಸುವುದಾಗಿ `ಆರ್‌ಬಿಐ' ಹೇಳಿದೆ.

`ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ' (ಜಿಡಿಪಿ) ಪ್ರಮಾಣ ಕಳೆದ ವರ್ಷದಲ್ಲಿ ದಶಕದ ಹಿಂದಿನ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ `ಆರ್‌ಬಿಐ' ಅನುಸರಿಸುತ್ತಿ ರುವ ಬಿಗಿ ಹಣದುಬ್ಬರ ನಿಯಂತ್ರಣ ನೀತಿ ವಿರುದ್ಧ ಟೀಕೆಗಳು ಕೇಳಿಬಂದಿವೆ.`ಆರ್‌ಬಿಐ' ಗವರ್ನರ್ ಡಿ.ಸುಬ್ಬರಾವ್ ಇತ್ತೀಚೆಗೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.ಸಮತೋಲನಕ್ಕಾಗಿ ಕ್ರಮ

`ಆರ್‌ಬಿಐ ಅನುಸರಿಸುತ್ತಿರುವ ಹಣದುಬ್ಬರ ನಿಯಂತ್ರಣ ನೀತಿ ಕುರಿತು ಜನರಿಂದ ಬಂದಿರುವ ಟೀಕೆಗಳನ್ನು  ಮೆಚ್ಚುಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಆರ್ಥಿಕ ಪ್ರಗತಿ ಮತ್ತು ಹಣದುಬ್ಬರ ನಡುವೆ ಸಮತೋಲನ ಕಾಯ್ದುಕೊಳ್ಳಲು `ಆರ್‌ಬಿಐ' ಈ ಕ್ರಮ ಅನುಸರಿಸುತ್ತಿದೆ ಎಂದು ಜನರು ಅರ್ಥ ಮಾಡಿಕೊಂಡರೆ ಅದನ್ನು ಮೆಚ್ಚುಗೆ ಎಂದು ಪರಿಗಣಿಸಬಹುದು' ಎಂದು ಸುಬ್ಬರಾವ್ ಹೇಳಿದ್ದಾರೆ.ಇನ್ನಷ್ಟು ಕಠಿಣ ನೀತಿ

ಹಣದುಬ್ಬರ ಎರಡಂಕಿ ಮಟ್ಟವನ್ನು ದಾಟಿದರೆ `ಆರ್‌ಬಿಐ' ನಿಯಂತ್ರಣ ವಿಚಾರದಲ್ಲಿ ಯುದ್ಧವನ್ನೇ (ಇನ್ನಷ್ಟು ಕಠಿಣ ನೀತಿ) ಸಾರಬೇಕಾಗುತ್ತದೆ. ಆದರೆ, ಇದರಿಂದ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಜನರು ವಿರೋಧಿಸುತ್ತಾರೆ. ಅಸಲಿಗೆ ಸ್ವಲ್ಪ ಮಟ್ಟಿಗೆ ಆರ್ಥಿಕ ಪ್ರಗತಿಯನ್ನು ತ್ಯಾಗ ಮಾಡದೆ ಹಣದುಬ್ಬರ ವನ್ನು ಹಿತಕರ ಮಟ್ಟಕ್ಕೆ ತಗ್ಗಿಸಲು ಸಾಧ್ಯವಿಲ್ಲ. ಆದರೆ, ಈ ತ್ಯಾಗ ಅಲ್ಪಾವಧಿಗೆ ಮಾತ್ರ. ದೀರ್ಘಾವಧಿಯಲ್ಲಿ ಇದರಿಂದ ಸುಸ್ಥಿರ ಪ್ರಗತಿ ದಾಖಲಿಸಲು ಸಾಧ್ಯ. ಹೂಡಿಕೆದಾರರು ಮತ್ತು ಗ್ರಾಹಕರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.ಕೈಗಾರಿಕಾ ಪ್ರಗತಿಗೆ ಉತ್ತೇಜನ ನೀಡಲು ಬಡ್ಡಿ ದರ ತಗ್ಗಿಸಬೇಕು ಎಂಬ ಬೇಡಿಕೆ ಕಳೆದ ಕೆಲವು ತ್ರೈಮಾಸಿಕ ಗಳಿಂದ ಕೇಳಿಬರುತ್ತಿದೆ. ಆದರೆ, ಬೆಲೆ ಏರಿಕೆ ಬಿಸಿಯಿಂದ ಸಾವಿರಾರು ಬಡಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಹಣದುಬ್ಬರ ಹೆಚ್ಚುವುದೂ ಒಂದೇ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದೂ ಒಂದೇ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.`ಬಡ್ಡಿ ದರ ತಗ್ಗಿಸಬೇಕು ಎಂಬ ಉದ್ಯಮ ವಲಯದ ಜೋರು ಕೂಗಿನ ಜತೆಗೇ ಹಣದುಬ್ಬರ ದಿಂದ ತತ್ತರಿಸಿರುವ ಬಡಜನರ ಕ್ಷೀಣ ದ್ವನಿಯೂ ನಮಗೆ(ಆರ್‌ಬಿಐಗೆ) ಕೇಳಿಸುತ್ತಿದೆ. ಸದ್ಯದ ಸಂದರ್ಭದಲ್ಲಿ ಜನರ  ಉಳಿತಾಯ ಮೊತ್ತವನ್ನು ಹಣದುಬ್ಬರ ದಿಂದ ರಕ್ಷಿಸುವುದು ಬಹಳ ಮುಖ್ಯ ಸಂಗತಿ. ಈ ಹಿನ್ನೆಲೆ ಯಲ್ಲಿ ಹಣದುಬ್ಬರ ಸೂಚ್ಯಂಕ ಆಧರಿಸಿದ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಶೇ 5ರ ಹಿತಕರ ಮಟ್ಟದಲ್ಲಿ ಹಣ ದುಬ್ಬರವನ್ನು ಕಾಯ್ದುಕೊಳ್ಳಲು `ಆರ್‌ಬಿಐ' ಪ್ರಯತ್ನಿಸುತ್ತಿದೆ. ಆದರೆ, `ಚಾಲ್ತಿ ಖಾತೆ ಕೊರತೆ' (ಆಮದು-ರಫ್ತು ವಹಿ ವಾಟಿನಲ್ಲಿನ ಭಾರಿ ಅಂತರ) ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಚಿನ್ನದ ಆಮದು ತಗ್ಗಿಸಿ, ರಫ್ತಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚಿನ ವಿದೇಶಿ ವಿನಿಮಯ ಆಕರ್ಷಿಸಲು ಕ್ರಮ ಕೈಗೊಂಡಿದ್ದೇವೆ ಎಂದರು. ಇತ್ತೀಚೆಗೆ `ಸಿಐಐ' ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 39ರಷ್ಟು ಉದ್ಯಮಿಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6ಕ್ಕಿಂತಲೂ ಕಡಿಮೆ `ಜಿಡಿಪಿ' ದಾಖಲಾಗಲಿದೆ ಎಂದು ಅಂದಾಜು ಮಾಡಿದ್ದಾರೆ. ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಶೇ 7ಕ್ಕೆ ಏರಿಕೆ ಕಾಣಲಿದೆ ಎಂದೂ ಶೇ 40ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.ಕೃಷಿ, ಪರಿಕರ ತಯಾರಿಕೆ ಮತ್ತು ಗಣಿಗಾರಿಕೆ ವಲಯಗಳ ಕಳಪೆ ಸಾಧನೆಯಿಂದಾಗಿ 2012-13ನೇ ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ `ಜಿಡಿಪಿ' ಶೇ 4.8ಕ್ಕೆ ಕುಸಿತ ಕಂಡಿರುವುದನ್ನೂ ಇಲ್ಲಿ ಸ್ಮರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.