ಮಂಗಳವಾರ, ಏಪ್ರಿಲ್ 13, 2021
32 °C
ಸಮಿತಿಯಿಂದ ನಿತಿನ್‌ ಗಡ್ಕರಿಗೆ ಕೊಕ್‌

ಏರ್‌ ಇಂಡಿಯಾ ಮಾರಾಟಕ್ಕೆ ಶಾ ನೇತೃತ್ವದಲ್ಲಿ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ (ಎಐ) ಷೇರು ವಿಕ್ರಯಕ್ಕೆ ಸಂಬಂಧಿಸಿದಂತೆ ಸಚಿವರ ಸಮಿತಿಯನ್ನು ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಪುನರ್‌ರಚಿಸಲಾಗಿದೆ.

‘ಎಐ’ ಮಾರಾಟಕ್ಕೆ ಹೂಡಿಕೆ ಮತ್ತು ಸಾರ್ವಜನಿಕ ಸಂಪತ್ತು ನಿರ್ವಹಣಾ ಇಲಾಖೆಯು ಹೊಸ ಪ್ರಸ್ತಾವ ಸಿದ್ಧಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಂಸ್ಥೆಯಲ್ಲಿನ ತನ್ನೆಲ್ಲ ಪಾಲು ಬಂಡವಾಳವನ್ನು (ಶೇ 100) ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದೆ. ಡಿಸೆಂಬರ್‌ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಂಡಿದೆ.

ಹಳೆ ಸಮಿತಿಯಲ್ಲಿದ್ದ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೈಬಿಡಲಾಗಿದೆ. ‘ಎಐ’ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲಿರುವ ಸಮಿತಿಯು ಈಗ ನಾಲ್ಕು ಮಂದಿ ಸದಸ್ಯರನ್ನು ಹೊಂದಿರಲಿದೆ. ಅಮಿತ್‌ ಶಾ ಅವರಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಮತ್ತು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಸಮಿತಿಯ ಸದಸ್ಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

2017ರ ಜೂನ್‌ನಲ್ಲಿ ಈ ಸಮಿತಿ ರಚನೆಯಾದಾಗ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಧ್ಯಕ್ಷರಾಗಿದ್ದರು. ಐದು ಮಂದಿ ಸದಸ್ಯರಿದ್ದರು. ನರೇಂದ್ರ ಮೋದಿ 2.0 ಸರ್ಕಾರ ಮರಳಿ ಅಧಿಕಾರಕ್ಕೆ ಬಂದ ನಂತರ ಸಮಿತಿಯನ್ನು ಪುನರ್‌ರಚಿಸಲಾಗಿದೆ.

ಪಾಲು ಮಾರಾಟ ಯತ್ನ: ‘ಎಐ’ನಲ್ಲಿನ ತನ್ನ ಶೇ 76ರಷ್ಟು ಪಾಲು ಬಂಡವಾಳವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಹಿಂದಿನ ವರ್ಷವೇ ನಿರ್ಧರಿಸಿತ್ತು.

ನಷ್ಟಪೀಡಿತ ‘ಎಐ’ ಮತ್ತು ಅದರ ಎರಡು ಅಂಗಸಂಸ್ಥೆಗಳಲ್ಲಿನ ಸರ್ಕಾರದ ಪಾಲನ್ನು ಮಾರಾಟ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿತ್ತು. ಪಾಲು ಬಂಡವಾಳ ಮಾರಾಟದ ಜತೆಗೆ ಆಡಳಿತ ನಿಯಂತ್ರಣವನ್ನು ವರ್ಗಾಯಿಸಲೂ ಸರ್ಕಾರ ನಿರ್ಧರಿಸಿತ್ತು. ಈ ಪಾಲು ಮಾರಾಟ ಪ್ರಕ್ರಿಯೆಯು ಏರ್‌ ಇಂಡಿಯಾ, ಅಗ್ಗದ ವಿಮಾನ ಯಾನ ಅಂಗ ಸಂಸ್ಥೆಯಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಏರ್‌ ಇಂಡಿಯಾ ಎಸ್‌ಎಟಿಎಸ್‌ ಏರ್‌ಪೋರ್ಟ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಅನ್ನು ಒಳಗೊಂಡಿತ್ತು.

₹50 ಸಾವಿರ ಕೋಟಿಗಳಷ್ಟು ಸಾಲದ ಹೊರೆಗೆ ಸಿಲುಕಿರುವ ಏರ್‌ ಇಂಡಿಯಾದ ಷೇರು ವಿಕ್ರಯಕ್ಕೆ ಕೇಂದ್ರ ಸಚಿವ ಸಂಪುಟವು 2017ರ ಜೂನ್‌ನಲ್ಲಿ ಸಮ್ಮತಿ ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು