ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2024 | ಹೆಚ್ಚಿನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಲವು

Published 1 ಫೆಬ್ರುವರಿ 2024, 15:52 IST
Last Updated 1 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ 2024–25ರ ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಿದರು.

ಈ ಉದ್ದೇಶಕ್ಕಾಗಿ ಸಮಿತಿಯನ್ನು ರಚಿಸಲಾಗುವುದು. ಅದು ಈ ಕುರಿತು ಇರುವ ಸಮಸ್ಯೆಗಳನ್ನು ಪರಿಶೀಲಿಸಿ, ಸೂಕ್ತ ಶಿಫಾರಸುಗಳನ್ನು ಮಾಡುತ್ತದೆ ಎಂದರು.

ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, 2014ರಿಂದ ಈಚೆಗೆ ದೇಶದಲ್ಲಿ 7 ಐಐಟಿಗಳು, 16 ಐಐಐಟಿಗಳೂ, 7 ಐಐಎಂಗಳು, 15 ಏಮ್ಸ್‌ ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ ಎಂದರು.

‘ಕೌಶಲ ಭಾರತ್‌ ಮಿಷನ್‌’ ಅಡಿಯಲ್ಲಿ 1.4 ಕೋಟಿ ಯುವ ಜನರು ತರಬೇತಿ ನೀಡಲಾಗಿದೆ. ಅಲ್ಲದೆ 54 ಲಕ್ಷ ಯುವ ಜನರಿಗೆ ಕೌಶಲವೃದ್ಧಿ ಮತ್ತು ಪುನರ್‌ ಕೌಶಲ ತರಬೇತಿ ಪಡೆದಿದ್ದಾರೆ. ಅಲ್ಲದೆ 3,000 ಹೊಸ ಐಟಿಐಗಳನ್ನೂ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಗರ್ಭಕಂಠ ಕ್ಯಾನ್ಸರ್‌ ಲಸಿಕೆಗೆ ಪ್ರೋತ್ಸಾಹ

‘ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9–14 ವರ್ಷದ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಪ್ರೋತ್ಸಾಹಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಇತ್ತೀಚಿನ ಕೆಲ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು 80 ಸಾವಿರ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, 35 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ.

ಗರ್ಭಕಂಠ ಕ್ಯಾನ್ಸರ್‌ಗೆ ಸೀರಂ ಇನ್‌ಸ್ಟಿಟ್ಯೂಟ್‌ ತಯಾರಿಸಿರುವ ‘ಸರ್ವಾವ್ಯಾಕ್’ ಲಸಿಕೆಯು ಮಾರುಕಟ್ಟೆಯಲ್ಲಿ ಸದ್ಯ ದೊರೆಯುತ್ತಿದೆ. ಇದರ ಪ್ರತಿ ಡೋಸ್‌ಗೆ ಸುಮಾರು
₹ 2,000 ನಿಗದಿ ಮಾಡಲಾಗಿದೆ. ಅಮೆರಿಕದ ಎಂಎಸ್‌ಡಿ ಫಾರ್ಮಾಸುಟಿಕಲ್‌ ಕಂಪನಿಯ ಎಚ್‌ಪಿವಿ ಲಸಿಕೆಯೂ ಲಭ್ಯವಿದ್ದು, ಅದರ ಪ್ರತಿ ಡೋಸ್‌ಗೆ ₹ 3,927 ನಿಗದಿಯಾಗಿದೆ.

‘9ರಿಂದ 14 ವರ್ಷದ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆ ಹಾಕುವ ಸರ್ಕಾರದ ಘೋಷಣೆ ಶ್ಲಾಘನೀಯ. ಗರ್ಭಕಂಠ ಕ್ಯಾನ್ಸರ್‌ ತಡೆ ಮತ್ತು ಲಸಿಕೆ ಬಳಕೆಗೆ ಸಂಬಂಧಿಸಿದಂತೆ ನಾವೆಲ್ಲ ಪ್ರತಿಜ್ಞೆ ಮಾಡಬೇಕಿದೆ’ ಎಂದು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಆದಾರ್‌ ‍ಪೂನಾವಾಲಾ ಪ್ರತಿಕ್ರಿಯಿಸಿದ್ದಾರೆ. 

‘ಆಯುಷ್ಮಾನ್‌ ಭಾರತ್‌’ ವಿಸ್ತರಣೆ

ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯಡಿ ಆರೋಗ್ಯ ರಕ್ಷಣೆಯನ್ನು ಎಲ್ಲ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ವಿಸ್ತರಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು.

ಆಯುಷ್ಮಾನ್‌ ಭಾರತ್– ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ವಿಶ್ವದಲ್ಲಿಯೇ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾಗಿದ್ದು, ದೇಶದ 12 ಕೋಟಿ ಕುಟುಂಬಗಳು ಇದರ ವ್ಯಾಪ್ತಿಯಲ್ಲಿವೆ. ಈ ಯೋಜನೆಯಡಿ ಪ್ರತಿ ಕುಟುಂಬವು ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.

ಮಧ್ಯಂತರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ (ಪಿಎಂಜೆಎವೈ) ಹಂಚಿಕೆಯನ್ನು ₹6,800 ಕೋಟಿಯಿಂದ ₹7,500 ಕೋಟಿಗೆ ಹೆಚ್ಚಿಸಲಾಗಿದೆ.

ಸಮಗ್ರ ಕಾರ್ಯಕ್ರಮ

ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಒಂದು ಸಮಗ್ರ ಕಾರ್ಯಕ್ರಮದಡಿ ತರಲಾಗುವುದು. ಲಸಿಕಾ ಕಾರ್ಯಕ್ರಮಗಳನ್ನು ನಿರ್ವಹಿಸಲು ಹೊಸದಾಗಿ ವಿನ್ಯಾಸ ಮಾಡಲಾಗಿರುವ ‘ಯು–ವಿನ್‌’ ವೇದಿಕೆ ಮೂಲಕ ಇಂದ್ರಧನುಷ್‌ ಯೋಜನೆಯ ವೇಗವನ್ನು ದೇಶದಾದ್ಯಂತ ಹೆಚ್ಚಿಸಲಾಗುವುದು.

‘ಸಕ್ಷಮ್‌ ಅಂಗನವಾಡಿ’ ಮತ್ತು ‘ಪೋಷಣ್‌ 2.0’ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಸುಧಾರಿತ ಪೌಷ್ಠಿಕ ಆಹಾರ ವಿತರಣೆ, ಮಕ್ಕಳ ಬಾಲ್ಯದ ಆರೈಕೆ ಕಾರ್ಯವನ್ನು ಸುಧಾರಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT