ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ | ಆಯ್ದ ಗ್ರಾಮಗಳಿಗೆ ‘ಹೊಂಬೆಳಕು’: ಹಳ್ಳಿಗಳಿಗೆ ಪ್ರಗತಿ ಪಥ, ಕಲ್ಯಾಣ ಪಥ

Published 16 ಫೆಬ್ರುವರಿ 2024, 23:31 IST
Last Updated 16 ಫೆಬ್ರುವರಿ 2024, 23:31 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಹೊಸ ‘ಪಥ’ ಯೋಜನೆ, ಪಂಚಾಯ್ತಿಗಳ ‘ಅರಿವು’ ಕೇಂದ್ರಗಳ ಬಲವರ್ಧನೆ, ‘ಸೌರದೀಪ’ಗಳೊಂದಿಗೆ ಆಯ್ದ ಗ್ರಾಮಗಳಿಗೆ ‘ಹೊಂಬೆಳಕು’, ಮಹಿಳೆಯರ ಕೌಶಲ ಅಭಿವೃದ್ಧಿಗಾಗಿ ತರಬೇತಿ, ಹಿರಿಯ ನಾಗರಿಕರ ಆರೈಕೆಗಾಗಿ ಕೇಂದ್ರಗಳ ಆರಂಭ…

ಈ ಎಲ್ಲ ಯೋಜನೆಗಳೂ ರಾಜ್ಯದ ಆಯ್ದ ಗ್ರಾಮಗಳಲ್ಲಿ ‘ಪೈಲಟ್‌’ ಆಧಾರದಲ್ಲಿ ಅನುಷ್ಠಾನಗೊಳ್ಳಲಿವೆ.

ಗ್ರಾಮಗಳ ರಸ್ತೆ ಅಭಿವೃದ್ಧಿಗೆ ‘ಪ್ರಗತಿ ಪಥ’ ಮತ್ತು ‘ಕಲ್ಯಾಣ ಪಥ’ ಎಂಬ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ಬಾಹ್ಯ ನೆರವಿನೊಂದಿಗೆ ಅನುಷ್ಠಾನಗೊಳ್ಳುವ ‘ಪ್ರಗತಿಪಥ’ ಯೋಜನೆಯಡಿ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 50 ಕಿ.ಮೀ. ಉದ್ದದ ರಸ್ತೆಗಳಂತೆ, ಒಟ್ಟಾರೆ 9,450 ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲ ₹5,200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. 

‘ಕಲ್ಯಾಣ ಪಥ’ ಯೋಜನೆಯಡಿ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಮಾದರಿಯಲ್ಲಿ 1,150 ಕಿ.ಮೀ. ರಸ್ತೆಗಳನ್ನು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಗ್ರಾಮ ಪಂಚಾಯ್ತಿಗಳಲ್ಲಿರುವ ‘ಅರಿವು’ ಕೇಂದ್ರಗಳಿಗೆ ₹132 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮತ್ತು ಪುಸ್ತಕಗಳು, ಡಿಜಿಟಲ್‌ ಉಪಕರಣಗಳು ಹಾಗೂ ಅಂಗವಿಕಲ ಸ್ನೇಹಿ ಉಪಕರಣಗಳ ಪೂರೈಕೆ ಮಾಡಲಾಗುತ್ತದೆ.

ನರೇಗಾ ಯೋಜನೆ ಅನುಷ್ಠಾನಕ್ಕೆ 16 ಕೋಟಿ ಮಾನವ ದಿನಗಳ ಸೃಜನೆ, 30 ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಜಲಾನಯನ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ 5,000 ಎಕರೆ ಸವಳು-ಜವಳು ಭೂಮಿ ಸುಧಾರಿಸುವುದು, ಪ್ರತಿ ತಾಲ್ಲೂಕಿಗೆ ಕನಿಷ್ಠ 2ರಂತೆ ಬೂದು ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.

ಬೀದಿ ದೀಪಗಳ ಮೀಟರಿಂಗ್‌: ವಿದ್ಯುತ್ ಬಳಕೆಯ ಮೇಲೆ ನಿಗಾವಹಿಸಲು, 50 ಗ್ರಾಮ ಪಂಚಾಯಿತಿಗಳಲ್ಲಿ ‘ಹೊಂಬೆಳಕು’ ಕಾರ್ಯಕ್ರಮದಡಿ ₹25 ಕೋಟಿ ವೆಚ್ಚದಲ್ಲಿ ಸೋಲಾರ್ ದೀಪಗಳ ಅಳವಡಿಸುವ ಜೊತೆಗೆ, 200 ಪಂಚಾಯಿತಿಗಳಲ್ಲಿ ಬೀದಿ ದೀಪಗಳ ವ್ಯವಸ್ಥಿತ ಮೀಟರಿಂಗ್ ವ್ಯವಸ್ಥೆ ಅಳವಡಿಕೆಗೆ ಕ್ರಮಗೊಳ್ಳಲಾಗುತ್ತಿದೆ. 

ಗ್ರಾಮ ಪಂಚಾಯ್ತಿ ಹಳ್ಳಿಗಳಲ್ಲಿರುವ ಹಿರಿಯ ನಾಗರಿಕರ ಆರೈಕೆ ಬಗ್ಗೆಯೂ ಗಮನ, 100 ಗ್ರಾಮ ಪಂಚಾಯ್ತಿಗಳ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಹಿರಿಯ ನಾಗರಿಕರ ಆರೈಕೆ ಮತ್ತು ಚಿಕಿತ್ಸೆಗಾಗಿ ‘ಆರೈಕೆ–ಉಪಶಮನ’ ಕೇಂದ್ರ ಆರಂಭಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT