ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2024 | ಸಾಮರಸ್ಯದ ತಾಣವಾಗಿ ಜ್ಞಾನದೇಗುಲ

‘ನಾವು ಮನುಜರು’ ಜಾರಿ: ವಾರಕ್ಕೆ 2 ಗಂಟೆ ‘ಸಹಿಷ್ಣುತೆ ಬೋಧನೆ’
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೋಮು ಮನೋಭಾವ, ಶಾಲಾ–ಕಾಲೇಜುಗಳಲ್ಲಿ ಮೂಡುತ್ತಿರುವ ಅಸಹಿಷ್ಣುತೆಯ ವಾತಾವರಣ ಶಮನಕ್ಕೆ ದೃಢ ನಿರ್ಧಾರ ಮಾಡಿರುವ ಸರ್ಕಾರ, ರಾಜ್ಯದ ಜ್ಞಾನದೇಗುಲ
ಗಳನ್ನು ಸಾಮರಸ್ಯದ ತಾಣವಾಗಿಸುವತ್ತ ಮಹತ್ವದ ಹೆಜ್ಜೆಇಟ್ಟಿದೆ.

ಎಲ್ಲ ಶಿಕ್ಷಣ ಸಂಸ್ಥೆಗಳನ್ನೂ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಹಾಗೂ ಸಹ ಬಾಳ್ವೆಯ ಕೇಂದ್ರಗಳಾಗಿ ರೂಪಿಸಲು ‘ನಾವು ಮನುಜರು’ ಎಂಬ ಕಾರ್ಯಕ್ರಮ ರೂಪಿಸಿದೆ. ಎಲ್ಲ ಶಾಲಾ–ಕಾಲೇಜುಗಳಲ್ಲೂ ಸಂವಿಧಾನ, ಸಾಮರಸ್ಯ, ಸಹಿಷ್ಣುತೆ ವಿಚಾರಗಳ ಕುರಿತು ತರಗತಿಗಳಲ್ಲಿಯೇ ವಾರಕ್ಕೆ ಎರಡು ಗಂಟೆ ವಿಚಾರ, ವಿಮರ್ಶೆ ಮತ್ತು ಸಂವಾದ ಚಟುವಟಿಕೆಯನ್ನು ನಡೆಸಲಾಗುತ್ತದೆ.

‘ಮಕ್ಕಳಿಗೆ ರಾಷ್ಟ್ರ ಧರ್ಮ ಯಾವುದು ಎಂದು ಕೇಳಿದರೆ, ಭಾವೈಕ್ಯ, ಸಾಮರಸ್ಯ, ಪ್ರಜಾಪ್ರಭುತ್ವ ಎನ್ನಬೇಕು. ಸಂವಿಧಾನವೇ ನಮ್ಮ ರಾಷ್ಟ್ರ ಗ್ರಂಥ ಎಂದು ಮನವರಿಕೆ ಮಾಡಿಕೊಡಬೇಕು’ ಎನ್ನುವ ಇಬ್ರಾಹಿಂ ಸುತಾರ ಅವರ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. 

ವಿಧಾನಸಭೆ ಚುನಾವಣೆಗೂ ಮೊದಲು ಉಡುಪಿಯಲ್ಲಿ ಆರಂಭವಾಗಿದ್ದ ಹಿಜಾಬ್‌ ವಿವಾದ ರಾಜ್ಯದ ಇತರೆಡೆಗೂ ಹಬ್ಬಿತ್ತು. ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವುದನ್ನು ವಿರೋಧಿಸಿ ಮತ್ತೊಂದು ಹಿಂದೂ ಧರ್ಮದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಈ ವಿವಾದವನ್ನು ಬಳಸಿಕೊಂಡ ಕೆಲ ಸಂಘಟನೆಗಳು ವಿದ್ಯಾರ್ಥಿಗಳಿಗೆ ಉಚಿತ ಶಾಲು ಹಂಚಿದ್ದರು. ಇದು ಎರಡು ಧರ್ಮದ ವಿದ್ಯಾರ್ಥಿಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ತಂದಿತ್ತು. ಚುನಾವಣೆಯ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಪಕ್ಷವು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸಾಮರಸ್ಯದ ಪರಿಕಲ್ಪನೆ ಮೂಡಿಸಲು ಮುಂದಾಗಿದೆ. ಅದರ ಭಾಗವಾಗಿಯೇ ಬಜೆಟ್‌ನಲ್ಲೇ ಹಲವು ಕ್ರಮಗಳನ್ನು ಘೋಷಿಸಿದೆ.

ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡರೆ ಸಾಮಾಜಿಕ ಸಾಮರಸ್ಯ ಸಹಜವಾಗಿ ಅರಳುತ್ತದೆ ಎಂಬುದಕ್ಕೆ ಒತ್ತು ನೀಡಿ ಈಗಾಗಲೇ ಶಾಲಾ–ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದಿಗೆ ಆದೇಶಿಸಲಾಗಿದೆ. ಸನಾತನ ಶಿಕ್ಷಣದ ಪರಿಕಲ್ಪನೆಯಿದೆ ಎಂಬ ಕಾರಣಕ್ಕೆ ಎನ್ಇಪಿ ಬದಲಿಸಲು ರಾಜ್ಯ ಶಿಕ್ಷಣ ನೀತಿ ಆಯೋಗ ರಚಿಸಿತ್ತು. ವರದಿ ಸಲ್ಲಿಕೆಯಾದ ತಕ್ಷಣ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತದೆ. ಈ ನೀತಿ ರಾಜ್ಯದ ಅಸ್ಮಿತೆ, ಸಂಸ್ಕೃತಿಗೆ ಅನು ಗುಣವಾಗಿ ಇರಲಿದೆ ಎಂದು ಸರ್ಕಾರ ಬಜೆಟ್‌ನಲ್ಲಿ ಸುಳಿವು ನೀಡಿದೆ.

ಓದಿನಲ್ಲಿ ಹಿಂದುಳಿದವರಿಗೆ ‘ಮರು ಸಿಂಚನ’:

ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಗೂ ಆದ್ಯತೆ ನೀಡಿರುವುದು ಬಜೆಟ್‌ನಲ್ಲಿನ ಮಹತ್ವದ ಅಂಶ. 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚಿಸಲು ರೂಪಿಸಿರುವ ‘ಮರು ಸಿಂಚನ’ ಕಾರ್ಯಕ್ರಮಕ್ಕೆ ₹ 10 ಕೋಟಿ ನೀಡಲಾಗಿದೆ.

ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ಹೆಚ್ಚಿನ ಫಲಿತಾಂಶ ಪಡೆದೆವು ಎಂದು ಬೀಗುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ‘ಫಲಿತಾಂಶ’ದಲ್ಲಿ ಪೈಪೋಟಿಯನ್ನು ನೀಡಲು ಈ ಕಾರ್ಯಕ್ರಮವು ನೆರವಾಗಲಿದೆ.

3 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಸಕ್ತಿಯನ್ನು ಮೂಡಿಸಲು ‘ಗಣಿತ–ಗಣಕ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿನ 20 ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್‌, ಸಿಇಟಿ, ಜೆಇಇ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ತರಬೇತಿ ಕಾರ್ಯಕ್ರಮಗಳ ಆಯೋಜನೆಗಾಗಿ ₹ 10 ಕೋಟಿ ಮೀಸಲಿಡಲಾಗಿದೆ. ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಮೂಲಸೌಕರ್ಯವನ್ನು ಕಲ್ಪಿಸಲು ₹ 850 ಕೋಟಿ ಘೋಷಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ₹ 600 ಕೋಟಿ ನೀಡಲಾಗಿತ್ತು. ಯುವಜನರಿಗೆ ರಾಜ್ಯ ಬಜೆಟ್‌ನಲ್ಲಿ ಮಹತ್ವದ ಪ್ರೋತ್ಸಾಹದಾಯಕ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಆದರೆ, ‘ಯುವನಿಧಿ’ ಯೋಜನೆಯ ಮೂಲಕ ನಿರುದ್ಯೋಗಿ ಯುವಜನರಿಗೆ ‘ಗ್ಯಾರಂಟಿ’ ನೆರವು ಒದಗಿಸಲಾಗಿದೆ. 

ಶಾಲೆ–ಕಾಲೇಜು ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ

ಬಜೆಟ್‌ನಲ್ಲಿ ಹೊಸ ಶಾಲೆ, ಕಾಲೇಜುಗಳ ಸ್ಥಾಪನೆ ಕುರಿತ ಉಲ್ಲೇಖವಿಲ್ಲ. ಪೂರ್ವ ಪ್ರಾಥಮಿಕದಿಂದ ಕಾಲೇಜು ಹಂತದವರೆಗೂ ಒಂದೇ ಸೂರಿನಡಿ ಶಿಕ್ಷಣ ನೀಡಲು ಚಿಂತಿಸಿದ್ದರೂ, ಅಭಿವೃದ್ಧಿಗಾಗಿ ಕಾರ್ಪೋರೇಟ್‌ ಕಂಪನಿಗಳು ನೀಡುವ ಸಿಎಸ್‌ಆರ್‌ ನಿಧಿ, ಖಾಸಗಿ ಸಹಭಾಗಿತ್ವ ನೆಚ್ಚಿಕೊಳ್ಳಲಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಸಿಎಸ್‌ಆರ್‌ ನಿಧಿಯತ್ತ ಚಿತ್ತ ಹರಿಸಲಾಗಿದೆ. ಹಳೇ ವಿದ್ಯಾರ್ಥಿಗಳನ್ನು ಬಳಸಿ ಕೊಳ್ಳಲು ‘ಬೇರಿ–ಚಿಗುರು’ ಕಾರ್ಯಕ್ರಮ ರೂಪಿಸಲಾಗಿದೆ. ಐಐಟಿ ಮಾದರಿಯಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ₹500 ಕೋಟಿ ಘೋಷಿಸಿದ್ದರೂ, ಸರ್ಕಾರ ನೀಡುತ್ತಿರುವುದು ₹100 ಕೋಟಿ ಮಾತ್ರ. ಉಳಿದ ಅನುದಾನಕ್ಕೆ ಸಿಎಸ್‌ಆರ್‌ ನಿಧಿ, ಹಳೇ ವಿದ್ಯಾರ್ಥಿಗಳ ಮೂಲಕ ಹಣ ಸಂಗ್ರಹಿಸಲು ನಿರ್ಧರಿಸಿದೆ.

ವೈದ್ಯಕೀಯ, ಉನ್ನತ, ಶಾಲಾ ಶಿಕ್ಷಣ

*ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆ ತರಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಿಸಲಾಗುವುದು

*74 ಆದರ್ಶ ವಿದ್ಯಾಲಯಗಳಲ್ಲಿ ಪದವಿ ಪೂರ್ವ ಕಾಲೇಜು ಆರಂಭ

*ಪದವಿಪೂರ್ವ ಕಾಲೇಜುಗಳಲ್ಲಿ ಗಣಕ ವಿಜ್ಞಾನಕ್ಕೆ, ವಿಜ್ಞಾನ ಪ್ರಯೋಗಾಲಯಕ್ಕೆ ತಲಾ ₹10 ಕೋಟಿ

*ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಿಗೆ ₹120 ಕೋಟಿ‌

*ಅಧ್ಯಾಪಕರು, ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್‌ ಪಡೆದುಕೊಳ್ಳಲು ನೆರವಾಗಲು ₹10 ಕೋಟಿ

*ಮೈಸೂರು ಮಹಾರಾಣಿ ಕಾಲೇಜು ಕಟ್ಟಡಕ್ಕೆ ₹54 ಕೋಟಿ, ಹಾಸ್ಟೆಲ್‌ ಕಟ್ಟಡಕ್ಕೆ ₹116 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT