ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೂ ಒತ್ತು: ಮೈಸೂರು ಜಿಲ್ಲೆಗೆ ಹಲವು ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ

Published 17 ಫೆಬ್ರುವರಿ 2024, 6:45 IST
Last Updated 17 ಫೆಬ್ರುವರಿ 2024, 6:45 IST
ಅಕ್ಷರ ಗಾತ್ರ

ಮೈಸೂರು: ಪಾರಂಪರಿಕ ಕಟ್ಟಡಗಳ ನವೀಕರಣ, ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, ವಿಮಾನ ನಿಲ್ದಾಣ ಹಾಗೂ ಕಾಲುವೆಗಳ ಅಭಿವೃದ್ಧಿ, ಆಸ್ಪತ್ರೆಗಳಿಗೂ ಅನುದಾನ...

–ಇದು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ದೊರೆಕಿರುವ ಪ್ರಮುಖ ಯೋಜನೆಗಳ ಚುಟುಕು. ಗ್ಯಾರಂಟಿ ಯೋಜನೆಗಳ ಭಾರದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್‌ನಲ್ಲಿ ತವರು ಜಿಲ್ಲೆಯಾದ ಮೈಸೂರಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಈಗಾಗಲೇ ಘೋಷಿಸಿದ್ದ ಯೋಜನೆಗಳಿಗೂ ಬಜೆಟ್‌ನಲ್ಲಿ ಅಧಿಕೃತ ಒಪ್ಪಿಗೆಯ ಮುದ್ರೆ ಒತ್ತಿ ಅನುದಾನವನ್ನೂ ತೆಗೆದಿರಿಸಿದ್ದಾರೆ.

ಮಹಾರಾಜರ ಕಾಲದಲ್ಲಿ ಸ್ಥಾಪನೆಯಾಗಿರುವ ಕೆ.ಆರ್. ಆಸ್ಪತ್ರೆಯು ಈ ಭಾಗದ ಬಡವರ ಪಾಲಿನ ಆರೋಗ್ಯ ಸಂಜೀವಿನಿಯಾಗಿದ್ದು, ಇಲ್ಲಿ ಹೊರರೋಗಿಗಳ ವಿಭಾಗದ ಹೊಸ ಕಟ್ಟಡ ನಿರ್ಮಾಣಕ್ಕೆ ₹75 ಕೋಟಿ ಅನುದಾನ ಘೋಷಿಸಲಾಗಿದೆ. ಮೈಸೂರು ಮೆಡಿಕಲ್‌ ಕಾಲೇಜು ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಕೊಡುಗೆ ನೀಡಿದ್ದಾರೆ. ಕೆ.ಆರ್‌. ಆಸ್ಪತ್ರೆಯಲ್ಲಿ ಈಗಾಗಲೇ ₹89 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

ನಗರದ ನೆಫ್ರೊ– ನ್ಯುರಾಲಜಿ ಆಸ್ಪತ್ರೆ ಸಾಮರ್ಥ್ಯವನ್ನು 40ರಿಂದ 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವುದಾಗಿ ಸರ್ಕಾರ ಘೋಷಿಸಿದೆ. ಕ್ರಿಟಿಕಲ್‌ ಕೇರ್‌ ಘಟಕ ಸ್ಥಾಪನೆಯೂ ಆಗಲಿದೆ. ಇದರಿಂದ ಜಿಲ್ಲೆ–ಹೊರ ಜಿಲ್ಲೆಗಳ ಬಡ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಮಕ್ಕಳ ಪೋಷಣೆಗೆ ಪೂರಕವಾಗಿ ಮಾನವ ಹಾಲಿನ ಬ್ಯಾಂಕ್‌ ಸ್ಥಾಪಿಸುವ ನಿರ್ಧಾರವನ್ನೂ ಪ್ರಕಟಿಸಿದೆ.

ಸೇತುವೆಗಳು: ನಗರ ಹಾಗೂ ಹೊರವಲಯದಲ್ಲಿ ಮೂರು ಸೇತುವೆಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದು, ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗಲಿದೆ.

ಬೆಂಗಳೂರು–ಮೈಸೂರು ಹೆದ್ದಾರಿಯ ಮಣಿಪಾಲ್ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಫ್ಲೈಓವರ್ ನಿರ್ಮಿಸುವುದಾಗಿ ಘೋಷಣೆಯಾಗಿದೆ. ಎರಡು ನಗರಗಳ ನಡುವೆ ಈಚೆಗಷ್ಟೇ ದಶಪಥಗಳ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಆಗಲೇ ಫ್ಲೈ ಓವರ್‌ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಯೋಜಿಸಿತ್ತು. ಆದರೆ ವೆಚ್ಚ ಹೆಚ್ಚಾದ ಕಾರಣಕ್ಕೆ ಕೈ ಬಿಟ್ಟಿತ್ತು. ಇದೀಗ ಯೋಜನೆ ಮತ್ತೆ ಸಾಕಾರಗೊಳ್ಳಲಿದೆ.

ಕುಕ್ಕರಹಳ್ಳಿ ಕೆರೆ ಜಂಕ್ಷನ್ ಹಾಗೂ ಕೆಆರ್‌ಎಸ್‌ ರಸ್ತೆಯಲ್ಲಿ ಮೇಟಗಳ್ಳಿ ಬಳಿ ಸುಗಮ ಸಂಚಾರಕ್ಕಾಗಿ ರೈಲ್ವೆ ಸೇತುವೆಗಳ ನಿರ್ಮಾಣ– ಈ ಎರಡೂ ಯೋಜನೆಗಳು ಚರ್ಚೆಯಲ್ಲಿದ್ದು, ಸಂಸದ ಪ್ರತಾಪ್‌ ಸಿಂಹ, ಕೇಂದ್ರದ ಸಹಯೋಗದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿರುವುದಾಗಿ ಹೇಳಿದ್ದರು.

ಪಾರಂಪರಿಕ ಕಟ್ಟಡಗಳ ನವೀಕರಣ: ನಗರದ ಪರಂಪರೆಯ ಹೆಗ್ಗುರುತುಗಳಾದ ಲ್ಯಾನ್ಸ್‌ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡಗಳ ಮೂಲಸ್ವರೂಪ ಉಳಿಸಿಕೊಂಡೇ ನವೀಕರಿಸುವ ಘೋಷಣೆಯಾಗಿದೆ. ಮೈಸೂರಿನಲ್ಲಿರುವ ನೂರಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂಬ ಸಾರ್ವಜನಿಕರ ಆಗ್ರಹಕ್ಕೆ ಪೂರಕವಾಗಿ ಪ್ರಕಟಣೆ ಹೊರಬಿದ್ದಿದೆ.

ಲ್ಯಾನ್ಸ್‌ಡೌನ್‌ ಕಟ್ಟಡ ಭಾಗಶಃ ಕುಸಿದಿದ್ದು, ವ್ಯಾಪಾರ–ವಹಿವಾಟು ಸ್ಥಗಿತಗೊಂಡಿದೆ. ದೇವರಾಜ ಮಾರುಕಟ್ಟೆಯ ಒಂದು ಭಾಗವೂ ಕುಸಿದಿತ್ತು. ಹೀಗಾಗಿ ಎರಡೂ ಕಟ್ಟಡಗಳನ್ನು ಕೆಡವಿ ನಿರ್ಮಿಸಬೇಕೆಂಬ ಆಗ್ರಹವೂ ಕೇಳಿಬಂದಿತ್ತು. ಆದರೆ, ಸಾಂಪ್ರದಾಯಿಕ ಶೈಲಿಯನ್ನೇ ಉಳಿಸಿಕೊಂಡು ನವೀಕರಣಕ್ಕೆ ಸರ್ಕಾರ ಆಸಕ್ತಿ ತೋರಿದ್ದು, ಅದರ ಯೋಜನಾ ವರದಿ ಹಾಗೂ ವೆಚ್ಚದ ರೂಪುರೇಷೆಗಳು ಸಿದ್ಧವಾಗಬೇಕಿದೆ.

ಕಾಲೇಜಿಗೆ ಅನುದಾನ: ಮಹಾರಾಣಿ ವಿಜ್ಞಾನ ಕಾಲೇಜಿಗೆ ಅವಶ್ಯವಾದ ಹೊಸ ಕಟ್ಟಡ ನಿರ್ಮಾಣಕ್ಕೆ ₹54 ಕೋಟಿ ಘೋಷಣೆಯಾಗಿದೆ. ಎರಡು ವರ್ಷದ ಹಿಂದೆಯೇ ಕಾಲೇಜಿನ ಹಳೇ ಕಟ್ಟಡ ಭಾಗಶಃ ಕುಸಿದಿದ್ದು, ವಿದ್ಯಾರ್ಥಿನಿಯರಿಗೆ ತೊಂದರೆಯಾಗಿತ್ತು. ನಂತರ ಶಿಕ್ಷಣ ಸಚಿವರೂ ಭೇಟಿ ನೀಡಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು.

ಜೊತೆಗೆ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ₹116 ಕೋಟಿ ಅನುದಾನ ದೊರಕಿದೆ. ಹೊರ ಜಿಲ್ಲೆಗಳಿಂದಲೂ ನೂರಾರು ವಿದ್ಯಾರ್ಥಿನಿಯರು ಬರುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಕನಸಿಗೆ ವಿದ್ಯಾರ್ಥಿನಿಲಯ ಪೂರಕವಾಗಲಿದೆ.

ಶೀತಲೀಕರಣ ಘಟಕ: ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ₹40 ಕೋಟಿ ವೆಚ್ಚದಲ್ಲಿ ಶೀತಲೀಕರಣ ಘಟಕ ನಿರ್ಮಾಣವಾಗುವುದರಿಂದ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಅನುಕೂಲವಾಗಲಿದ್ದು, ಉತ್ತಮ ಬೆಲೆ ಬಂದ ಸಂದರ್ಭ ಮಾರಾಟದಿಂದ ರೈತರು ಲಾಭ ಪಡೆಯಲು ಸಾಧ್ಯವಾಗಲಿದೆ. ಎಪಿಎಂಸಿ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜೈವಿಕ ಇಂಧನ ಘಟಕ ತಲೆ ಎತ್ತಲಿದೆ. ಮಾರುಕಟ್ಟೆ ಆವರಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆ ಇದು.

ವಿಮಾನ ನಿಲ್ದಾಣಕ್ಕೆ ಅನುದಾನ: ಮೈಸೂರಿನ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಅದಕ್ಕಾಗಿ ₹126 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಬಾಕಿ ₹43 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ತಾರಾಲಯ: ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ತಾರಾಲಯಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಇರುವ ಮೈಸೂರು ವಿಶ್ವವಿದ್ಯಾಲಯದ ಒಡೆಯರ್‌ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ₹81 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಗುಮ್ಮಟ ಮಾದರಿಯ ತಾರಾಲಯ ನಿರ್ಮಾಣಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈಚೆಗೆ ಭೂಮಿಪೂಜೆ ನೆರವೇರಿಸಿದ್ದು, ಸಂಸದರ ನಿಧಿಯಿಂದ ₹5 ಕೋಟಿ ಅನುದಾನವನ್ನೂ ನೀಡಿದ್ದರು. ಫ್ರಾನ್ಸ್, ಜಪಾನ್ ಸಂಸ್ಥೆಗಳ ಸಹಯೋಗದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಸರ್ಕಾರ ನೆರವು ನೀಡಲಿದೆಯೇ ಇಲ್ಲವೇ ಪ್ರತ್ಯೇಕ ತಾರಾಲಯ ನಿರ್ಮಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮೈಸೂರಿನ ಕೆ.ಆರ್. ಆಸ್ಪತ್ರೆ
ಮೈಸೂರಿನ ಕೆ.ಆರ್. ಆಸ್ಪತ್ರೆ
ಮೈಸೂರಿನ ಕೆ.ಆರ್. ಆಸ್ಪತ್ರೆ
ಮೈಸೂರಿನ ಕೆ.ಆರ್. ಆಸ್ಪತ್ರೆ
  • ನೆಫ್ರೊ– ನ್ಯುರಾಲಜಿ ಆಸ್ಪತ್ರೆ ಸಾಮರ್ಥ್ಯ 40ರಿಂದ 100 ಹಾಸಿಗೆಗೆ ಮೇಲ್ದರ್ಜೆಗೆ

  • ಕೆ.ಆರ್‌. ಆಸ್ಪತ್ರೆಯಲ್ಲಿ ₹75 ಕೋಟಿ ವೆಚ್ಚದಲ್ಲಿ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ

  • ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆlಮಾನವ ಹಾಲಿನ ಬ್ಯಾಂಕ್‌ ಸ್ಥಾಪನೆlಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡಕ್ಕೆ ₹54 ಕೋಟಿ

  • ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ 116 ಕೋಟಿ

  • ಲ್ಯಾನ್ಸ್‌ಡೌನ್‌ ಹಾಗೂ ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡಗಳ ನವೀಕರಣ

  • ಬೆಂ–ಮೈಸೂರು ಹೆದ್ದಾರಿಯಲ್ಲಿ ಮೈಸೂರು ಹೊರವಲಯದಲ್ಲಿ ಫ್ಲೈ ಓವರ್‌ ನಿರ್ಮಾಣ

  • ಕುಕ್ಕರಹಳ್ಳಿ ಕೆರೆ ಹಾಗೂ ಕೆಆರ್‌ಎಸ್‌ ರಸ್ತೆ (ಮೇಟಗಳ್ಳಿ) ಬಳಿ ರೈಲ್ವೆ ಸೇತುವೆಗಳ ನಿರ್ಮಾಣlಮೈಸೂರು ಎಪಿಎಂಸಿಯಲ್ಲಿ ₹40 ಕೋಟಿ ವೆಚ್ಚದಲ್ಲಿ ಶೀತಲೀಕರಣ ಘಟಕ

  • ಎಪಿಎಂಸಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜೈವಿಕ ಇಂಧನ ಘಟಕ ನಿರ್ಮಾಣlಮೈಸೂರಿನಲ್ಲಿ ಪೆರಿಪೆರಿಯಲ್‌ ರಸ್ತೆ ನಿರ್ಮಾಣದ ಕಾರ್ಯಸಾಧ್ಯತಾ ವರದಿ ತಯಾರಿಕೆ

  • ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ₹43 ಕೋಟಿ

  • ವಿಜ್ಞಾನ ಕೇಂದ್ರ/ ತಾರಾಲಯ ಸ್ಥಾಪನೆlಮೈಸೂರು ಸಮೀಪ ಇಂಟಿಗ್ರೇಟೆಡ್‌ ಟೌನ್‌ಶಿಪ್ ನಿರ್ಮಾಣ

ಹಳೇ ಘೋಷಣೆಗಳ ಮರು ಪ್ರಸ್ತಾವ
ಮೈಸೂರು ಹೊರವರ್ತುಲ ರಸ್ತೆ ಮೇಲಿನ ಒತ್ತಡ ಹೆಚ್ಚುತ್ತಿದ್ದು ಇದಕ್ಕೆ ಪೂರಕವಾಗಿ ಪಿಪಿಪಿ ಅಥವಾ ಟೌನ್‌ ಪ್ಲಾನಿಂಗ್‌ ಮಾದರಿಯಲ್ಲಿ ಪೆರಿಫೆರಿಯಲ್‌ ರಸ್ತೆ ನಿರ್ಮಾಣಕ್ಕೆ ಸರ್ಕಾರ ಉದ್ದೇಶಿಸಿದ್ದು ಕಾರ್ಯಸಾಧ್ಯತಾ ವರದಿ ತಯಾರಿಸುವುದಾಗಿ ಹೇಳಿದೆ. ಬಿಜೆಪಿ ಸರ್ಕಾರದ ಅವಧಿಯಿಂದಲೇ ಯೋಜನೆ ಚರ್ಚೆಯಲ್ಲಿದ್ದು ಡಿಪಿಆರ್ ಸಿದ್ಧಪಡಿಸಲು ಆಗಲೂ ಅನುದಾನವನ್ನೂ ಮೀಸಲಿಟ್ಟಿತ್ತು. ಒಂದು ಡಿಪಿಆರ್ ಅಂತಿಮ ಹಂತದಲ್ಲಿದೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಟೌನ್‌ಶಿಪ್‌ ನಿರ್ಮಿಸುವುದು ಕೂಡ ಹಳೇ ಘೋಷಣೆ. ಬಸವರಾಜ ಬೊಮ್ಮಾಯಿ ಸಹ ಘೋಷಿಸಿದ್ದರು. ಆದರೆ ಪ್ರಗತಿಯಾಗಿಲ್ಲ. ಮೈಸೂರು ವಿಭಾಗದಲ್ಲಿ ಜವಳಿ ಪಾರ್ಕ್‌ ನಿರ್ಮಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಳವಾಡಿ ಸಮೀಪ 7 ಎಕರೆ ಜಾಗದಲ್ಲಿ ‘ಮೈಸೂರು ಮೆಗಾ ಸಿಲ್ಕ್‌ ಯೋಜನೆ’ ಜಾರಿ ಮಾಡುವುದಾಗಿ ಹಿಂದಿನ ಬಿಜೆಪಿ ಸರ್ಕಾರವೂ ಪ್ರಕಟಿಸಿತ್ತು. ಆದರೆ ಯಾವುದೇ ಪ್ರಗತಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT