ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020| ಉದ್ಯೋಗ ಸೃಷ್ಟಿಗಾಗಿ ಯುವ ಉದ್ಯಮಿಗಳಿಗೆ ಹೆಚ್ಚಿನ ಉತ್ತೇಜನ

ಕೇಂದ್ರ, ರಾಜ್ಯಗಳ ಅನುಮೋದನೆ ಸೇರಿ ಎಲ್ಲ ಸೌಲಭ್ಯ ಒಂದೇ ಕಡೆ: ಹೂಡಿಕೆ ತೀರುವಳಿ ಘಟಕ ಸ್ಥಾಪನೆ
Last Updated 1 ಫೆಬ್ರುವರಿ 2020, 19:34 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ‘ಉದ್ಯಮಶೀಲತೆಯೇ ದೇಶದ ಬಲ’ ಎಂದು ಪ್ರತಿಪಾದಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬದಲಾದ ಜಾಗತಿಕ ಮತ್ತು ದೇಶಿಯ ಪರಿಸ್ಥಿತಿಗೆ ಅನುಗುಣವಾಗಿ ಯುವಜನರಿಗೆ ಉದ್ಯಮವನ್ನು ಸ್ಥಾಪನೆಗೆ ಪ್ರೋತ್ಸಾಹಿಸಲು ಎಲ್ಲ ಅಗತ್ಯ ನೆರವು ಒದಗಿಸಲು ‘ಹೂಡಿಕೆ ತೀರುವಳಿ ಘಟಕ’ವನ್ನು ಸ್ಥಾಪಿಸುವ ತೀರ್ಮಾನವನ್ನು ಬಜೆಟ್‌ನಲ್ಲಿ ಪ್ರಕಟಿಸಿದರು.

‘ಯುವಜನರು ಉದ್ಯಮ ಸ್ಥಾಪನೆಗೆ ಮುಂದಾಗುತ್ತಿದ್ದಾರೆ. ಅವರಲ್ಲಿ ಕೌಶಲವಿದೆ. ಸವಾಲು ಎದುರಿಸುವ ಸಾಮರ್ಥ್ಯವಿದೆ. ಇವರುಗಳಿಗೆ ಹೂಡಿಕೆ ಪೂರ್ವದ ಸಲಹೆ, ಭೂ ಬ್ಯಾಂಕ್‌ನ ಮಾಹಿತಿ, ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಿಗಬೇಕಾದ ಅನುಮೋದನೆಯನ್ನು ಒಳಗೊಂಡಂತೆ ಎಲ್ಲ ನೆರವನ್ನು ಉದ್ದೇಶಿತ ಘಟಕವು ಒದಗಿಸಲಿದೆ. ಪೋರ್ಟಲ್‌ ಮೂಲಕ ಘಟಕ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.

2020–21ನೇ ಹಣಕಾಸು ವರ್ಷದಲ್ಲಿ, ದೇಶದಲ್ಲಿ ಉದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಮತ್ತು ಉತ್ತೇಜನ ಕಾರ್ಯಕ್ರಮಗಳಿಗೆ ಒಟ್ಟಾರೆ ₹ 27,300 ಕೋಟಿ ಕಾದಿರಿಸಲಾಗಿದೆ. ‘ಆರ್ಥಿಕ ಅಭಿವೃದ್ಧಿ’ ಧ್ಯೇಯದಡಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡಲಿದೆ ಎಂದು ಸಚಿವೆ ವಿವರಿಸಿದರು.

ಐದು ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಚಿಂತನೆ: ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕ ಕಾರಿಡಾರ್, ಉತ್ಪಾದಕ ಚಟುವಟಿಕೆಗಳಿಗೆ ಚೇತರಿಕೆ, ತಂತ್ರಜ್ಞಾನ ಮತ್ತು ಬೇಡಿಕೆ ಆಧರಿತ ವಿಭಾಗಗಳಿಂದ ಗರಿಷ್ಠ ಅನುಕೂಲ ಪಡೆಯಬೇಕಾಗಿದೆ. ಈ ಉದ್ದೇಶದಿಂದ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಐದು ನೂತನ ಸ್ಮಾರ್ಟ್‌ ಸಿಟಿ ಸ್ಥಾಪಿಸಲು ಒತ್ತು ನೀಡಲಾಗುವುದು ಎಂದರು.

ಹೆಚ್ಚಿನ ಹೂಡಿಕೆಯ ಆಕರ್ಷಿಸುವುದು ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಪೂರಕವಾಗಿ ಭಾರತಕ್ಕೆ ಪರಸ್ಪರ ಸಂಬಂಧವುಳ್ಳ ಉತ್ಪನ್ನಗಳ ನೆಟ್‌ವರ್ಕ್ ಅಗತ್ಯವಿದೆ. ಇದು, ಜಾಗತಿಕವಾಗಿಯೂ ಉತ್ಪನ್ನಗಳ ಮೌಲ್ಯ ಹೆಚ್ಚಿಸಲಿದೆ ಎಂದು ತಿಳಿಸಿದರು.

ವಿದ್ಯುನ್ಮಾನ ಉದ್ಯಮಗಳಿಗೆ ಆದ್ಯತೆ: ಭಾರತದಲ್ಲಿ ವಿದ್ಯುನ್ಮಾನ ಉತ್ಪನ್ನಗಳ ಉದ್ಯಮವು ಸ್ಪರ್ಧಾತ್ಮಕವಾಗಿದೆ. ಉದ್ಯೋಗ ಸೃಷ್ಟಿಗೂ ಹೆಚ್ಚಿನ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ದೇಶಿಯ ಉತ್ಪಾದನೆಗೆ ಒತ್ತು ನೀಡುವ, ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಆಕರ್ಷಿಸುವ ಅಗತ್ಯವಿದೆ ಎಂದರು.

ಇದಕ್ಕೆ ಪೂರಕವಾಗಿ ಮೊಬೈಲ್‌ ಫೋನ್‌ಗಳು, ವಿದ್ಯುನ್ಮಾನ ಪರಿಕರಗಳು, ಸೆಮಿ ಕಂಡಕ್ಟರ್‌ ಪ್ಯಾಕೇಜಿಂಗ್ ಉದ್ಯಮಗಳ ಸ್ಥಾಪನೆಗೆ ಪ್ರತ್ಯೇಕ ಯೋಜನೆಯನ್ನು ರೂಪಿಸಲಿದ್ದು, ವಿವರಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಹೇಳಿದರು. ಭಾಗಶಃ ಪರಿಷ್ಕರಣೆಯೊಂದಿಗೆ ಈ ಯೋಜನೆಯನ್ನು ಉತ್ಪಾದನೆ ಮತ್ತು ವೈದ್ಯಕೀಯ ಪರಿಕರಗಳ ಉದ್ಯಮಕ್ಕೂ ಅನ್ವಯಿಸಬಹುದಾಗಿದೆ ಎಂದರು.

ರಾಷ್ಟ್ರೀಯ ಜವಳಿ ತಂತ್ರಜ್ಞಾನ ಮಿಷನ್: ಭಾರತ ಸದ್ಯ ವಾರ್ಷಿಕ ₹ 1,600 ಕೋಟಿ ಮೌಲ್ಯದ ಜವಳಿ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಪ್ರಮಾಣವನ್ನು ಕುಗ್ಗಿಸಿ, ದೇಶವನ್ನು ಮುಂಚೂಣಿಗೆ ತರುವ ಉದ್ದೇಶದಿಂದ ‘ರಾಷ್ಟ್ರೀಯ ಜವಳಿ ತಂತ್ರಜ್ಞಾನ ಮಿಷನ್‌’ ಸ್ಥಾಪಿಸಲಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಯೋಜನೆಗೆ ಜಾರಿಗೆ ₹ 1,480 ಕೋಟಿ ಕಾದಿರಿಸಲಾಗಿದೆ.

ಉತ್ಪಾದನೆಯಲ್ಲಿ ಗುಣಮಟ್ಟಕ್ಕೆ ಒತ್ತು ನೀಡುವ ಉದ್ದೇಶದಿಂದ ಇನ್ನು ಮುಂದೆ ಎಲ್ಲ ಆದೇಶಗಳಲ್ಲಿಯೂ ನಿರ್ದಿಷ್ಟ ಗುಣಮಟ್ಟದ ಮಾನದಂಡವನ್ನು ಉಲ್ಲೇಖಿಸಲಿದ್ದಾರೆ ಎಂದು ಸಚಿವೆ ಸ್ಪಷ್ಟಪಡಿಸಿದರು.

ಡಿಜಿಟಲ್‌ ಪಾವತಿಗೆ ಕ್ರಮ: ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಹಂತದಲ್ಲಿ ವಿಧಿಸಲಾಗುವ ತೆರಿಗೆ, ಸುಂಕದ ಮರು ಪಾವತಿಯನ್ನು ಡಿಜಿಟಲ್‌ ಸ್ವರೂಪದಲ್ಲಿ ನಿರ್ವಹಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈ ವರ್ಷ ಯೋಜನೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಇ–ಮಾರ್ಕೇಟ್‌ಪ್ಲೇಸ್‌: ಸರ್ಕಾರದ ಈ ಮಾರ್ಕೇಟ್‌ ಪ್ಲೇಸ್‌ ಉತ್ಪನ್ನ, ಸೇವೆ ಮತ್ತು ಪರಿಕರಗಳನ್ನು ಒಂದೇ ಕಡೆ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಇದು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿದ್ದು ಈಗಾಗಲೇ 3.24 ಲಕ್ಷ ವ್ಯಾಪಾರಿಗಳು ನೋಂದಣಿ ಆಗಿದ್ದಾರೆ. ವಾರ್ಷಿಕ ₹ 3 ಲಕ್ಷ ಕೋಟಿ ವಹಿವಾಟು ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಕ್ವಾಂಟಮ್‌ ತಂತ್ರಜ್ಞಾನ ಅಭಿವೃದ್ಧಿಗೆ ₹ 8000 ಕೋಟಿ

ನವದೆಹಲಿ: ಕ್ವಾಂಟಮ್‌ ತಂತ್ರಜ್ಞಾನ ಆಧಾರಿತ ಅಪ್ಲಿಕೇಷನ್‌ಗಳ ಅಭಿವೃದ್ಧಿ ಮತ್ತು ಈ ಕ್ಷೇತ್ರಕ್ಕೆ ಉತ್ತೇಜನ ನೀಡಲು ಒಟ್ಟಾರೆ ₹ 8,000 ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕಂಪ್ಯೂಟಿಂಗ್, ಸಂವಹನ, ಸೈಬರ್ ಭದ್ರತೆಗೆ ಅನ್ವಯಿಸಿದ ತಂತ್ರಜ್ಞಾನ ಪ್ರವರ್ಧಮಾನಕ್ಕೆ ಬರುತ್ತಿದೆ. ಇದಕ್ಕೆ ಉತ್ತೇಜನ ನೀಡಲು ಮುಂದಿನ ಐದು ವರ್ಷಗಳಲ್ಲಿ ‘ನ್ಯಾಷನಲ್‌ ಮಿಷನ್ ಆನ್‌ ಕ್ವಾಂಟಮ್‌ ಟೆಕ್ನಾಲಜಿ ಅಂಡ್‌ ಅಪ್ಲಿಕೇಷನ್‌’ ಅಡಿ ₹ 8,000 ಕೋಟಿ ವ್ಯಯಿಸಲಾಗುತ್ತದೆ.

ಕಂಪ್ಯೂಟರ್‌ ತಂತ್ರಜ್ಞಾನ ಅನ್ವಯಿಸಬಹುದಾದ ಸಂಭವನೀಯ 27 ಸಂಭವನೀಯ ಕ್ಷೇತ್ರಗಳಿಗೆ ಅನ್ವಯಿಸಿ ಜಂಟಿ ಸಂಶೋಧನೆ ಕೈಗೊಳ್ಳಲು ಇಸ್ರೇಲ್‌ ಜೊತೆಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಹಿ ಹಾಕಿದೆ.

ಕ್ವಾಂಟಮ್‌ ಕಂಪ್ಯೂಟರ್‌ಗಳು ಭೌತವಿಜ್ಞಾನದ ತತ್ವ ಆಧಾರದಲ್ಲಿ ಕಾರ್ಯ ನಿರ್ವಹಿಸಲಿವೆ. ಈಗಿನ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ವರ್ಷಗಳಾದರೆ, ಕ್ವಾಂಟಮ್‌ ಕಂಪ್ಯೂಟರ್‌ಗಳಲ್ಲಿ ಗಂಟೆ, ದಿನಗಳಲ್ಲಿಯೇ ಬಗೆಹರಿಸಬಹುದು ಎಂಬುದು ಇದರ ಅನುಕೂಲ.

***

ತುಂಬಾ ಒಳ್ಳೆಯ ಬಜೆಟ್‌. ಆಕಾಂಕ್ಷೆಯುಳ್ಳ, ಅಭಿವೃದ್ಧಿಗೆ ಪೂರಕವಾದ ಮತ್ತು ಸಾಮಾನ್ಯ ಜನರಿಗೆ ಸವಲತ್ತಿನ ಪ್ರಮಾಣ ಹೆಚ್ಚಿಸುವ ಬಜೆಟ್ ಇದಾಗಿದೆ. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದೆ. ತೆರಿಗೆ ಪಾವತಿ ವಿಧಾನವನ್ನೂ ಸರಳಗೊಳಿಸಲಾಗಿದೆ. ಆರ್ಥಿಕ ಹಿಂಜರಿತ ಸರಿಪಡಿಸುವ ಉಪಾಯಗಳೂ ಈ ಬಜೆಟ್‌ನಲ್ಲಿ ಇವೆ
–ಎಸ್‌. ಸಂಪತ್‌ರಾಮ್, ಅಸೊಚಾಮ್ ರಾಜ್ಯ ಘಟಕದ ಅಧ್ಯಕ್ಷ

*
ಭಾರತೀಯ ಆರ್ಥಿಕತೆಗೆ ಮತ್ತೆ ಚೈತನ್ಯ ತುಂಬಲಿರುವ ಕೇಂದ್ರ ಬಜೆಟ್ಅನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ. ದೇಶದ ಆರ್ಥಿಕತೆ ಸದೃಢಗೊಳಿಸುವುದು ಮತ್ತು ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ದೊರೆತಿದೆ. ಆರ್ಥಿಕ ಹಿಂಜರಿತದಿಂದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಚೇತರಿಸಿಕೊಳ್ಳಲು ಸ್ವಾಗತಾರ್ಹ ಹೆಜ್ಜೆಗಳನ್ನು ಕೇಂದ್ರ ಸರ್ಕಾರ ಇಟ್ಟಿದೆ.
–ಸಿ.ಆರ್. ಜನಾರ್ದನ್, ಎಫ್‌ಕೆಸಿಸಿಐ ಅಧ್ಯಕ್ಷ

*
ಸಂಪತ್ತು ಸೃಷ್ಟಿಸುವವರನ್ನು ಗೌರವಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಈ ಮಾತು ವಾಣಿಜ್ಯ ಹಾಗೂ ಉದ್ದಿಮೆ ವಲಯದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ದೇಶದ ಆರ್ಥಿಕ ವೃದ್ಧಿಯಲ್ಲಿ ಹೊಸ ತಲೆಮಾರಿನ ಉದ್ಯಮಿಗಳು ಹಾಗೂ ಕಾರ್ಪೊರೇಟ್ ವಲಯ ಹುಮ್ಮಸ್ಸಿನಿಂದ ಪಾಲ್ಗೊಳ್ಳುವಂತೆ ಪ್ರೇರೇಪಿಸಿದೆ.
– ಸುನಿಲ್ ಮಿತ್ತಲ್, ಭಾರ್ತಿ ಎಂಟರ್‌ಪ್ರೈಸಸ್ ಮುಖ್ಯಸ್ಥ

*
ಆರ್ಥಿಕತೆ ಚೇತರಿಕೆಗೆ ಪ್ರಬಲ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ, ಕೈಗಾರಿಕೆ ವಲಯದ ನಿರೀಕ್ಷೆಗಳನ್ನುಬಜೆಟ್ ತಲುಪಿಲ್ಲ. ಅಭಿವೃದ್ಧಿಗೆ ಇಂಬು ನೀಡುವ ಯಾವುದೇ ಮಹತ್ವದ ಘೋಷಣೆಗಳನ್ನು ಮಾಡಲಾಗಿಲ್ಲ.
– ಶಿಶಿರ್ ಬೈಜಾಲ್, ನೈಟ್‌ ಫ್ರಾಂಕ್ ಇಂಡಿಯಾ ಮುಖ್ಯಸ್ಥ

*
ಕೃಷಿ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಕಡೆಗೆ ಕೇಂದ್ರ ಬಜೆಟ್ ಗಮನ ಹರಿಸಿದ್ದು, ಎಲ್ಲ ಕ್ರಮಗಳು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕಾರ್ಯರೂಪಕ್ಕೆ ಬಂದರೆ ಪರಿಣಕಾರಿ ಎನಿಸಲಿದೆ. ಇದು ಗ್ರಾಮೀಣ ಭಾಗದ ದ್ವಿಚಕ್ರವಾಹನ, ಟ್ರ್ಯಾಕ್ಟರ್, ಚಿಕ್ಕ ವಾಣಿಜ್ಯ ವಾಹನಗಳು ಸೇರಿದಂತೆ ಆಟೊಮೊಬೈಲ್ ಬೇಡಿಕೆಯನ್ನು ಭರ್ತಿ ಮಾಡಲಿದೆ.
– ಅಶೀಶ್ ಕಾಳೆ, ಆಟೊಮೊಬೈಲ್ ಡೀಲರ್ಸ್ ಸಂಘಟನೆ ಮುಖ್ಯಸ್ಥ

*
ಬಜೆಟ್ ದಿಕ್ಕು ಪ್ರಗತಿಪರವಾಗಿದ್ದರೂ, ನಿರ್ಮಾಣ ಕ್ಷೇತ್ರಕ್ಕೆ ನಿರ್ದಿಷ್ಟ ಕ್ರಮಗಳು ಇಲ್ಲ. ‘ಕೈಗೆಟುಕುವ ಮನೆ’ ವಲಯಕ್ಕೆ ತೆರಿಗೆ ಲಾಭ ಘೋಷಿಸಿರುವುದು ಬೇಡಿಕೆ ಹಾಗೂ ಪೂರೈಕೆಯನ್ನು ಹೆಚ್ಚಿಸಲಿದೆ. ಬಾಡಿಗೆ ಮನೆ ನೀತಿ, ಕೈಗೆಟುಕುವ ಮನೆ ವ್ಯಾಖ್ಯೆ ಬದಲಿಸಲಾಗುತ್ತದೆ ಎಂದು ರಿಯಲ್‌ ಎಸ್ಟೇಟ್‌ ವಲಯ ದೊಡ್ಡ ನಿರೀಕ್ಷೆಯೊಂದಿಗೆ ಕಾಯುತ್ತಿತ್ತು.
– ಜಕ್ಷಯ್ ಶಾ, ಕ್ರೆಡಾಯ್ ರಾಷ್ಟ್ರೀಯ ಮುಖ್ಯಸ್ಥ

***

₹ 27,300 ಕೋಟಿ:ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಉತ್ತೇಜನಕ್ಕೆ

₹ 1480 ಕೋಟಿ: ‘ರಾಷ್ಟ್ರೀಯ ಜವಳಿ ತಂತ್ರಜ್ಞಾನ ಮಿಷನ್‌‘ನಡಿ ನಾಲ್ಕು ವರ್ಷಗಳಲಲ್ಲಿ ವೆಚ್ಚ

5 ಸ್ಮಾರ್ಟ್‌ ಸಿಟಿ:ರಾಜ್ಯಗಳ ಸಹಯೋಗದಲ್ಲಿ ಅಭಿವೃದ್ಧಿಗೆ ಚಿಂತನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT